Monday, 25th November 2024

Viral Video: 15 ರೂ.ಯ ನೀರಿನ ಬಾಟಲಿ 20 ರೂ.ಗೆ ಮಾರಾಟ ಮಾಡಿದವನಿಗೆ 1 ಲಕ್ಷ ರೂ. ದಂಡ ವಿಧಿಸಿದ ಭಾರತೀಯ ರೈಲ್ವೆ

Viral Video

ನವದೆಹಲಿ: ರೈಲ್ವೆ ಇಲಾಖೆಯ ನಿಯಮದ ಪ್ರಕಾರ, ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡುವ ನೀರಿನ ಬಾಟಲಿಗೆ ಎಂಆರ್‌ಪಿ ಬೆಲೆ ಎಷ್ಟು ಇದೆಯೋ ಅಷ್ಟೇ ಬೆಲೆಗೆ ಅದನ್ನು ಮಾರಾಟ ಮಾಡಬೇಕಾಗುತ್ತದೆ. ಆದರೆ ಇಲ್ಲೊಬ್ಬ ಮಾರಾಟಗಾರ ಬಾಟಲಿ ನೀರಿಗೆ ಪ್ರಯಾಣಿಕನ ಬಳಿ ಹೆಚ್ಚಿಗೆ ಹಣ ಕೇಳಿದ್ದಕ್ಕಾಗಿ ಭಾರತೀಯ ರೈಲ್ವೆ 1 ಲಕ್ಷ ರೂ.ಗಳ ದಂಡ ವಿಧಿಸಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ರೈಲ್ವೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಮಾರಾಟಗಾರನೊಬ್ಬ ಪ್ರಯಾಣಿಕರಿಗೆ ನೀರಿನ ಬಾಟಲಿಯನ್ನು ಎಂಆರ್‌ಪಿ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಿದ್ದಾನಂತೆ. ಸಾಮಾನ್ಯವಾಗಿ 15 ರೂ.ಗೆ ಮಾರಾಟ ಮಾಡಬೇಕಾಗಿದ್ದ ರೈಲಿನ ನೀರಿನ ಬಾಟಲಿಯನ್ನು ಪೂಜಾ ಎಸ್ಎಫ್ ಎಕ್ಸ್‌ಪ್ರೆಸ್‌ನಲ್ಲಿ 20 ರೂ.ಗೆ ಮಾರಾಟ ಮಾಡಿದ್ದಾನೆ ಎಂದು ವಿವರಿಸಲಾಗಿದೆ.

3ನೇ ಎಸಿ ಎಕಾನಮಿ ಕ್ಲಾಸ್‍ನಲ್ಲಿ ಪ್ರಯಾಣಿಕರೊಬ್ಬರು ಇದನ್ನು ವಿಡಿಯೊ ಮಾಡಿದ್ದಾರೆ. 1 ನಿಮಿಷ 47 ಸೆಕೆಂಡುಗಳ ವಿಡಿಯೊದಲ್ಲಿ, ಗ್ರಾಹಕ ಹೆಚ್ಚುವರಿ 5 ರೂ.ಗಳ ಶುಲ್ಕದ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಮಾರಾಟಗಾರನು ಅದಕ್ಕೆ ಪ್ರತಿಕ್ರಿಯಿಸಿ, ಜೀವನವನ್ನು ಸಾಗಿಸಲು ದುಡಿಯಬೇಕಾಗಿದೆ ಎಂದು ಹೇಳಿದ್ದಕ್ಕೆ 20 ರೂ.ಗೆ ಬಾಟಲಿಯನ್ನು ಖರೀದಿಸಿದರೂ, ನಿಯೋಜಿತ ಪ್ಲಾಟ್‌ಫಾರ್ಮ್‌ನಲ್ಲಿ ದೂರು ದಾಖಲಿಸುವುದಾಗಿ ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಅವರು ಅದನ್ನು ನಿರ್ಲಕ್ಷ್ಯ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾರೆ.

ಈ ಸಮಸ್ಯೆಗೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳಲು ನಿರ್ಧರಿಸಿದ ಪ್ರಯಾಣಿಕ ತ್ವರಿತವಾಗಿ ರೈಲ್ವೆಯ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ವಿಡಿಯೊದಲ್ಲಿ ಪ್ರಯಾಣಿಕ ದೂರು ದಾಖಲಿಸುವುದು ಸೆರೆಯಾಗಿದೆ. ಈ ವಿಚಾರದ ಬಗ್ಗೆ ರೈಲ್ವೆ ಇಲಾಖೆ ತಕ್ಷಣ ಕ್ರಮ ಕೈಗೊಂಡಿದ್ದು, ಸ್ವಲ್ಪ ಸಮಯದ ನಂತರ, ಕ್ಯಾಟರಿಂಗ್ ಸೇವೆಯ ಪ್ರತಿನಿಧಿಯೊಬ್ಬರು ಹೆಚ್ಚಿಗೆ ಪಡೆದ 5 ರೂ.ಗಳನ್ನು ಮರುಪಾವತಿಸಲು ಬಂದಿದ್ದಾರೆ. ಪ್ರಯಾಣಿಕ ಹೆಚ್ಚುವರಿ ಮೊತ್ತವನ್ನು ಬೋಗಿಯಲ್ಲಿರುವ ಇತರ ಪ್ರಯಾಣಿಕರಿಗೆ ಮರುಪಾವತಿಸಬೇಕೆಂದು ಹೇಳಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಏಕಾಏಕಿ ಜಿಗಿದ ಮಹಿಳೆ; ಆಮೇಲೆ ಆಗಿದ್ದೇನು? ವಿಡಿಯೊ ಇದೆ

ಈ ವಿಡಿಯೊದಲ್ಲಿ ಭಾರತೀಯ ರೈಲ್ವೆಯ ಪತ್ರ ಕೂಡ ಕಂಡುಬಂದಿದ್ದು, ಇದು ಕ್ಯಾಟರಿಂಗ್ ಸೇವೆ ನಿಯಮವನ್ನು  ಉಲ್ಲಂಘನೆ ಮಾಡಿದ್ದಕ್ಕಾಗಿ 1 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ ಎಂದು ದೃಢಪಡಿಸಿದೆ. ಅತಿಯಾದ ಶುಲ್ಕ ವಿಧಿಸುವ ಮತ್ತು ಅನೈತಿಕ ಅಭ್ಯಾಸಗಳ ವಿರುದ್ಧ ಭಾರತೀಯ ರೈಲ್ವೆಯ ಕಟ್ಟುನಿಟ್ಟಾದ ಕ್ರಮಕೈಗೊಂಡಿದೆ ಎನ್ನುವುದು ಇಲ್ಲಿ ಸ್ಪಷ್ಟವಾಗಿ ತಿಳಿದುಬಂದಿದೆ. ಹಾಗೇ  ಬೆಲೆ ನಿಯಮಗಳನ್ನು ಶ್ರದ್ಧೆಯಿಂದ ಅನುಸರಿಸಲು ಮಾರಾಟಗಾರರಿಗೆ ಆದೇಶಿಸಲಾಗಿದೆ.