ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕ್ರೇಜ್ ಇರುತ್ತದೆ. ಕೆಲವರಿಗೆ ವಿಭಿನ್ನವಾದ ಅಡುಗೆ ಮಾಡಿಕೊಂಡು ತಿನ್ನಬೇಕು ಎಂಬ ಚಪಲವಿರುತ್ತದೆ. ಅದಕ್ಕೆ ಅಡುಗೆಯಲ್ಲಿ ನಾನಾ ರೀತಿಯ ಪ್ರಯೋಗ ಮಾಡುತ್ತಾರೆ. ಟರ್ಕಿಶ್ ಪಾಸ್ತಾ, ವಡ್ಕಾ ಪಾಸ್ತಾ ಹೀಗೆ ಏನೇನೋ ಖಾದ್ಯ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿತ್ತು. ಇದೀಗ ಸಿಂಗಾಪುರದ ಕ್ಯಾಲ್ವೀನ್ ಲೀ ಅವರ ಅಡುಗೆಯ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಂದ ಹಾಗೇ ಅವರು ಮಾಡಿದ ಆ ಖಾದ್ಯ ಯಾವುದು ಎಂಬ ಕುತೂಹಲ ನಿಮಗೂ ಇದೆಯಾ…? ನೀವು ಕೂಡ ಟ್ರೈ ಮಾಡಿ ನೋಡಬಹುದು.
ಕ್ಯಾಲ್ವೀನ್ ಲೀ ಅವರು ತಯಾರಿಸಿದ ಈ ವಿಶೇಷ ಬಗೆಯ ಖಾದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಯಾಕೆಂದರೆ ಇದಕ್ಕೆ ಅವರು ಬಳಸಿರುವುದು ಕೇವಲ ಎರಡೇ ಎರಡೇ ವಸ್ತುಗಳಂತೆ. ಅರೇ… ಎರಡೇ ಎರಡು ವಸ್ತುಗಳಿಂದ ಇವರೇನು ತಿಂಡಿ ತಯಾರಿಸಿದ್ದಾರೆ ಎಂಬ ಅನುಮಾನ ನಿಮಗೂ ಕಾಡ್ತಿದೆಯಾ….? ಇಲ್ಲಿದೆ ನೋಡಿ ಅವರ ವೈರಲ್ ರೆಸಿಪಿಯ ಮಾಹಿತಿ.
ಈ ವಿಡಿಯೊದಲ್ಲಿ ಅವರು ಒಂದು ಬಟ್ಟಲು ಬೇಯಿಸಿ ಹಿಸುಕಿ ಇಟ್ಟುಕೊಂಡ ಆಲೂಗಡ್ಡೆಗೆ ಒಂದಿಡೀ ಚಾಕೋಲೆಟ್ ಬಾರ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದ್ದಾರೆ. ನಂತರ ಅದಕ್ಕೆ ಬಣ್ಣ ಬಣ್ಣದ ಚಾಕೋಲೆಟ್ ಬಟನ್‌ಗಳನ್ನು ಸೇರಿಸಿದ್ದಾರೆ. ಕೊನೆಗೆ ಅದರ ರುಚಿ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. “ಬೇಯಿಸಿದ ಆಲೂಗಡ್ಡೆಗೆ ಚಾಕೋಲೆಟ್ ಮಿಕ್ಸ್ ಮಾಡಿರುವುದು ಸಖತ್ ರುಚಿಯಾಗಿತ್ತು. ಇನ್ನು ಚಾಕೋಲೆಟ್ ಬಟನ್‌ಗಳನ್ನು ಅದಕ್ಕೆ ಸೇರಿಸಿದ್ದರಿಂದ ಸಖತ್ ಕ್ರಂಚಿಯಾಗಿತ್ತು. ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ. ಇದು ತುಂಬಾನೇ ರುಚಿಯಾಗಿದೆ” ಎಂದಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು?
ಆಲೂಗಡ್ಡೆಯೊಂದಿಗೆ ಡಾರ್ಕ್ ಚಾಕೊಲೇಟ್ ಬಳಸುವುದು ಒಳ್ಳೆಯದಲ್ಲ ಎಂದು ಎಂದುಕೊಳ್ಳುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇತರರು ಇದನ್ನು “ನಿಷೇಧಿತ ಕುಕೀ ಹಿಟ್ಟು” ಎಂದು ಕರೆದಿದ್ದಾರೆ. ಇನ್ನು ಕೆಲವರು ಲೀ ಅವರ ಪಾಕವಿಧಾನವನ್ನು ಮನೆಯಲ್ಲಿ ಮಾಡಲು ತಯಾರಾಗಿದ್ದಾರಂತೆ. ಕೆಲವರು ಇದಕ್ಕೆ ಕಾಮೆಂಟ್ ವಿಭಾಗದಲ್ಲಿ ‘ಫೈರ್’ ಇಮೋಜಿಗಳನ್ನು ಹಾಕಿದ್ದಾರೆ.
ಇದನ್ನೂ ಓದಿ: ಸೂಪರ್ ಸ್ಟೆಪ್ಸ್ ಹಾಕಿ ನೆಟ್ಟಿಗರ ಮನ ಗೆದ್ದ ಮದುಮಗ; ವಿಡಿಯೊ ನೋಡಿ