ಪಟನಾ: ಇದೀಗ ಎಲ್ಲಾ ಕಡೆ ನಾನಾ ರೀತಿಯ ಮೋಸದ ಘಟನೆಗಳೇ ವರದಿಯಾಗುತ್ತಿದೆ. ಇದರಲ್ಲಿ ಡಿಜಿಟಲ್ ಫ್ರಾಡ್, ಹಣಕಾಸಿನ ವಂಚನೆ ಸೇರಿದಂತೆ ವಿವಿಧ ರೀತಿಯ ಮೋಸಗಳು ನಡೆಯುತ್ತಲೇ ಇದೆ. ಮೊನ್ನೆ ತಾನೆ ಛತ್ತೀಸ್ ಗಢದಲ್ಲಿ ನಕಲಿ ಮ್ಯಾಟ್ರಿಮೋನಿ ಮೂಲಕ ಹಲವಾರು ವಿವಾಹಾಕಾಂಕ್ಷಿಗಳಿಗೆ ಮೋಸ ನಡೆದಿರುವ ಬೆನ್ನಲ್ಲೇ, ಇದೀಗ ನವ ವಧುವೊಬ್ಬಳು ತನ್ನ ಪತಿಗೆ ಲಕ್ಷಾಂತರ ರೂಪಾಯಿ ದೋಚಿಕೊಂಡು ಪರಾರಿಯಾಗಿರುವ ಘಟನೆಯ ಸುದ್ದಿಯೊಂದು ಇದೀಗ ವೈರಲ್ (Viral News) ಆಗುತ್ತಿದೆ.
ಬಿಹಾರದ (Bihar) ಕಿಶನ್ ಗಂಜ್ ನಲ್ಲಿ (Kishanganj) ಈ ಘಟನೆ ನಡೆದಿದ್ದು, ಈ ರೀತಿಯಾಗಿ ತನ್ನ ಪತಿಗೆ ಮೋಸ ಮಾಡಿ ಪರಾರಿಯಾಗಿರುವ ಮಹಿಳೆಗೆ ಪಶ್ಚಿಮ ಬಂಗಾಳದಲ್ಲಿ (West Bengal) ಇನ್ನೊಂದು ಮದುವೆಯಾಗಿರುವುದಾಗಿಯೂ ತಿಳಿದುಬಂದಿದೆ. ಈ ರೀತಿಯಾಗಿ ತನ್ನ ಪತಿಗೆ ಹಣ ವಂಚನೆ ಮಾಡಿರುವ ನವವಧುವನ್ನು ಇಶಿಕಾ ಎಂದು ಗುರುತಿಸಲಾಗಿದ್ದು, ಈಕೆ ರಾಕೇಶ್ ಗುಪ್ತಾ ಎಂಬವರನ್ನು ಮದುವೆಯಾಗಿದ್ದಳು. ಗುಪ್ತಾ ಬಿಜೆಪಿ ಯುವ ಮೋರ್ಚಾದ ಜನರಲ್ ಸೆಕ್ರೇಟರಿಯಾಗಿದ್ದರು. ಧರಮ್ ಗಂಜ್ ನ ನಿವಾಸಿಯಾಗಿರುವ ಗುಪ್ತಾ ಅವರ ವಿವಾಹ ಇತ್ತೀಚೆಗಷ್ಟೇ ದೇವಸ್ಥಾನದಲ್ಲಿ ನಡೆದಿತ್ತು ಮತ್ತು ಬಳಿಕ ಅದ್ದೂರಿ ರಿಸೆಪ್ಷನ್ ಕೂಡಾ ನಡೆದಿತ್ತು.
