Tuesday, 7th January 2025

Viral Video: ರಸ್ತೆಗೆ ಕಟ್ಟಿದ ಹಗ್ಗದಿಂದ ಜೀವ ಕಳೆದುಕೊಂಡ ಬೈಕ್‌ ಸವಾರ; ಭೀಕರ ರಸ್ತೆ ಅಪಘಾತದ ವಿಡಿಯೊ ವೈರಲ್

Viral Video

ತಿರುವನಂತಪುರಂ: ರಸ್ತೆ ದಾಟುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುವುದು ಅಥವಾ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗುವುದು ಇಂಥ ಅಭ್ಯಾಸಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅಜಾಗರೂಕತೆಯಿಂದಲೇ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಆದರೂ ಜನ ಬುದ್ಧಿ ಕಲಿಯದೇ ಇಂಥದ್ದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಾರೆ. ಇತ್ತೀಚೆಗೆ ಕೇರಳದಲ್ಲೊಂದು ಭೀಕರ ರಸ್ತೆ ಅಪಘಾತ ನಡೆದಿದೆ. ಪೊಲೀಸ್‌ ಚೆಕ್‌ಪೋಸ್ಟ್‌ನಲ್ಲಿ ರಸ್ತೆ ಅಡ್ಡವಾಗಿ ಕಟ್ಟಿದ ಹಗ್ಗದಿಂದ ಬೈಕ್‌ ಸವಾರನೊಬ್ಬ ತನ್ನ ಜೀವ ಕಳೆದುಕೊಂಡ ದಾರುಣವಾದ ಘಟನೆಯೊಂದು ನಡೆದಿದೆ. ಈ ದೃಶ್ಯದ ವಿಡಿಯೊ ಇದೋಗ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ (Viral Video) ಆಗಿದೆ.

ನಡೆದಿದ್ದೇನು?
ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಕಣ್ಣಿಗೆ ಕಾಣುವ ಹಾಗೇ ಬಿಳಿಬಣ್ಣದ ಹಗ್ಗವನ್ನು ರಸ್ತೆಗೆ ಅಡ್ಡಲಾಗಿ ಕಟ್ಟಲಾಗಿತ್ತು. ಆದರೆ ಬೈಕ್‌ ಸವಾರನೊಬ್ಬ ಇದನ್ನು ಗಮನಿಸದೇ ವೇಗವಾಗಿ ಬಂದಿದ್ದಾನೆ. ಹಗ್ಗ ತಡೆದು ಅವನು ರಸ್ತೆಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ದೃಶ್ಯದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂವರು ಪೊಲೀಸರು ಕೂಡ ಹಗ್ಗ ಕಟ್ಟಿದ ಸ್ಥಳದಲ್ಲಿಯೇ ಇದ್ದರು. ಆದರೂ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: 60 ಅಡಿ ಎತ್ತರದಲ್ಲಿರುವ ಫೆರಿಸ್ ವೀಲ್‍ನಲ್ಲಿ ನೇತಾಡಿದ ಬಾಲಕಿ! ಬೆಚ್ಚಿ ಬೀಳಿಸುವ ವಿಡಿಯೊ

ಇತ್ತೀಚೆಗಷ್ಟೇ ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಗಿಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೈಕ್‍ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್‍ನಲ್ಲಿ ಹೋಗುತ್ತಿದ್ದ ದಂಪತಿಗೆ ಮುಂಭಾಗದಿಂದ ಬರುತ್ತಿದ್ದ ಬೈಕ್  ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತವು ಎಷ್ಟು ತೀವ್ರವಾಗಿತ್ತೆಂದರೆ ಎರಡೂ ಬೈಕುಗಳು ರಸ್ತೆಗೆ ಬಿದ್ದಿದ್ದು, ಬೈಕಿನ ಪೆಟ್ರೋಲ್ ಟ್ಯಾಂಕ್‍ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಈ ಬೆಂಕಿಯಿಂದಾಗಿ ಒಬ್ಬ ಯುವಕ ಸಜೀವ ದಹನವಾಗಿದ್ದರೆ, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದಾನೆ.