ಥಾಣೆ: ಸಾಕುಪ್ರಾಣಿ ಬೋರ್ಡಿಂಗ್ ಸೌಲಭ್ಯದಲ್ಲಿ ಎರಡು ಸಾಕು ನಾಯಿಗಳು ಅಲ್ಲಿನ ಸಿಬ್ಬಂದಿ ತೀವ್ರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಥಾಣೆಯಲ್ಲಿ ಈ ಘಟನೆ ನಡೆದಿದ್ದು, ‘ಡಾಗ್ಸ್ ಅಂಡ್ ಮಿ’ ಕೇಂದ್ರದಲ್ಲಿ ತಮ್ಮ ಗೋಲ್ಡನ್ ರಿಟ್ರೀವರ್ ಮತ್ತು ಟಾಯ್ ಪೂಡಲ್ ಅನ್ನು ಥಳಿಸಿರುವುದನ್ನು ನೋಡಿ ಸಾಕುಪ್ರಾಣಿ ಮಾಲೀಕರು ಆಘಾತಕ್ಕೊಳಗಾಗಿದ್ದಾರೆ. ಎರಡು ಸಾಕುಪ್ರಾಣಿಗಳಲ್ಲಿ, ಪೂಡಲ್ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿದ್ದು, ಇದರ ಪರಿಣಾಮವಾಗಿ ಆ ನಾಯಿ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದೆ. ನಾಯಿಗಳ ಮೇಲೆ ಹಲ್ಲೆ ಮಾಡುವ ದೃಶ್ಯ ವೈರಲ್(Viral Video) ಆಗಿದ್ದು, ಸಿಬ್ಬಂದಿಗಳ ವಿರುದ್ಧ FIR ದಾಖಲಾಗಿದೆ.
ಸಿಬ್ಬಂದಿಯ ಈ ಕ್ರೂರ ವರ್ತನೆಯಿಂದ, ಡಾಲರ್ ಹೆಸರಿನ ಎಂಟು ತಿಂಗಳ ನಾಯಿ ಮರಿ ತನ್ನ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿತು. ನಂತರ ನಾಯಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು, ಅಲ್ಲಿ ಅದರ ಕಣ್ಣುಗುಡ್ಡೆಯನ್ನು ತೆಗೆದುಹಾಕಲಾಯಿತು. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ದೃಶ್ಯಗಳಲ್ಲಿ ಡಾಲರ್ ನಾಯಿಯ ಕಣ್ಣು ಊದಿಕೊಂಡಿದ್ದು, ಕಣ್ಣಿನ ಕೆಳಗೆ ರಕ್ತಸ್ರಾವವಾಗಿತ್ತು ಎಂದು ವರದಿಯಾಗಿದೆ.
ಆ್ಯನಿಮಲ್ ವೆಲ್ಫೇರ್ ಗ್ರೂಪ್ ಹಂಚಿಕೊಂಡ ವಿಡಿಯೊದಲ್ಲಿ ಥಾಣೆ ಮೂಲದ ಬೋರ್ಡಿಂಗ್ ಸ್ಥಳಕ್ಕೆ ಭೇಟಿ ನೀಡುವ ಮೊದಲು ಮತ್ತು ನಂತರ ನಾಯಿಯ ಫೋಟೋಗಳನ್ನು ಪ್ರದರ್ಶಿಸಲಾಗಿದ್ದು,ಇದರಲ್ಲಿ ಪ್ರಾಣಿಯ ಮೇಲೆ ಎಷ್ಟು ಕೆಟ್ಟದಾಗಿ ಹಲ್ಲೆ ಮಾಡಲಾಗಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಈ ನಡುವೆ ವಿಸ್ಕಿ ಎಂಬ ಮತ್ತೊಂದು ನಾಯಿ ಕೂಡ ಅಲ್ಲಿ ತೊಂದರೆಯನ್ನು ಅನುಭವಿಸಿದೆಯಂತೆ. ಈ ನಾಯಿಯ ಮೇಲೆ ಕೂಡ ಅನೇಕ ಬಾರಿ ದೈಹಿಕವಾಗಿ ಹಲ್ಲೆ ಮಾಡಲಾಗಿದೆಯಂತೆ.
“ನಮ್ಮ ನಾಯಿಗಳನ್ನು ನೋಡಿಕೊಳ್ಳುತ್ತಾರೆ ಎಂದು ನಾವು ಅವರನ್ನು ನಂಬಿದ್ದೆವು. ಆದರೆ ಅವರು ನಮಗೆ ಇಂತಹ ದ್ರೋಹ ಬಗೆದರು” ಎಂದು ಎರಡು ನಾಯಿಗಳ ಮಾಲೀಕರಾದ ಅಭಿಷೇಕ್ ಕುಮಾರ್ ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:ಈ ಬಸ್ ಚಾಲಕನ ಶ್ವಾನ ಪ್ರೀತಿಯನ್ನೊಮ್ಮೆ ನೋಡಿ; ಹೃದಯಸ್ಪರ್ಶಿ ವಿಡಿಯೊ ಭಾರೀ ವೈರಲ್
ಥಾಣೆ ಪೊಲೀಸರು ಈ ಘಟನೆಯನ್ನು ಗಮನಿಸಿ ಬಿಎನ್ಎಸ್ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. “ಪೆಟಾ ಇಂಡಿಯಾದ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ನಾಯಿ ಮಾಲೀಕರು ವರ್ತಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), 2023 ರ ಸೆಕ್ಷನ್ 325 ಮತ್ತು 3 (5) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ಪಿಸಿಎ) ಕಾಯ್ದೆ, 1960 ರ ಸೆಕ್ಷನ್ 11 (1) (ಎ) ಅಡಿಯಲ್ಲಿ ‘ಡಾಗ್ ಆ್ಯಂಡ್ ಮಿ ಸಾಕುಪ್ರಾಣಿಗಳ ರೆಸಾರ್ಟ್ ಮತ್ತು ತರಬೇತಿ ಶಾಲೆಯ’ ಮಾಲೀಕರು ಮತ್ತು ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ” ಎಂದು ಪೆಟಾ ಇಂಡಿಯಾದ ಅಶರ್ ಮೀಟ್ ಮಾಹಿತಿ ನೀಡಿದೆ.