Friday, 10th January 2025

Viral News: ಸೇನೆಯಲ್ಲಿ ಕ್ಯಾಪ್ಟನ್‌ ಎಂದು ಹೇಳಿಕೊಂಡು ಮಹಿಳೆಯರಿಗೆ ವಂಚನೆ- ಕಿರಾತಕ ಪೊಲೀಸರ ಬಲೆಗೆ!

ಲಖನೌ: ಸೇನಾ ಕ್ಯಾಪ್ಟನ್‌ ಸೋಗಿನಲ್ಲಿ ಸಾಕಷ್ಟು ಮಹಿಳೆಯರನ್ನು ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ. ಖದೀಮನ ಸುದ್ದಿ ಇದೀಗ ಭಾರೀ ವೈರಲ್‌ ಆಗಿದೆ(Viral News)

ಮೂಲತಃ ಒಡಿಶಾದ(Odisha) ಬಾಲಸೋರ್( Balasore) ಜಿಲ್ಲೆಯವನಾದ ಹೈದರ್ ಅಲಿ(Haider Ali) ತನ್ನನ್ನು ತಾನು ಆರ್ಮಿ ಮೆಡಿಕಲ್ ಕಾರ್ಪ್ಸ್‌ನ ಅಧಿಕಾರಿ ಹಾರ್ತಿಕ್ ಬೆಗ್ಲೋ ಎಂದು ಪರಿಚಯಿಸಿಕೊಂಡು ಸಾಕಷ್ಟು ಮಹಿಳೆಯರನ್ನು ವಂಚಿಸಿದ್ದಾನೆ. ಮಹಿಳೆಯರೊಂದಿಗೆ ಸಂಬಂಧ ಬೆಳೆಸಿಕೊಳ್ಳಲು ಫೋನ್‌ ಕರೆಗಳಲ್ಲಿ ನಾಟಕೀಯದ ಮಾತುಗಳನ್ನಾಡಿದ್ದಾನೆ. ಅಷ್ಟೇ ಅಲ್ಲದೆ ನಾನಾ ಕಾರಣಗಳನ್ನು ಹೇಳಿ ಮಹಿಳೆಯರಿಂದ ಲಕ್ಷಗಟ್ಟಲೆ ಹಣ ವಂಚಿಸಿದ್ದಾನೆ. ಹಣ ಸಿಕ್ಕ ಕೂಡಲೇ ಹಲವರ ಫೋನ್‌ ನಂಬರ್‌ ಬ್ಲಾಕ್‌ ಮಾಡಿ ಬೇರೆ ರಾಜ್ಯಕ್ಕೆ ತೆರಳುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರ್‌ ಅಲಿ ವಂಚನೆಯಿಂದ ಗಳಿಸಿದ ಹಣದಿಂದ ಐಷಾರಾಮಿ ಜೀವನವನ್ನು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಲಖನೌ ಮಹಿಳೆಯೊಬ್ಬರನ್ನು ವಂಚಿಸುವ ವೇಳೆ ಈತ ಸಿಕ್ಕಿಬಿದ್ದಿದ್ದಾನೆ. ಅವನ ಅದೃಷ್ಟ ಕೈಕೊಟ್ಟಿದೆ. ಇವನಿಂದ ವಂಚನೆಗೆ ಒಳಗಾದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯ ವೇಳೆ ವಂಚಕ ಹೈದರ್ ಅಲಿ ಹೈದರಾಬಾದ್, ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಭದ್ರತಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸೋಗಿನಲ್ಲಿ ವಂಚಿಸಿರುವ ವಿಷಯ ಬಟಾಬಯಲಾಗಿದೆ.

ಆತ ಸೇನಾ ಸಮವಸ್ತ್ರದಲ್ಲಿರುವ ಫೋಟೊಗಳನ್ನು ನಕಲಿ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಪೋಸ್ಟ್‌ ಮಾಡಿದ್ದಾನೆ. ಇನ್‌ಸ್ಟಾಗ್ರಾಮ್ನಲ್ಲಿ ‘ಇಂಡಿಯನ್‌ಕಮ್ಮಂಡೋಹಾರಿಕ್’, ‘ಅರ್ಮಾನ್‌ಬೆಗ್ಲೋ’, ‘ಆರ್ಮಿಬೆಗ್ಲೋ’, ‘ಸೋಲ್ಜರ್ಸ್3889’ ಎಂದು ಪೋಸ್ಟ್ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಹೈದರ್ ಅಲಿಯಿಂದ ಸೇನಾ ಸಮವಸ್ತ್ರ, ತ್ರಿ-ಸ್ಟಾರ್ ಫ್ಲಾಪ್, ಆರ್ಮಿ ಬೆರೆಟ್, ನಕಲಿ ಆಧಾರ್ ಕಾರ್ಡ್, ಆರ್ಮಿ ಕ್ಯಾಂಟೀನ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವನು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾನೆಯೇ ಎಂದು ತಿಳಿದುಕೊಳ್ಳಲು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೈದರ್‌ ಅಲಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿ ನಂತರ ಹಣವನ್ನು ವಂಚಿಸಿದ್ದಾನೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿಪುನ್ ಅಗರ್ವಾಲ್ ಹೇಳಿದ್ದಾರೆ. “ನಾವು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದೇವೆ. ಆತನ ಮೂಲ ಹೆಸರು ಹೈದರ್ ಅಲಿ ಬೇಗ್. ಆತ ತನ್ನ ಧರ್ಮವನ್ನು ಮರೆಮಾಚಿಕೊಂಡು ಹಾರ್ದಿಕ್ ಬೆಗ್ಲೋ ಎಂದು ಪರಿಚಯಿಸಿಕೊಂಡಿದ್ದಾನೆ ಮತ್ತು ಹಲವಾರು ಮಹಿಳೆಯರನ್ನು ವಂಚಿಸಿದ್ದಾನೆ. ಅವನು ಕಾರುಗಳನ್ನು ಫೈನಾನ್ಸಿಂಗ್ ಗೆ ಕೊಡುವಂತೆ ಮೊದ ಮೊದಲು ಮಾತನಾಡುತ್ತಾನೆ. ದೊಡ್ಡ ಮೊತ್ತದ ಹಣವನ್ನು ಸಾಲದ ರೂಪದಲ್ಲಿ ಪಡೆಯುತ್ತಾನೆ. ಅವನು ಇಲ್ಲಿಯವರೆಗೆ ನಾಲ್ವರು ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚಿಸಿದ್ಧಾನೆ. ನಾವು ಅವನ ಕರೆಯ ದಾಖಲೆಗಳನ್ನು ಟ್ರ್ಯಾಕ್ ಮಾಡುತ್ತಿದ್ದೇವೆ, ”ಎಂದು ಅಧಿಕಾರಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Naxals surrender: ನಕ್ಸಲರ ಶರಣಾಗತಿ ಸ್ಥಳದಲ್ಲಿ ಬದಲಾವಣೆ; ಸಿಎಂ ಗೃಹ ಕಚೇರಿಯಲ್ಲಿ ಇಂದು ಸರೆಂಡರ್‌

Leave a Reply

Your email address will not be published. Required fields are marked *