ಇದೀಗ ಈ ದಂಪತಿ ಬಾಳಲ್ಲಿ ಬಿರುಕು ಮೂಡಿದ್ದು, ತನ್ನ ಅತ್ತೆ-ಮಾವ ತಮ್ಮ ಮಗಳನ್ನು ರಾತ್ರಿ ಹೊತ್ತು ನನ್ನ ಮನೆಯಲ್ಲಿ ಇರಲು ಅವಕಾಶ ನೀಡುತ್ತಿಲ್ಲ ಎಂದು ಗುಪ್ತ ಆರೊಪಿಸಿದ್ದಾರೆ. ಮದುವೆಯಾದ ದಿನದಿಂದಲೇ ಇಶಿಕಾ ತನ್ನ ಗಂಡನಲ್ಲಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಳು ಮತ್ತು ತನ್ನ ಹೆತ್ತವರಿಗೆ ಸಹಾಯ ಮಾಡಲು ತನಗೆ ಲಕ್ಷಗಟ್ಟಲೆ ಹಣ ಬೇಕಾಗಿದೆ ಎಂದು ಆಕೆ ಪತಿಯಲ್ಲಿ ಹಣ ಕೇಳುತ್ತಿದ್ದಳು.
ಅದೊಂದು ದಿನ ತನ್ನ ಅತ್ತೆ-ಮಾವ ನನ್ನನ್ನು ಸಿಲಿಗುರಿಗೆ ಕರೆಯಿಸಿಕೊಂಡು ತಮ್ಮ ಮಗಳನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋಗುವಂತೆ ಹೇಳಿ ಅಲ್ಲಿಂದ ಹಿಂತಿರುಗಿದ ಬಳಿಕ ಆಕೆ ‘ಕಾಣೆಯಾಗಿದ್ದಾಳೆ’ ಎಂದು ಗುಪ್ತಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 2024 Flashback: 2024ರಲ್ಲಿ ಭಾರತೀಯರು ಅತಿಹೆಚ್ಚು Google Search ಮಾಡಿದ ವಿಷಯಗಳೇನು? ಇಲ್ಲಿದೆ ಮಾಹಿತಿ
ಇದೇ ವೇಳೆ, ಮಹಿಳೆಯ ತಾಯಿ ಬೇರೆಯೇ ಕಥೆ ಹೇಳುತ್ತಿದ್ದು, ಇವರಿಬ್ಬರಿಗೆ ಇನ್ನೂ ಮದುವೆಯಾಗಿಲ್ಲ, ಡಿ.06ರಂದು ಕೇವಲ ನಿಶ್ಚಿತಾರ್ಥ ಮಾತ್ರ ನಡೆದಿದೆ ಎಂದು ಹೇಳಿದ್ದಾರಲ್ಲದೆ, ಗುಪ್ತ ಮಾಡಿರುವ ಆರೊಪಗಳೆಲ್ಲವನ್ನೂ ನಿರಾಕರಿಸಿದ್ದಾರೆ. ಆದರೆ ಗುಪ್ತಾ ಮಾಡಿರುವ ಆರೋಪದಂತೆ, ಒಂದು ನಿವೇಶನ ಹಾಗೂ 30 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಹಣವನ್ನು ಹಿಡಿದುಕೊಂಡು ಆಕೆ ಪರಾರಿಯಾಗಲು ಆಕೆಯ ಹೆತ್ತವರೇ ಸಹಾಯ ಮಾಡಿದ್ದಾರೆ ಎಂದು ಗುಪ್ತಾ ಆರೋಪಿಸಿದ್ದಾರೆ. ಈ ಮಹಿಳೆ ಒಂಭತ್ತು ತಿಂಗಳುಗಳ ಹಿಂದೆ ಪಶ್ಚಿಮ ಬಂಗಾಲದ ಕಂಕಿಯಲ್ಲಿ ಇನ್ನೊಬ್ಬ ವ್ಯಕ್ತಿಗೂ ವಂಚಿಸಿದ್ದಾಳೆ ಎಂದೂ ಗುಪ್ತಾ ಆರೋಪಿಸಿದ್ದಾರೆ.
ಗುಪ್ತಾ ನೀಡಿರುವ ದೂರನ್ನು ಆಧರಿಸಿ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ಈ ಮಹಿಳೆಯ ಫೊಟೋ ಇನ್ನೊಬ್ಬ ವ್ಯಕ್ತಿಯೊಂದಿಗಿರುವುದು ಇದೀಗ ವೈರಲ್ ಆಗಿದೆ.