Wednesday, 27th November 2024

Viral News: ಹುರಿದ ಕಡಲೆಕಾಳು ತಿಂದು ಮಲಗಿದವರು ಬೆಳಗ್ಗೆ ಏಳಲೇ ಇಲ್ಲ! 8 ವರ್ಷದ ಬಾಲಕ ಸೇರಿ ಕುಟುಂಬದ ಮೂವರು ನಿಗೂಢ ಸಾವು;

ಬುಲಂದ್‌ ಶಹರ್‌ : ಹುರಿದ ಕಡಲೆಕಾಳು (Roasted Chickpeas) ತಿಂದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆಯೊಂದು ಬುಲಂದ್‌ಶಹರ್‌ (Bulandshahr) ನಲ್ಲಿ ನಡೆದಿದೆ. ಇನ್ನುಳಿದ ಇಬ್ಬರ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಬುಲಂದ್‌ಶಹರ್‌ ನ ನರಸೇನಾ ಪೊಲೀಸ್‌ ಠಾಣೆ ವ್ಯಾಪ್ತಿಯ ಮೊಹಮ್ಮದ್‌ಪುರ ಬರ್ವಾಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ(Viral News).

ಭಾನುವಾರ ಸಂಜೆ (ನ.24) ಸಂತ್ರಸ್ತ ಕುಟುಂಬವು ದೌಲತ್‌ಪುರ್‌ (Daulatpur) ನ ಸ್ಥಳೀಯ ಮಾರುಕಟ್ಟೆಯ ಬೀದಿಯೊಂದರಲ್ಲಿ ತಳ್ಳುವ ಗಾಡಿಯಲ್ಲಿರಿಸಿ ಮಾರುತ್ತಿದ್ದ ಹುರಿದ ಕಡಲೆಕಾಳನ್ನು ಖರೀದಿಸಿದೆ. ಮನೆಯಲ್ಲಿ ಬಿಸಿ ಆಹಾರದೊಂದಿಗೆ ಅದನ್ನು ಸೇವಿಸಿದ್ದರು ಎಂದು ತಿಳಿದು ಬಂದಿದೆ. ಮಲಗುವ ವೇಳೆಗಾಗಲೇ ಕುಟುಂಬಸ್ಥರಿಗೆ ತೀವ್ರ ಆರೋಗ್ಯ ಸಮಸ್ಯೆ ಎದುರಾಗಿದ್ದು, ಕೆಲವೇ ಗಂಟೆಗಳಲ್ಲಿ 45 ವರ್ಷದ ಕುಲುವಾ ಸಿಂಗ್‌ ಮತ್ತು ಎಂಟು ವರ್ಷದ ಮುಗ್ಧ ಬಾಲಕ ಲವಿಶ್‌ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನೆಯ ಸೊಸೆ ಜೋಗೇಂದ್ರಿ ಕೂಡ ಮಾರನೆಯ ದಿನ ಸಾವನ್ನಪ್ಪಿದ್ದಾರೆ.

ಘಟನೆಯ ಮಾಹಿತಿ ಸಿಕ್ಕ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮೂವರ ದಿಢೀರ್‌ ಸಾವಿನ ಹಿಂದಿರುವ ಕಾರಣ ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಮೃತರ ಸಂಬಂಧಿಕರು ಮರಣೋತ್ತರ ಪರೀಕ್ಷೆ ನಡೆಸುವ ಮೊದಲೇ ಇಬ್ಬರ ಶವಗಳನ್ನು ಸುಟ್ಟು ಹಾಕಿದ್ದು, ಮಹಿಳೆಯ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯ ವೇಳೆ ಸಿಗುವ ವರದಿಯ ಆಧಾರದ ಮೇಲೆ ಸಾವಿನ ಹಿಂದಿರುವ ಕಾರಣ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೇಳೆ ಮತ್ತು ಇತರೆ ಆಹಾರ ಪದಾರ್ಥಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಯಾವುದೇ ರೀತಿಯ ಅವ್ಯವಹಾರ ಮತ್ತು ಕಲಬೆರಕೆ ಕಂಡುಬಂದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಅಧಿಕಾರಿ ವಿನೀತ್‌ ಕುಮಾರ್‌ ಮಾಧ್ಯಮದೊಂದಿಗೆ ತಿಳಿಸಿದ್ದಾರೆ.

ಪೂರಿ ತಿಂದು ಬಾಲಕ ಸಾವು

ಮೊನ್ನೆಯಷ್ಟೇ ಹೈದರಾಬಾದ್‌ನ ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಗಂಟಲಲ್ಲಿ ಪೂರಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಸೋಮವಾರ ಸಿಕಂದರಾಬಾದ್‌ನ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ವಿಕಾಸ್ ಜೈನ್ ಎಂಬ ಬಾಲಕ ಊಟದ ಸಮಯದಲ್ಲಿ ಟಿಫಿನ್‌ನಿಂದ ಮೂರು ಪೂರಿಗಳನ್ನು ತೆಗೆದುಕೊಂಡು ಒಂದೇ ಬಾರಿಗೆ ಎಲ್ಲವನ್ನೂ ಬಾಯಿಗೆ ಹಾಕಿಕೊಂಡಿದ್ದಾನೆ.

ಮೂರು ಪೂರಿಗಳನ್ನು ಒಟ್ಟಿಗೆ ಬಾಯಿಗೆ ಹಾಕಿಕೊಂಡ ಪರಿಣಾಮ ಬಾಲಕ ಉಸಿರಾಡಲು ಸಾಕಷ್ಟು ಪರದಾಡಿದ್ದಾನೆ. ಇದನ್ನು ಬಾಲಕನ ಸ್ನೇಹಿತರು ಕೂಡಲೇ ಶಿಕ್ಷಕರನ್ನು ಕರೆದಿದ್ದಾರೆ. ತಕ್ಷಣ ಆಸ್ಪತ್ರೆಗೂ ಕರೆದೊಯ್ದಿದ್ದರೂ, ವೈದ್ಯರು ಚಿಕಿತ್ಸೆ ನೀಡುವ ಮುನ್ನವೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಬಾಲಕ ವಿಕಾಸ್ ಜೈನ್ ತಿವೋಲಿ ಥಿಯೇಟರ್ ಬಳಿ ಇರುವ ಶಾಲೆಯಲ್ಲಿ 6 ನೇ ತರಗತಿಯ ವಿದ್ಯಾರ್ಥಿಯಾಗಿದ್ದನು. ಮನೆಯಿಂದ ಟಿಫಿನ್ ನಲ್ಲಿ ಪೂರಿ ತಂದು ಸಹಪಾಠಿಗಳೊಂದಿಗೆ ಊಟ ಮಾಡುವ ವೇಳೆ ಈ ಘಟನೆ ನಡೆದಿದೆ. ಈ ವಿಷಯ ತಿಳಿದು ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: ಹುಟ್ಟುಹಬ್ಬದ ಕೇಕ್‌ ಸೇವಿಸಿ ಬಾಲಕಿ ಸಾವು