Friday, 10th January 2025

Viral Video: ಇಸ್ಲಾಂ ಧರ್ಮಗುರುವಿನ ಟರ್ಬನ್‌ ಕಸಿದುಕೊಂಡ ಮಹಿಳೆ; ಈ ವಿಡಿಯೊ ಭಾರೀ ವೈರಲ್‌

Viral Video

ಟೆಹ್ರಾನ್‍: ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಜಗಳವಾಡುತ್ತಾ ಧರ್ಮಗುರುವಿನ ಪೇಟವನ್ನು ತೆಗೆದು ಅದನ್ನು ಸ್ಕಾರ್ಫ್‍ನಂತೆ ತಲೆಯ ಮೇಲೆ ಕಟ್ಟಿಕೊಂಡು ಪ್ರತಿಭಟಿಸಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ತಾತ್ಕಾಲಿಕ ಹಿಜಾಬ್ ಧರಿಸುವಂತೆ ಧರ್ಮಗುರು ಮಹಿಳೆಗೆ ಹೇಳಿದಕ್ಕೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ವೈರಲ್ ವಿಡಿಯೊದಲ್ಲಿ ಮಹಿಳೆ ಧರ್ಮಗುರುವಿನ ಪೇಟವನ್ನು ತೆಗೆದು ಅದನ್ನು ತಲೆಗೆ ಸುತ್ತಿಕೊಂಡಿದ್ದಾಳೆ. ನಂತರ ಧರ್ಮಗುರುವಿನ  ಬಳಿ, ” ಈಗ ನಿಮಗೆ ಗೌರವ ಸಿಕ್ಕಿತಾ?” ಎಂದು ಪ್ರಶ್ನಿಸಿದ್ದಾರೆ. ಅನೇಕರು ಮಹಿಳೆಯನ್ನು ಹೊಗಳಿ ಈ ವಿಡಿಯೊಗೆ ಕಾಮೆಂಟ್ ಮಾಡಿದ್ದಾರೆ. “ಇಂತಹ ಧೈರ್ಯಶಾಲಿ, ಮಹಿಳೆಯರ ಪ್ರತಿರೋಧವು ಇಸ್ಲಾಮಿಕ್ ಆಡಳಿತದ ಅವನತಿಗೆ ಯಶಸ್ವಿಯಾಗಿ ಕಾರಣವಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ.  ಅವರ ಅಸಾಧಾರಣ ಧೈರ್ಯವನ್ನು ನಾನು ಗೌರವಿಸುತ್ತೇನೆ. ಇರಾನಿನ ಮಹಿಳೆಯರನ್ನು ಗೌರವಿಸುವ ದಿನ ಬರಲಿದೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಆದರೆ ಇರಾನ್‍ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಗೆ ಸಂಬಂಧಿಸಿದ ಮಾಧ್ಯಮ ಸಂಸ್ಥೆಯೊಂದು ಈ ಘಟನೆಯು ಹಿಜಾಬ್ ವಿಷಯಕ್ಕೆ ಸಂಬಂಧಿಸಿಲ್ಲ ಎಂದು ವರದಿ ಮಾಡಿದೆ ಮತ್ತು ಮಹಿಳೆಯನ್ನು ಬಂಧಿಸಲಾಯಿತು. ಆದರೆ ದೂರುದಾರರು ಒಪ್ಪಿಗೆ ನೀಡಿದ ನಂತರ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದೆ.

ಇರಾನ್‍ನಲ್ಲಿ 2022 ರಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮಹ್ಸಾ ಅಮಿನಿ ಸಾವನ್ನಪ್ಪಿದ ನಂತರ ಈ ಘರ್ಷಣೆ ಸಂಭವಿಸಿತಂತೆ. ಅಮಿನಿ ಅವರ ಸಾವು ಇರಾನ್‍ನ ಕಡ್ಡಾಯ ಹಿಜಾಬ್ ಕಾನೂನುಗಳ ಜಾರಿಯ ವಿರುದ್ಧ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ವಿಮಾನ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಡ್ರೆಸ್ ಕೋಡ್ ಅನ್ನು ಹೆಚ್ಚಾಗಿ ಉಲ್ಲಂಘಿಸಿದರು.

ಇಸ್ರೇಲಿ ಸುದ್ದಿ ಸಂಸ್ಥೆ ಕಾನ್ 11 ಕೂಡ ಈ ಘಟನೆಯನ್ನು ಎತ್ತಿ ತೋರಿಸಿದೆ. ಮತ್ತು ಇದು ಕಡ್ಡಾಯ ಹಿಜಾಬ್ ಧರಿಸಬೇಕೆಂಬ ನಿಯಮದ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಹಿಜಾಬ್ ಕಾನೂನಿಗೆ ವಿರುದ್ಧವಾಗಿ ಟೆಹ್ರಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಕಳೆದ ವರ್ಷ ಇರಾನ್‍ನ ಕಟ್ಟುನಿಟ್ಟಾದ ಇಸ್ಲಾಮಿಕ್ ಡ್ರೆಸ್ ಕೋಡ್ ವಿರುದ್ಧ ಪ್ರತಿಭಟಿಸಿ ಇರಾನಿನ ವಿಶ್ವವಿದ್ಯಾಲಯದಲ್ಲಿ ತನ್ನ ಒಳ ಉಡುಪುಗಳನ್ನು ಬಿಚ್ಚಿದ್ದಾಳೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ:ಅಬ್ಬಾ… ಎಂಥಾ ಭೀಕರ ದೃಶ್ಯ! ವಿಮಾನ ನಿಲ್ದಾಣದಲ್ಲಿ ಬ್ಯಾಗೇಜ್ ಕನ್ವೇಯರ್ ಬೆಲ್ಟ್ ಒಳಗೆ ಹೋದ ವೃದ್ಧೆ

ವರದಿಗಳ ಪ್ರಕಾರ, ಇರಾನಿನ ಅಧಿಕಾರಿಗಳು ವಿವಿಧ ಕ್ರಮಗಳ ಮೂಲಕ ಹಿಜಾಬ್ ಜಾರಿಯನ್ನು ತೀವ್ರಗೊಳಿಸುತ್ತಿದ್ದಾರೆ. ಡಿಸೆಂಬರ್‌ನಲ್ಲಿ, 30,000 ಕ್ಕೂ ಹೆಚ್ಚು ಮಹಿಳೆಯರು ಡ್ರೆಸ್ ಕೋಡ್ ಅನ್ನು ಅನುಸರಿಸದ ಕಾರಣ ಅವರ ವಿರುದ್ಧ  ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಇರಾನ್‍ನ ಮಾನವ ಹಕ್ಕುಗಳ ಕಾರ್ಯಕರ್ತರು (ಎಚ್ಆರ್‌ಎಎನ್‍ಎ) ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ವಿಮಾನ ನಿಲ್ದಾಣದ ಅಧಿಕಾರಿಗಳು ಹಿಜಾಬ್ ಧರಿಸದ ಮಹಿಳೆಯರಿಗೆ ಸೇವೆಗಳನ್ನು ನಿರಾಕರಿಸಿದ್ದಾರೆ ಮತ್ತು ಮಹಿಳೆಯರು ನಿಯಮವನ್ನು ಪಾಲಿಸುವಂತೆ ಮೇಲ್ವಿಚಾರಣೆ ಮಾಡಲು ಕೆಲವು ವ್ಯಕ್ತಿಗಳನ್ನು ನಿಯೋಜಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *