Saturday, 28th December 2024

Viral News: ರೋಟಿ ನೀಡುವುದು ತಡವಾಯಿತೆಂದು ಮದುವೆ ಮುರಿದುಕೊಂಡ ವರ; ಠಾಣೆ ಮೆಟ್ಟಿಲೇರಿದ ವಧು!

ಲಖನೌ: ಉತ್ತರಪ್ರದೇಶದ (Uttar Pradesh) ಚಂದೌಲಿ (Chandauli) ಜಿಲ್ಲೆಯಲ್ಲಿರುವ ಹಮಿದ್‌ಪುರ್ (Hamidpur) ಗ್ರಾಮದಲ್ಲಿ ನಡೆದಿರುವ ಘಟನೆಯೊಂದು ಇದೀಗ ಎಲ್ಲೆಡೆ ವೈರಲ್ (Viral News) ಆಗುತ್ತಿದೆ. ತನ್ನ ಕಡೆಯವರಿಗೆ ಮದುವೆ ಊಟ ಹಾಕುವುದು ತಡವಾಯಿತೆಂದು ಆರೋಪಿಸಿ ವರ ಮದುವೆ ಮನೆಯಿಂದಲೇ ಹೊರ ನಡೆದು ಮದುವೆಯನ್ನೇ ಮುರಿದುಕೊಂಡ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇದೀಗ ವಧು ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ದೂರು ದಾಖಲಿಸಿದ್ದಾಳೆ.

ವರದಿಗಳ ಪ್ರಕಾರ, ಮೆಹ್ತಾಬ್ ಎಂಬ ಯುವಕನೊಂದಿಗೆ ವಧುವಿನ ವಿವಾಹ ಏಳು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ಡಿ. 22ರಂದು ಮದುವೆ ವಿಧಿವಿಧಾನಗಳು ಪ್ರಾರಂಭಗೊಂಡಿದ್ದವು. ವಧುವಿನಕ ಕಡೆಯವರು ಬೀಗರನ್ನು ಸಿಹಿ ಮತ್ತು ಇತರ ವಿಶೇಷತೆಗಳೊಂದಿಗೆ ಸ್ವಾಗತಿಸಲು ಸಜ್ಜಾಗಿದ್ದರು. ಬಳಿಕ ಬೀಗರೂಟಕ್ಕೂ ಭರ್ಜರಿ ತಯಾರಿ ನಡೆಸಲಾಗಿತ್ತು. ಆದರೆ ಈ ಸಂದರ್ಭದಲ್ಲೇ ವರನ ಕಡೆಯವರೊಬ್ಬರು ಖ್ಯಾತೆ ತೆಗೆದಿದ್ದು, ರೋಟಿ ಬಡಿಸುವುದು ತಡವಾಯಿತೆಂದು ಗಲಾಟೆ ಎಬ್ಬಿಸಿದ್ದಾರೆ.

ಈ ವಿಚಾರದಲ್ಲಿ ಗಲಾಟೆ ಜೋರಾಗುತ್ತಿದ್ದಂತೆ ವಧುವಿನ ಕಡೆಯವರು ವರನ ಕಡೆಯವರನ್ನು ಪರಿಪರಿಯಾಗಿ ಸಮಾಧಾನಿಸಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಇಷ್ಟೊತ್ತಿಗಾಗಲೇ ವಧುವಿನ ಕಡೆಯವರನ್ನು ನಿಂದಿಸುತ್ತಲೇ ವರ ಅಲ್ಲಿಂದ ಮಾಯವಾಗಿದ್ದಾನೆ.

ಬಳಿಕ ತಿಳಿದುಬಂದ ವಿಚಾರವೆಂದರೆ, ಆ ವರ ತನ್ನ ಸಂಬಂಧಿಯನ್ನೇ ವಿವಾಹವಾಗಿಬಿಟ್ಟಿದ್ದ. ಆದರೆ ಇಲ್ಲಿ ಹೊಸಜೀವನದ ಕನಸು ಕಾಣುತ್ತಿದ್ದ ಈ ವಧು ಇದೀಗ ತಾನು ಮಾಡದ ತಪ್ಪಿಗೆ ಕಣ್ಣೀರು ಹಾಕುವಂತಾಗಿದೆ.

ಈ ಎಲ್ಲ ಘಟನೆಗಳಿಂದ ಆಘಾತಕ್ಕೊಳಗಾದ ವಧುವಿನ ಕುಟುಂಬದವರು ನೇರವಾಗಿ ಇಂಡಸ್ಟ್ರಿಯಲ್ ನಗರ್ ಪೊಲೀಸ್ ಠಾಣೆಗೆ ತೆರಳಿ ವರನ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ ಅಲ್ಲಿ ಅವರಿಗೆ ಸೂಕ್ತ ನೆರವು ಸಿಗದೇ ಇದ್ದಾಗ ಅವರೀಗ ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ತಮ್ಮ ಮಗಳಿಗಾದ ಅನ್ಯಾಯದ ಕುರಿತಾಗಿ ದೂರು ಸಲ್ಲಿಸಿದ್ದಾರೆ.

ಈ ವರ ಮಹಾಶಯ ಈಗಾಗಲೇ ವಧುವಿನ ಕಡೆಯಿಂದ 1.5 ಲಕ್ಷ ರೂ. ವರದಕ್ಷಿಣೆ ಪಡೆದುಕೊಂಡಿದ್ದಾನೆ ಮತ್ತು ಈ ಮದುವೆ ಮುರಿದ ಕಾರಣದಿಂದ ನಮಗೆ ಒಟ್ಟು 7 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ವಧುವಿನ ಕಡೆಯವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಅಮಾಯಕ ಕ್ಯಾಬ್ ಚಾಲಕನ ಮೇಲೆ ಯುವಕರ ಪುಂಡಾಟ; ಆರೋಪಿಗಳ ಕಾರಿನಲ್ಲಿತ್ತು ಬಿಜೆಪಿ ಧ್ವಜ, ವಿಐಪಿ ಸೈರನ್!

ವರನ ಕಡೆಯ ಐದು ಜನರ ವಿರುದ್ಧ ಎಫ್.ಐ.ಆರ್. ದಾಖಲಿಸುವಂತೆ ವಧು ಇದೀಗ ಎಸ್.ಪಿ. ಅವರಲ್ಲಿ ವಿನಂತಿಸಿಕೊಂಡಿದ್ದಾಳೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಗಳನ್ನು ಈಗಾಗಲೇ ವಧುವಿನ ಕಡೆಯವರು ಕೈಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವಧುವಿನ ಸಹೋದರ ರಾಜು ಮಾತನಾಡಿ, ಎಸ್.ಪಿ.ಯವರು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಹಾಗೂ ಪೊಲೀಸರಿಗೆ ಸಂತ್ರಸ್ತ ಕುಟುಂಬವನ್ನು ಭೆಟಿಯಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸ್ಥಳೀಯ ಪೊಲೀಸರ ನಿರ್ಲಕ್ಷ್ಯತನದ ಬಗ್ಗೆ ರಾಜು ಖೇದ ವ್ಯಕ್ತಪಡಿಸಿದ್ದಾನೆ.

ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಆದ್ಯತೆ ಮೇಲೆ ದೂರು ದಾಖಲಿಸಿಕೊಳ್ಳಲು  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತೀ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಹೆಲ್ಪ್ ಡೆಸ್ಕ್ ಸ್ಥಾಪಿಸಲು ಸೂಚಿಸಿರುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.