Sunday, 22nd December 2024

Viral News: ಥಿಯೇಟರ್‌ಗೆ ಪೊಲೀಸ್‌ ಎಂಟ್ರಿ; ಪುಷ್ಪ-2 ಕ್ಲೈಮ್ಯಾಕ್ಸ್‌ ನೋಡ್ತಾ ಮಜಾ ಮಾಡ್ತಿದ್ದ ಗ್ಯಾಂಗ್‌ಸ್ಟರ್‌ ಬಲೆಗೆ

pushpa 2

ನಾಗ್ಪುರ: ಸೂಪರ್‌ ಹಿಟ್‌ ಸಿನಿಮಾ ಪುಷ್ಪ 2ವೀಕ್ಷಿಸುತ್ತಿದ್ದ ಪ್ರೇಕ್ಷಕರು ಚಿತ್ರಮಂದಿರದೊಳಗೇ ನೈಜ ಸಾಹಸ ದೃಶ್ಯಕ್ಕೆ ಸಾಕ್ಷಿಯಾದಂತಹ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ನಾಗ್ಪುರದ ಮಲ್ಟಿಫ್ಲೆಕ್ಸ್‌ನಲ್ಲಿ ತಡರಾತ್ರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಕ್ರಿಮಿನಲ್‌ ಒಬ್ಬ ಪುಷ್ಪಾ 2 ಸಿನಿಮಾ ವೀಕ್ಷಿಸುತ್ತಿದ್ದ. ಈ ವೇಳೆ ಏಕಾಏಕಿ ನುಗ್ಗಿದ್ದ ಪೊಲೀಸರು ಅವನನ್ನು ಹಡೆಮುರಿಕಟ್ಟಿದ್ದಾರೆ(Viral News).

ಏನಿದು ಘಟನೆ?

ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ವಿಶಾಲ್ ಮೆಶ್ರಾಮ್‌ ಎಂಬಾತನನ್ನು ಹಲವಾರು ತಿಂಗಳಿನಿಂದ ಪೊಲೀಸರು ಹುಡುಕುತ್ತಲೇ ಇದ್ದರು. ಸಿನಿಮಾದ ಬಗ್ಗೆ ಬಹಳ ಆಸಕ್ತಿ ಹೊಂದಿದ್ದ ಎಂಬುದು ಪೊಲೀಸರಿಗೆ ತಿಳಿದಿತ್ತು. ಅಲ್ಲದೇ ಆತ ಪುಷ್ಪಾ ಸಿನಿಮಾ ವೀಕ್ಷಿಸಲಿದ್ದಾನೆ ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗೆ ಆತ ನಾಗ್ಪುರದ ಮಲ್ಟಿಫ್ಲೆಕ್ಸ್‌ವೊಂದರಲ್ಲಿ ಸಿನಿಮಾ ವೀಕ್ಷಿಸಲು ಬಂದಿದ್ದ.

ಈತನ ವಿರುದ್ಧ ಎರಡು ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ 27 ಪ್ರಕರಣಗಳು ದಾಖಲಾಗಿವೆ. ಮತ್ತು ಅವನ ಹಿಂಸಾತ್ಮಕ ಪ್ರವೃತ್ತಿಗೆ ಹೆಸರುವಾಸಿಯಾಗಿದ್ದನು ಮತ್ತು ಈ ಹಿಂದೆ ಪೊಲೀಸರ ಮೇಲೆ ದಾಳಿ ಮಾಡಿದ್ದನು.
ಅಧಿಕಾರಿಗಳು, ಸೈಬರ್ ಕಣ್ಗಾವಲು ಮತ್ತು ಹೊಸ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ)ಯಲ್ಲಿ ಅವನ ಚಲನವಲನಗಳನ್ನು ಟ್ರ್ಯಾಕ್ ಮಾಡುವ ಮೂಲಕ ಪಟ್ಟುಬಿಡದೆ ಅವನನ್ನು ಹಿಂಬಾಲಿಸಲಾಗಿತ್ತು ಎಂದು ಅಧಿಕಾರಿ ಹೇಳಿದರು.

ಕೊನೆಗೆ ಆತ ಚಿತ್ರಮಂದಿರಕ್ಕೆ ಭೇಟಿ ನೀಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ಬಂದ ಪೊಲೀಸರು ಆತ ತಪ್ಪಿಸಿಕೊಳ್ಳದಂತೆ ಸಿನಿಮಾ ಹಾಲ್‌ನ ಹೊರಗೆ ವಾಹನದ ಟೈರ್‌ಗಳ ಗಾಳಿಯನ್ನು ತೆಗೆದಿದ್ದಾರೆ ಎನ್ನಲಾಗಿದೆ.

ಕ್ಲೈಮ್ಯಾಕ್ಸ್‌ಗೆ ಎಂಟ್ರಿ ಕೊಟ್ಟ ಪೊಲೀಸರು

ಚಿತ್ರದ ಕ್ಲೈಮ್ಯಾಕ್ಸ್ ಸಮಯದಲ್ಲಿ ಪೊಲೀಸರು ಸಿನಿಮಾ ಹಾಲ್‌ ಒಳಗೆ ಎಂಟ್ರಿ ಕೊಟ್ಟಾಗ ವಿಶಾಲ್ ಮೆಶ್ರಾಮ್‌ ಸಿನಿಮಾ ನೋಡೋದ್ರಲ್ಲೇ ತಲ್ಲೀಣನಾಗಿದ್ದ. ಪೊಲೀಸರು ಆತನನ್ನು ಸುತ್ತುವರಿದು ಶೀಘ್ರವಾಗಿ ಬಂಧಿಸಿದರು, ಪ್ರತಿರೋಧಿಸಲು ಯಾವುದೇ ಅವಕಾಶವನ್ನು ನೀಡಲಿಲ್ಲ. ಸದ್ಯ ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಮೆಶ್ರಾಮ್ ನನ್ನು ಬಂಧಿಸಲಾಗಿದ್ದು, ಶೀಘ್ರದಲ್ಲೇ ನಾಸಿಕ್ ಜೈಲಿಗೆ ವರ್ಗಾಯಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

“ಪುಷ್ಪ 2: ದಿ ರೂಲ್”, ಅಲ್ಲು ಅರ್ಜುನ್ ಅಭಿನಯದ ಬ್ಲಾಕ್ಬಸ್ಟರ್ ಚಲನಚಿತ್ರವು 2021 ರ ತೆಲುಗು ಚಲನಚಿತ್ರ “ಪುಷ್ಪ: ದಿ ರೈಸ್” ನ ಮುಂದುವರಿದ ಭಾಗವಾಗಿದೆ. ಇದು ಹಿಂದಿ, ತಮಿಳು, ಕನ್ನಡ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳೊಂದಿಗೆ ಡಿಸೆಂಬರ್ 5 ರಂದು ಬಿಡುಗಡೆಯಾಯಿತು.

ಈ ಸುದ್ದಿಯನ್ನೂ ಓದಿ: Delhi Poster War: ದಿಲ್ಲಿಯಲ್ಲಿ ಶುರುವಾಯ್ತು ಪೋಸ್ಟರ್‌ ವಾರ್‌! ʻಪುಷ್ಪʼ ಸ್ಟೈಲ್‌ನಲ್ಲಿ ಆಪ್‌-ಬಿಜೆಪಿ ನಾಯಕರು ಪೋಸ್‌!