ಇದೊಂಥರಾ ಹೆತ್ತ ಕರುಳಿನ ಕಥೆ! 20 ವರ್ಷಗಳ ಹಿಂದೆ ತನ್ನ ಹೆತ್ತವರಿಂದ ಬೇರ್ಪಟ್ಟು ಭಾರತವನ್ನೇ ಬಿಟ್ಟು ಸ್ಪೇನ್ (Spain) ದೇಶದ ದಂಪತಿಯ ಸಾಕು ಮಗಳಾಗಿ ಆ ದೇಶಕ್ಕೆ ಹೋಗಿದ್ದ ಯುವತಿಯೊಬ್ಬಳು ಇದೀಗ ತನ್ನ ಹೆತ್ತ ತಾಯಿಯನ್ನು ಅರಸಿಕೊಂಡು ಒಡಿಶಾಗೆ (Odisha) ಬಂದಿರುವ ಮಮತೆಯ ಕಥೆಯೊಂದು ಸೋಷಿಯಲ್ ಮೀಡಿಯಾದಲ್ಲಿ (Social Media) ಟ್ರೆಂಡಿಂಗ್‌ನಲ್ಲಿದ್ದು ಸಿಕ್ಕಾಪಟ್ಟೆ ವೈರಲ್ (Viral News) ಆಗುತ್ತಿದೆ. ಭಾರತದಲ್ಲಿ ತನ್ನ ಹೆತ್ತ ತಾಯಿಯ ಹುಡುಕಾಟದಲ್ಲಿರುವ ಸ್ನೇಹಾಳಿಗೆ ಇನ್ನು ಉಳಿದಿರುವುದು 24 ಗಂಟೆ ಮಾತ್ರ.. ಯಾಕೆ? ಏನು? ಅಂತ ನಾವು ಹೇಳ್ತೀವಿ ಕೇಳಿ..!
ಸ್ಪೇನ್‌ನಲ್ಲಿ ಮಕ್ಕಳ ಶಿಕ್ಷಣ ವಿಷಯದಲ್ಲಿ ಸಂಶೋಧಕಿಯಾಗಿರುವ ಸ್ನೇಹಾ ಎಂಬ ಯುವತಿಯೇ ಈ ರೀತಿಯಾಗಿ ತನ್ನ ಹೆತ್ತ ತಾಯಿಯನ್ನು ಅರಸಿಕೊಂಡು ಭಾರತಕ್ಕೆ ಬಂದಿರುವ ಯುವತಿ. ತನ್ನ ಬಾಲ್ಯದ ಬಗ್ಗೆ ಸ್ವಲ್ಪ ಮಾಹಿತಿಯನ್ನು ಮಾತ್ರವೇ ಇಟ್ಟುಕೊಂಡು ಈ ಸ್ನೇಹಾ ತನ್ನ ಹೆತ್ತ ತಾಯಿಯನ್ನು ಹುಡುಕುವ ನಿರ್ಧಾರಕ್ಕೆ ಬಂದಿದ್ದಾಳೆ. ಈ ವಿಷಯದಲ್ಲಿ ಆಕೆಯ ಪಾಲಕರಾದ ಸ್ಪ್ಯಾನಿಶ್ ದಂಪತಿ ಜೆಮಾ ವಿಡಾಲ್ ಮತ್ತು ಜುವಾನ್ ಜೊಶ್ ಸಹ ಬೆಂಬಲವಾಗಿ ನಿಂತಿದ್ದಾರೆ. ಮತ್ತು ಆಕೆಯ ಜೊತೆ ಭಾರತಕ್ಕೆ ಬಂದು ಆಕೆಯ ಹೆತ್ತ ತಾಯಿಯನ್ನು ಹುಡುಕಲು ಆಕೆಗೆ ನೆರವಾಗುವ ಮೂಲಕ ಮಾನವೀಯತೆಗೊಂದು ಹೊಸ ಭಾಷ್ಯವನ್ನು ಬರೆದಿದ್ದಾರೆ.
ಈ ಸ್ಪ್ಯಾನಿಷ್ ದಂಪತಿ 2010ರಲ್ಲಿ ಒಡಿಸ್ಸಾದ ಭುವನೇಶ್ವರದಲ್ಲಿರುವ (Bhubaneswar) ಅನಾಥಾಶ್ರಮವೊಂದರಿಂದ ಸ್ನೇಹಾ ಮತ್ತು ಆಕೆಯ ಸಹೋದರ ಸೋಮುವನ್ನು ದತ್ತು ಪಡೆದುಕೊಂಡಿದ್ದರು. ಈ ಸಹೋದರ, ಸಹೋದರಿಯರನ್ನು ಅವರ ಹೆತ್ತವರು 2005ರಲ್ಲಿ ಈ ಅನಾಥಾಶ್ರಮದಲ್ಲಿ ತೊರೆದು ಹೋಗಿದ್ದರು. ಆ ಸಂದರ್ಭದಲ್ಲಿ ಸ್ನೇಹಾಳಿಗೆ ಕೇವಲ ಒಂದು ವರ್ಷ ಪ್ರಾಯವಾಗಿತ್ತಷ್ಟೇ!
‘ಸ್ಪೈನ್ ನಿಂದ ಭುವನೆಶ್ವರಕ್ಕೆ ನನ್ನ ಪ್ರಯಾಣದ ಉದ್ದೇಶವೇ ನನ್ನ ಹೆತ್ತವರನ್ನು ಕಂಡುಹಿಡಿದು ಅವರನ್ನೊಮ್ಮೆ ಭೇಟಿಯಾಗುವುದಾಗಿದೆ. ಮುಖ್ಯವಾಗಿ ನನ್ನ ಅಮ್ಮನನ್ನು ನಾನು ನೋಡಬೇಕು. ನಾನು ಆಕೆಯನ್ನು ಪತ್ತೆ ಹಚ್ಚಿ ಆಕೆಯನ್ನೊಮ್ಮೆ ಭೇಟಿಯಾಗಬೇಕು. ಈ ಪ್ರಯಾಣ ಎಷ್ಟೇ ಕಷ್ಟಕರವಾಗಿದ್ದರೂ ನಾನಿದಕ್ಕೆ ಸಂಪೂರ್ಣವಾಗಿ ಸಿದ್ಧಳಾಗಿದ್ದೇನೆ’ ಎಂದು ಸ್ನೇಹಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾಳೆ.
ಇದೀಗ ಭುವನೆಶ್ವರದಲ್ಲಿರುವ ಸ್ನೇಹಾಳ ಬಳಿ ಹೆಚ್ಚಿನ ಸಮಯವಿಲ್ಲ. ಆಕೆ ತನ್ನ ಶಿಕ್ಷಣದ ಉದ್ದೇಶಕ್ಕಾಗಿ ಶೀಘ್ರವೇ ಸ್ಪೈನ್ ಗೆ ಮರಳಬೇಕಿದೆ. ಒಂದುವೇಳೆ ತನ್ನ ತಾಯಿ ಸಿಕ್ಕಿದರೆ ಆಕೆ ಏನು ಮಾಡುತ್ತಾಳೆ ಎಂಬ ಪ್ರಶ್ನೆಗೆ ಸ್ನೇಹಾ ತನ್ನ ಭಾವನೆಯನ್ನು ಹಂಚಿಕೊಳ್ಳಲು ಬಯಸಿಲ್ಲ. ಎಷ್ಟಾದರೂ ತಾಯಿ-ಮಗಳ ಮಮತೆಯೆಂಬುದು ಅವ್ಯಕ್ತ ತಾನೆ..!?
‘ಸ್ನೇಹಾ ಒಂದು ತರಬೇತು ಕಾರ್ಯಕ್ರಮಕ್ಕೆ ಸೇರಿಕೊಂಡಿರುವುದರಿಂದ ಮತ್ತು ಅದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದೇ ಇರುವುದರಿಂದ, ನಾವು ಶಿಘ್ರದಲ್ಲೇ ಸ್ಪೈನ್ ಗೆ ಹಿಂತಿರುಗಬೇಕಿದೆ. ಮುಂದಿನ 24 ಗಂಟೆಗಳಲ್ಲಿ ನಾವು ಆಕೆಯ ಹೆತ್ತವರನ್ನು ಹುಡುಕಲು ಸಾಧ್ಯವಾಗದಿದ್ದಲ್ಲಿ, ನಾವು ಮತ್ತೆ ಮಾರ್ಚ್ ನಲ್ಲಿ ಭುವನೇಶ್ವರಕ್ಕೆ ಮರಳಿ ಬರುತ್ತೇವೆ’ ಎಂದು ಸ್ನೇಹಾಳ ಸಾಕು ತಾಯಿ ಹೇಳಿಕೊಂಡಿದ್ದಾರೆ.
ಸ್ನೇಹಾಳನ್ನು ಹೆತ್ತ ತಾಯಿ ಬನಲಾಟ ಎಂಬಾಕೆ, ಈಕೆಯನ್ನು ಮತ್ತು ಈಕೆಯ ಸಹೋದರನನ್ನು ಭುವನೇಶ್ವರದ ನಯಾಪಳ್ಳು ಎಂಬಲ್ಲಿನ ಬಾಡಿಗೆ ಮನೆಯಲ್ಲಿ 2005ರಲ್ಲಿ ತೊರೆದು ಹೋಗಿದ್ದರು. ಈಕೆಯ ಗಂಡ, ಈ ಮೊದಲೇ ತನ್ನ ಹೆಂಡತಿ ಮತ್ತು ಸ್ನೇಹಾ ಸಹಿತ ನಾಲ್ವರು ಮಕ್ಕಳನ್ನು ತೊರೆದು ಹೋಗಿದ್ದ.
