ಕೋಲ್ಕತ್ತಾ : ಸಾಧಿಸುವ ಛಲ ಇದ್ದರೆ ಎಂತಹ ಕಠಿಣ ಸವಾಲುಗಳನ್ನಾರೂ ಸಾರಸಗಟಾಗಿ ಎದುರಿಸಬಹುದೆಂಬುದಕ್ಕೆ ಈತನ ಜೀವಂತ ಉದಾಹರಣೆ. ಪಶ್ಚಿಮ ಬಂಗಾಳದ ಎಗ್ರಾ ಎಂಬ ಸಣ್ಣ ಹಳ್ಳಿಯ 21 ವರ್ಷದ ಸರ್ಫರಾಜ್ ಎಂಬ ವಿದ್ಯಾರ್ಥಿ ಇಂತಹ ಮಹತ್ತರವಾದ ಸಾಧನೆ ಮಾಡಿ ಎಲ್ಲರ ಹೊಗಳಿಕೆಗೆ ಪಾತ್ರನಾಗಿದ್ದಾರೆ. ದಿನಗೂಲಿ ಕಾರ್ಮಿಕರಾಗಿ 300 ರೂ.ಗಳಿಗೆ ಕೆಲಸ ಮಾಡುತ್ತಿದ್ದ ಇವರು ಇಂದು ನೀಟ್ 2024 ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಕೋಲ್ಕತ್ತಾದ ನೀಲ್ ರತನ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ದಾಖಲಾಗಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್(Viral News) ಆಗಿದೆ.
ಸರ್ಫರಾಜ್ ಅವರಿಗೆ ಮೂರು ದೊಡ್ಡ ಕನಸುಗಳಿತ್ತು. ಅದೇನೆಂದರೆ ಭಾರತೀಯ ಸೇನೆಗೆ ಸೇರುವುದು, ಕ್ರಿಕೆಟಿಗನಾಗುವುದು ಮತ್ತು ವೈದ್ಯರಾಗುವುದು. ಆರ್ಥಿಕ ಕಾರಣಗಳಿಂದಾಗಿ ಮೊದಲ ಎರಡು ಕನಸುಗಳು ಭಗ್ನಗೊಂಡವು. ಆದರೆ ಅವರು ವೈದ್ಯರಾಗುವ ಕನಸನ್ನು ಈಡೇರಿಸಲು ಬಹಳಷ್ಟು ಶ್ರಮಿಸಿದ್ದಾರೆ. ಕಷ್ಟಪಟ್ಟು ಓದಿ ಕೊನೆಗೂ ತಮ್ಮ ಕನಸನ್ನು ನನಸಾಗಿಸಲು ಮುಂದಾಗಿದ್ದಾರೆ.
“ನಾನು 8 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ ಮತ್ತು 300 ರೂ.ಗಳನ್ನು ಸಂಪಾದಿಸುತ್ತಿದ್ದೆ. ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ, ನನ್ನ ಕುಟುಂಬವನ್ನು ಪೋಷಿಸಲು ನಾನು ಕೆಲಸ ಮಾಡಬೇಕಾಗಿತ್ತು. ಆ ಸಮಯದಲ್ಲಿ, ನಾನು ನನ್ನ ತಂದೆಯೊಂದಿಗೆ ಕೆಲಸ ಮಾಡುತ್ತಿದ್ದೆ ಮತ್ತು ನೀಟ್ ತಯಾರಿಗಾಗಿ ನನಗೆ 7 ಗಂಟೆಗಳ ಸಮಯ ಸಿಗುತ್ತಿತ್ತು. ಉಳಿದ ಸಮಯದಲ್ಲಿ ನಾನು ಮಲಗಿ ಮನೆಕೆಲಸಗಳನ್ನು ಮಾಡುತ್ತಿದ್ದೆ” ಎಂದು ಸರ್ಫರಾಜ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಸರ್ಫರಾಜ್ ಪ್ರಯಾಣವು 2022ರಲ್ಲಿ ಪ್ರಾರಂಭವಾಯಿತು. ಅವರು ಪ್ರತಿದಿನ 400 ಇಟ್ಟಿಗೆಗಳನ್ನು ಹೊರುವ ಕೆಲಸ ಮಾಡಿ ಅದರಿಂದ ಬಂದ ಹಣದಿಂದ ತಮ್ಮ ಕುಟುಂಬವನ್ನು ಸಾಕುತ್ತಿದ್ದರು. “ನಾನು ವೈದ್ಯನಾಗಬೇಕೆಂದು ನನ್ನ ತಾಯಿಯ ಬಯಕೆಯಾಗಿತ್ತು. ನಾನು ಅವರ ಆಸೆಯನ್ನು ಪೂರೈಸಲು ಶ್ರಮಿಸಿದೆ ಮತ್ತು ಮೂರನೇ ಪ್ರಯತ್ನದಲ್ಲಿ ನೀಟ್ ಅನ್ನು ಯಶಸ್ವಿಯಾಗಿ ಪಾಸ್ ಮಾಡಿದೆ. ಆದರೆ ಈ ಪ್ರಯಾಣವು ತುಂಬಾ ಕಠಿಣವಾಗಿತ್ತು” ಎಂದು ಸರ್ಫರಾಜ್ ಹೇಳಿದ್ದಾರೆ. ಸರ್ಫರಾಜ್ ತನ್ನ ಯಶಸ್ಸಿಗೆ ತನ್ನ ಕುಟುಂಬ, ಶಾಲಾ ಶಿಕ್ಷಕರು, ವೈಯಕ್ತಿಕ ಬೋಧಕರು ಕಾರಣವೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ; ಮುಂದೇನಾಯ್ತು? ವಿಡಿಯೊ ಇದೆ
ಕೊರೊನಾ ಸಮಯದಲ್ಲಿ ಸರ್ಕಾರದ ಸಹಾಯದೊಂದಿಗೆ, ಸರ್ಫರಾಜ್ಗೆ ಫೋನ್ ಖರೀದಿಸುವ ಅವಕಾಶ ಸಿಕ್ಕಿದೆ. ಅವರು ಯೂಟ್ಯೂಬ್ ವಿಡಿಯೊಗಳು ಮತ್ತು ಭೌತಶಾಸ್ತ್ರ ಕೋರ್ಸ್ಗಳನ್ನು ಬಳಸಿಕೊಂಡು ತಯಾರಿ ನಡೆಸಿದ್ದಾರಂತೆ. ಸರ್ಫರಾಜ್ ಈಗ ಪಿಎಂ ಆವಾಸ್ ಯೋಜನಾ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮುಂದೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವುದು ಇವರ ಕನಸಂತೆ.