ಭೋಪಾಲ್: ವಿದ್ಯಾರ್ಥಿ ಹಾಗೂ ಕ್ಯಾಬ್ ಚಾಲಕನೂ ಆಗಿರುವ ಯುವಕನೊಬ್ಬನ ಮೇಲೆ ಯುವಕರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಆತನ ವಾಹನವನ್ನು ಪುಡಿಗಟ್ಟಿರುವ ಘಟನೆಯೊಂದು ಡಿ. 24ರ ರಾತ್ರಿ ಮಧ್ಯಪ್ರದೇಶದ (Madhya Pradesh) ಭೋಪಾಲ್ (Bhopal)ನಲ್ಲಿ ನಡೆದಿದೆ. ಇಲ್ಲಿನ ಲಾಲ್ ಘಾಟಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನಡು ರಸ್ತೆಯಲ್ಲಿ ನಡೆದಿರುವ ಈ ಹಲ್ಲೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ (Viral Video) ಆಗುತ್ತಿದೆ.
ಈ ಪ್ರಕರಣದ ಆರೋಪಿ ಬಿಜೆಪಿ (Bharatiya Janata Party)ಯೊಂದಿಗೆ ನಂಟು ಹೊಂದಿದ್ದಾನೆ ಎಂದು ಹೇಳಲಾಗುತ್ತಿದ್ದು, ಈತ ತನ್ನ ಗೆಳೆಯರ ಜತೆಗೆ ಸೇರಿಕೊಂಡು ಕ್ಯಾಬ್ ಚಾಲಕನ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದ್ದಾನೆ. ಇವರ ಸ್ಕಾರ್ಪಿಯೋ ವಾಹನದ ಎದುರು ಈ ಯುವಕ ತನ್ನ ಕ್ಯಾಬ್ ಅನ್ನು ಪಾರ್ಕ್ ಮಾಡಿದ ಎಂಬ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.
ನಡು ರಸ್ತೆಯಲ್ಲಿ ನಡೆದಿರುವ ಈ ಹಲ್ಲೆ ಘಟನೆಯ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯುವಕರು ಕ್ಯಾಬ್ ಚಾಲಕನನ್ನು ರಸ್ತೆಯಲ್ಲಿ ಎಳೆದಾಡಿಕೊಂಡು ಥಳಿಸುತ್ತಿರುವ ಮತ್ತು ಆತನ ಕ್ಯಾಬಿಗೆ ಹಾನಿಯುಂಟು ಮಾಡುತ್ತಿರುವ ದೃಶ್ಯಗಳು ಈ ವಿಡಿಯೊದಲ್ಲಿ ದಾಖಲಾಗಿದೆ. ಹಲ್ಲೆ ನಡೆಸಿದ ಯುವಕರಿಗೆ ಸೇರಿದ್ದ ಸ್ಕಾರ್ಪಿಯೋ ವಾಹನದಲ್ಲಿ ಬಿಜೆಪಿ ಧ್ವಜವಿತ್ತು ಮತ್ತು ವಿಐಪಿ ಸೈರನ್ ಕೂಡಾ ಅಳವಡಿಸಲಾಗಿತ್ತು ಎಂದು ತಿಳಿದುಬಂದಿದೆ. ಇದೆಲ್ಲವನ್ನೂ ನೋಡಿದಾಗ ಈ ದಾಂಧಲೆಕೋರರಿಗೆ ಕೇಸರಿ ಪಕ್ಷದ ನಂಟಿರುವುದು ಕಂಡುಬರುತ್ತಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಮೂಲಗಳ ಪ್ರಕಾರ ನಡುರಸ್ತೆಯಲ್ಲಿ ಗಲಾಟೆ ಮಾಡಿದ ದಾಂಧಲೆಕೋರರಿಗೆ ಬಿಜೆಪಿ ಜತೆಗೆ ನಂಟಿರುವುದಾಗಿ ತಿಳಿದುಬಂದಿದ್ದರೂ, ಇಲ್ಲಿಯವರಗೆ ಆರೋಪಿಗಳ ವಿವರ ಲಭ್ಯವಾಗಿಲ್ಲ. ಯುವಕರ ತಂಡದಿಂದ ಹಲ್ಲೆಗೊಳಗಾದ ಯುವಕನನ್ನು ಗೌರವ್ ರೈಕ್ವಾರ್ ಎಂದು ಗುರುತಿಸಲಾಗಿದೆ. ಕ್ಯಾಬ್ ಚಾಲಕನಾಗಿರುವ ಈ ಯುವಕ ಸ್ಥಳೀಯ ನಿವಾಸಿಯಾಗಿದ್ದಾನೆ. ಕ್ರಿಸ್ಮಸ್ ಸಂದರ್ಭದಲ್ಲಿ ಈ ಯುವಕ ಇಲ್ಲಿನ ಖಾಜುರಿ ಪ್ರದೇಶದಲ್ಲಿದ್ದ ಡಾಬಾಗೆ ತೆರಳಿದ್ದಾಗ ಈ ಘಟನೆ ನಡೆದಿದೆ.
ಡಾಬಾದ ಎದುರುಗಡೆ ನಿಂತಿದ್ದ ಗಲಭೆಕೋರ ಯುವಕರ ಸ್ಕಾರ್ಪಿಯೋದ ಎದುರು ಈತ ತನ್ನ ಕ್ಯಾಬ್ ಅನ್ನು ಪಾರ್ಕ್ ಮಾಡಿದ್ದ, ಈ ಸಂದರ್ಭದಲ್ಲ ಮಾತಿಗೆ ಮಾತು ಬೆಳೆದು ಗಲಾಟೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗಲಾಟೆ ನಡೆಯುವ ಸಂದರ್ಭದಲ್ಲಿ ಅಲ್ಲಿದ್ದ ಸಾರ್ವಜನಿಕರಲ್ಲಿ ಕೆಲವರು ಈ ಗಲಾಟೆಯ ವಿಡಿಯೊ ಮಾಡಿ ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿದಂತೆ ಕೋಹ್-ಇ-ಫಿಜ್ಹಾ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆಂದು ತಿಳಿದುಬಂದಿದೆ. ಸಂತ್ರಸ್ತ ಯುವಕ ಘಟನೆಗೆ ಸಂಬಂಧಿಸಿದಂತೆ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದಾನೆ. ದೂರಿನ ಆಧಾರದಲ್ಲಿ ತನಿಖೆ ಪ್ರಾರಂಭಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಅರೇ ಇದೇನಿದು ಕ್ರಿಸ್ಮಸ್ ಟ್ರೀ ಹೇರ್ ಸ್ಟೈಲ್? ಲಲನೆಯರು ಫುಲ್ ಫಿದಾ!