ಈ ಸುದ್ದಿಯನ್ನೂ ಓದಿ: frozen lake: ಹೆಪ್ಪುಗಟ್ಟಿದ್ದ ಸರೋವರದ ಮಧ್ಯೆ ಸಿಲುಕಿಕೊಂಡಿದ್ದ ಪ್ರವಾಸಿಗರು; ಶಾಕಿಂಗ್ ವಿಡಿಯೊ ಶೇರ್ ಮಾಡಿದ ಕೇಂದ್ರ ಸಚಿವ ರಿಜಿಜು
ಆ ಬಳಿಕ ಸ್ನೇಹಾಳ ತಾಯಿ ಸೋಮು ಮತ್ತು ಸ್ನೇಹಾಳನ್ನು ಈ ಬಾಡಿಗೆ ಮನೆಯಲ್ಲಿ ತೊರೆದು ತನ್ನ ಉಳಿದಿಬ್ಬರು ಮಕ್ಕಳೊಂದಿಗೆ ಎಲ್ಲಿಗೂ ಹೋಗಿದ್ದಳು. ಬಳಿಕ ಆ ಮನೆಯ ಮಾಲಕರು ಈ ಮಕ್ಕಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಅವರನ್ನು ಅನಾಥಾಶ್ರಮಕ್ಕೆ ಶಿಪ್ಟ್ ಮಾಡಲಾಗಿತ್ತು.
2010ರಲ್ಲಿ, ಆಗ ಐದು ವರ್ಷ ಪ್ರಾಯದವಳಾಗಿದ್ದ ಸ್ನೇಹ ಮತ್ತು ನಾಲ್ಕು ವರ್ಷ ಪ್ರಾಯದ ಸೋಮುವನ್ನು ಸ್ಪೈನ್ ದೇಶದ ದಂಪತಿ ದತ್ತು ಪಡೆದುಕೊಂಡಿದ್ದರು. ‘ಈಕೆ ತುಂಬಾ ಜವಾಬ್ದಾರಿಯುತ ಹುಡುಗಿ. ಈಕೆ ನಮ್ಮ ಮನೆಯ ಸಂತೋಷ. ಈಕೆ ನಮ್ಮ ಜೀವನ’ ಎಂದು ಆಕೆಯ ಸಾಕು ತಾಯಿ ಜೆಮಾ ಹೇಳಿಕೊಂಡಿದ್ದಾರೆ.
ಇನ್ನು, ಸ್ನೇಹಾಳ ಈ ಮಮತೆಯ ತಾಯಿಯ ಹುಡುಕಾಟದಲ್ಲಿ ಇವರಿಗೆ ಭುವನೇಶ್ವರದ ಸ್ಥಳೀಯ ಪೊಲೀಸರು ಸಹಾಯ ಮಾಡಿದ್ದಾರೆ. ಇನ್ನು ಇವರ ಹೆತ್ತವರ ಹೆಸರನ್ನು ಪತ್ತೆ ಮಾಡುವಲ್ಲಿ ರಮಾದೇವಿ ಮಹಿಳಾ ಕಾಲೇಜಿನ ನಿವೃತ್ತ ಪ್ರೊಫೆಸರ್ ಸ್ನೇಹ ಸುಧಾ ಮಿಶ್ರಾ ಸಹಾಯ ಮಾಡಿದ್ದಾರೆ.
ಒಟ್ಟಿನಲ್ಲಿ ಇನ್ನು 24 ಗಂಟೆಗಳೊಗಾಗಿ ಸ್ನೇಹಾಳ ಹೆತ್ತ ತಾಯಿ ಸಿಗದಿದ್ದರೆ ಈಕೆ ಈ ಬಾರಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಸ್ಪೈನ್ ಗೆ ಮರಳಬೇಕಾಗುತ್ತದೆ. ಮತ್ತು ಮುಂದಿನ ಮಾರ್ಚ್ ತಿಂಗಳಲಲ್ಲಿ ಮತ್ತೆ ಭಾರತಕ್ಕೆ ಬಂದು ತಾಯಿ ಮಮತೆಯನ್ನು ಅರಸಬೇಕಾಗುತ್ತದೆ. ಒಟ್ಟಿನಲ್ಲಿ ಸ್ನೇಹಾಳ ತಾಯಿ ಮಮತೆಯ ಹುಡುಕಾಟಕ್ಕೊಂದು ಆಲ್ ದಿ ಬೆಸ್ಟ್ ಹೇಳೋಣ..!