ಚೆನ್ನೈ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಡಿವೋರ್ಸ್ ಪ್ರಕರಣ ಹೆಚ್ಚಾಗುತ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯರ ವಿಚ್ಛೇದನ ಪ್ರಕರಣಗಳೂ ಕೆಲವೊಮ್ಮೆ ಸದ್ದು ಮಾಡುತ್ತವೆ. ಇದೀಗ ಅಂತಹದ್ದೇ ಆಸಕ್ತಿದಾಯಕ ಡಿವೋರ್ಸ್ ಪ್ರಕರಣವೊಂದು ವೈರಲ್ ಆಗಿದೆ (Viral News). ತಮಿಳುನಾಡಿನ ವ್ಯಕ್ತಿಯೊಬ್ಬರು ವಿಚ್ಛೇದನ ಪ್ರಕರಣ ದಾಖಲಿಸಿರುವ ಪತ್ನಿಗೆ ಜೀವನಾಂಶ ಭತ್ಯೆ ನೀಡಿದ ಮುಂದಾಗಿರುವ ರೀತಿಯೇ ನೆಟ್ಟಿಗರ ಗಮನ ಸೆಳೆದಿದೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿವರ.
ಕೊಯಂಬತ್ತೂರಿನಲ್ಲಿ ಈ ವಿಶಿಷ್ಟ ಪ್ರಕರಣ ನಡೆದಿದ್ದು, ವಿಚ್ಛೇದಿನ ಪತ್ನಿಗೆ 80 ಸಾವಿರ ರೂ. ಜೀವನಾಂಶ ನೀಡಲು ಆತ ಅಷ್ಟೂ ಮೊತ್ತವನ್ನು 1 ಮತ್ತು 2 ರೂ. ನಾಣ್ಯಗಳನ್ನು ನ್ಯಾಯಾಲಯಕ್ಕೆ ತಂದಿದ್ದಾರೆ. 20 ಚೀಲಗಳಲ್ಲಿ ಈ ನಾಣ್ಯಗಳನ್ನು ತಂದು ನ್ಯಾಯಾಲಕ್ಕೆ ಒಪ್ಪಿಸಿದ್ದಾರೆ. ಸದ್ಯ ಈ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ಅವರು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಕೊಯಂಬತ್ತೂರಿನ ಕುಟುಂಬ ನ್ಯಾಯಾಲಯ ಈ ವಿಶಿಷ್ಟ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಈ ವ್ಯಕ್ತಿ ವೃತ್ತಿಯಲ್ಲಿ ಚಾಲಕ. ಜತೆಗೆ ತನ್ನದೆ ಆದ ಕಾಲ್ ಟ್ಯಾಕ್ಸಿ ಹೊಂದಿದ್ದಾರೆ. ಅವರ ಪತ್ನಿ ಕಳೆದ ವರ್ಷ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ವಾದ ಆಲಿಸಿದ ನ್ಯಾಯಾಲಯ ಪತ್ನಿಗೆ 2 ಲಕ್ಷ ರೂ. ಜೀವನಾಂಶ ಪಾವತಿಸುವಂತೆ ಆದೇಶ ಹೊರಡಿಸಿತ್ತು. 37 ವರ್ಷದ ಈ ವ್ಯಕ್ತಿ ಸದ್ಯ ತಮ್ಮ ಸಹೋದರಿಯೊಂದಿಗೆ ಅಮೆರಿಕದಲ್ಲಿ ವಾಸವಾಗಿದ್ದಾರೆ.
ಈ ವ್ಯಕ್ತಿ ಕಾರಿನಿಂದ ಕಾಯಿನ್ ತುಂಬಿದ ಚೀಲವನ್ನು ಹಿಡಿದು ಕೋರ್ಟ್ ಆವರಣಕ್ಕೆ ಪ್ರವೇಶಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಒಟ್ಟು 20 ಚೀಲಗಳಲ್ಲಿ ಅವರು 1 ಮತ್ತು 2 ರೂ.ಯ ಕಾಯಿನ್ ತಂದಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇದರಲ್ಲಿ ಒಟ್ಟು 80,000 ರೂ. ಇರುವುದಾಗಿ ಅವರು ಕೋರ್ಟ್‌ಗೆ ತಿಳಿಸಿದ್ದರು. ಅದಾಗ್ಯೂ ಕೋರ್ಟ್ ಈ ನಾಣ್ಯದ ಬದಲು ಹಣವನ್ನು ಖಾತೆಗೆ ಜಮಾಯಿಸುವಂತೆ ಸೂಚಿಸಿತು.
ಜಡ್ಜ್ ಹೇಳಿದ್ದೇನು?
ಈ ವ್ಯಕ್ತಿ ಇಷ್ಟು ದೊಡ್ಡ ಮೊತ್ತವನ್ನು ಕಾಯಿನ್ ರೂಪದಲ್ಲಿ ತಂದಿರುವುದನ್ನು ನೋಡಿ ಜಡ್ಜ್ ಒಂದು ಕ್ಷಣ ಬೆಕ್ಕಸ ಬೆರಗಾಗಿದ್ದರು. ಇದನ್ನು ವಾಪಾಸ್ ತೆಗೆದುಕೊಂಡು ಹೋಗಿ ನೋಟ್ ರೂಪದಲ್ಲಿ ಪಾವತಿಸಲು ಸೂಚಿಸಿದರು. ವಡವಲ್ಲಿ ಮೂಲದ ಈ ಚಾಲಕ ಬಳಿಕ ಕಾಯಿನ್ ಬದಲು ನೋಟ್ ಮೂಲಕ ಹಣ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ. ಬಾಕಿ ಉಳಿದಿರುವ 1.2 ಲಕ್ಷ ರೂ.ಯನ್ನು ಶೀಘ್ರದಲ್ಲೇ ಒದಗಿಸುವಂತೆ ಕೋರ್ಟ್ ಸೂಚಿಸಿದೆ.
ಈ ಹಿಂದೆಯೂ ನಡೆದಿತ್ತು
ಈ ರೀತಿಯ ಘಟನೆ ಈ ಹಿಂದೆಯೂ ನಡೆದಿದೆ. ಕಳೆದ ವರ್ಷ ರಾಜಸ್ಥಾನದ ವಕ್ತಿಯೊಬ್ಬರು ವಿಚ್ಛೇದಿತ ಪತ್ನಿಗೆ 55,000 ರೂ. ಜೀವನಾಂಶವನ್ನು ನಾಣ್ಯ ರೂಪದಲ್ಲಿ ಕೊಡಲು ಮುಂದಾಗಿದ್ದರು. ಅವರೂ 7 ಚೀಲಗಳಲ್ಲಿ 1 ಮತ್ತು 2 ರೂ.ಯ ನಾಣ್ಯವನ್ನು ಹೊತ್ತುಕೊಂಡು ಕೋರ್ಟ್‌ಗೆ ಬಂದಿದ್ದರು. ಪತ್ನಿ ಪರ ವಕೀಲರು ಈ ಕಾಯಿನ್ ಸ್ವೀಕರಿಸಲು ನಿರಾಕಸಿದ್ದರು ಮತ್ತು ಇದು ಕೂಡ ಒಂದು ರೀತಿಯಲ್ಲಿ ಮಾನಸಿಕ ಹಿಂಸೆ ಎಂದು ಹೇಳಿದ್ದರು. ಬಳಿಕ ಕೋರ್ಟ್ ಕಾಯಿನ್ ತಂದವರೇ ಅದನ್ನು ಎಣಿಸಬೇಕು ಎಂದು ಸೂಚಿಸಿತ್ತು.
ಈ ಸುದ್ದಿಯನ್ನೂ ಓದಿ: Viral News: ಗಿಳಿಯು ಪಂಜರದೊಳಿಲ್ಲ…. ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ!