ಮಕ್ಕಳು ಪ್ರಯಾಣ ಮಾಡುವ ಸಮಯದಲ್ಲಿ ಅಳುವುದು, ಹಠ ಮಾಡುವುದು ಸಾಮಾನ್ಯ. ಆದರೆ ಇದು ಸಹ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ವಿಮಾನದಲ್ಲಿ ಪ್ರಯಾಣಿಸುವಾಗ ಪುಟ್ಟ ಬಾಲಕಿಯೊಬ್ಬಳು ಜೋರಾಗಿ ಅತ್ತಿದ್ದು, ಆಕೆಯನ್ನು ಸಮಾಧಾನಪಡಿಸಲು ಸಂಗೀತಗಾರರೊಬ್ಬರು ವಿಮಾನದಲ್ಲಿ ಸಂಗೀತ ಕಛೇರಿ ನಡೆಸಿದ್ದಾರೆ. ಪುಟ್ಟ ಬಾಲಕಿಯನ್ನು ರಂಜಿಸುವ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಲೆಬನಾನ್ ಮೂಲದ ಕಲಾವಿದ ಮಿಡೋ ಬಿರ್ಜಾವಿ ದರ್ಬುಕಾ ಎಂಬ ಗೋಬ್ಲೆಟ್ ಆಕಾರದ ಸಂಗೀತ ವಾದ್ಯವನ್ನು ನುಡಿಸಿ ಪುಟ್ಟ ಬಾಲಕಿಯನ್ನು ಸಮಾಧಾನ ಮಾಡಿದ್ದಾರೆ.
ಸಂಗೀತಗಾರನ ಈ ಪ್ರದರ್ಶನವು ಪುಟ್ಟ ಬಾಲಕಿಯ ಗಮನ ಸೆಳೆಯಲು ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಅವಳನ್ನು ಸಮಾಧಾನಪಡಿಸುವ ಪ್ರಯತ್ನವಾಗಿದೆ ಎನ್ನಲಾಗಿದೆ. ವಿಡಿಯೊದಲ್ಲಿ, ಮಿಡೋ ಸಂಗೀತ ಪ್ರದರ್ಶನ ಪುಟ್ಟ ಮಕ್ಕಳನ್ನು ರಂಜಿಸುವುದು ಮಾತ್ರವಲ್ಲದೆ ವಿಮಾನದಲ್ಲಿದ್ದ ಇತರ ಪ್ರಯಾಣಿಕರರಿಗೂ ಮನೋರಂಜನೆ ನೀಡಿದೆ. ಮಗುವನ್ನು ಹುರಿದುಂಬಿಸಲು ಇಡೀ ವಿಮಾನದಲ್ಲಿದ್ದ ಪ್ರಯಾಣಿಕರು ಸಂಗೀತಗಾರನಿಗೆ ಸಾಥ್ ನೀಡಿದ್ದಾರೆ. ಮಿಡೋ ಪುಟ್ಟ ಮಗುವಿಗಾಗಿ ‘ಬೇಬಿ ಶಾರ್ಕ್’ ನುಡಿಸಿ ಹಾಡಿದ್ದಾರೆ.
ಮಿಡೋ ಜನಪ್ರಿಯ ಬೀಟ್ನ ಸಾಹಿತ್ಯಕ್ಕೆ ಟ್ಯೂನ್ ಮಾಡುತ್ತಿದ್ದಂತೆ, ವಿಮಾನ ಪ್ರಯಾಣಿಕರು ಚಪ್ಪಾಳೆ ತಟ್ಟುವ ಮೂಲಕ ಅವರೊಂದಿಗೆ ಸೇರಿಕೊಂಡರು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಂ ವಿಡಿಯೊವನ್ನು ಹಂಚಿಕೊಳ್ಳುವಾಗ ಮಿಡೋ “ಬೇಬಿ ಶಾರ್ಕ್ ಆನ್ಬೋರ್ಡ್” ಎಂದು ಬರೆದಿದ್ದಾರೆ. ಡಿಸೆಂಬರ್ 21 ರಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾದ ಮ್ಯೂಸಿಕ್ ರೀಲ್ ಈಗಾಗಲೇ ವೈರಲ್ ಆಗಿದ್ದು, 5.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಈ ಸುದ್ದಿಯನ್ನೂ ಓದಿ:ಲೋಕಲ್ ಟ್ರೈನ್ನಲ್ಲಿ ಕಣ್ಮನ ಸೆಳೆದ ಗಗನಸಖಿ; ಫಿದಾ ಆದ ನೆಟ್ಟಿಗರು-ವಿಡಿಯೊ ನೋಡಿ
ಇದಕ್ಕೆ ಅನೇಕರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. “ವಿಮಾನದಲ್ಲಿ ಅಳುವ ಮಕ್ಕಳನ್ನು ಸಮಾಧಾನ ಪಡಿಸಲು ಇದು ಒಂದು ಉದಾಹರಣೆಯಾಗಿದೆ. ಮಗುವನ್ನು ರಂಜಿಸಿದ ಅಂಕಲ್ಗೆ ಅಭಿನಂದನೆಗಳು” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಪ್ರಯಾಣಿಕರು ಮಗುವಿಗಿಂತ ಹೆಚ್ಚು ಸಂತೋಷವಾಗಿದ್ದರು ಎಂದು ನಾನು ಭಾವಿಸುತ್ತೇನೆ” ಎಂದು ಇನ್ನೊಬ್ಬರು ಬರೆದಿದ್ದಾರೆ. “ಅವಳು (ಪುಟ್ಟ ಹುಡುಗಿ) ಆ ಅನುಭವವನ್ನು ಖಂಡಿತವಾಗಿಯೂ ಮರೆಯುವುದಿಲ್ಲ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.