ಜಬಲ್ಪುರ: ರೈಲ್ವೇ ಬೋಗಿಯಡಿಯಲ್ಲಿ (Train Coach) ವ್ಯಕ್ತಿಯೊಬ್ಬ ಅಡಗಿ ಕುಳಿತು ಸುಮಾರು 290 ಕಿ.ಮೀ. ಪ್ರಯಾಣಿಸಿರುವ ವಿಚಿತ್ರ ಮತ್ತು ವಿಕ್ಷಿಪ್ತ ಘಟನೆಯೊಂದು ಮಧ್ಯಪ್ರದೇಶದ (Madhya Pradesh) ಜಬಲ್ಪುರದಿಂದ (Jabalpur) ವರದಿಯಾಗಿದೆ. ಮತ್ತು ರೈಲು ಅಧಿಕಾರಿಗಳು ನಿಲ್ದಾಣದಲ್ಲಿ ಬೋಗಿ ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಬೋಗಿಯ ಟ್ರಾಲಿ ಅಡಿಯಿಂದ ವ್ಯಕ್ತಿ ಹೊರಗೆ ಬರುತ್ತಿರುವ ವಿಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral Video) ಆಗಿದೆ.
ದಾನಾಪುರ್ ಎಕ್ಸ್ ಪ್ರೆಸ್ (Danapur Express) ರೈಲಿನಲ್ಲಿ ಈ ಘಟನೆ ನಡೆದಿದ್ದು, ಈ ವ್ಯಕ್ತಿ ಈ ರೈಲಿನಲ್ಲಿ ಇಟ್ರಾಸಿಯಿಂದ (Itarsi) ಜಬಲ್ಪುರದವರೆಗೆ (Jabalpur) ಸುಮಾರು 290 ಕಿಲೋ ಮೀಟರ್ ಇದೇ ರೀತಿಯಲ್ಲಿ ಪ್ರಯಾಣಿಸಿರುವುದು ಇದೀಗ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ. ಜಬಲ್ಪುರ ರೈಲ್ವೇ ನಿಲ್ದಾಣದ ಸಮೀಪ ರೋಲಿಂಗ್ ಟೆಸ್ಟ್ ನಡೆಸುತ್ತಿದ್ದ ಸಂದರ್ಭದಲ್ಲಿ, ಕ್ಯಾರೇಜ್ ಮತ್ತು ವ್ಯಾಗನ್ ವಿಭಾಗದ ಸಿಬ್ಬಂದಿಗಳು ಬೋಗಿಯ ಅಡಿಯಲ್ಲಿ ಅಡಗಿ ಕುಳಿತಿದ್ದ ಈ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.
ರೈಲ್ವೇ ಸಿಬ್ಬಂದಿಗಳು ರೈಲಿನ ಪ್ರತೀ ಬೋಗಿಗಳ ನಿಯಮಿತ ಅಂಡರ್-ಗೇರ್ ಪರೀಕ್ಷೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಎಸ್.4 ಬೋಗಿಯಡಿಯಲ್ಲಿ ಈ ವ್ಯಕ್ತಿ ಮಲಗಿಕೊಂಡು ಇದ್ದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಈ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ, ಆತ ತಾನು ಈ ರೈಲನ್ನು ಇಟ್ರಾಸಿಯಲ್ಲಿ ಹತ್ತಿಕೊಂಡಿರುವುದನ್ನು ಒಪ್ಪಿಕೊಂಡಿರುವುದಾಗಿ ರೈಲ್ವೇ ಮೂಲಗಳು ಖಚಿತಪಡಿಸಿವೆ.
ಲಭ್ಯ ಮಾಹಿತಿಗಳ ಪ್ರಕಾರ, ದಾನಾಪುರ ಎಕ್ಸ್ ಪ್ರೆಸ್ ರೈಲಿನ ನಿಯಮಿತ ತಪಾಸಣೆಯ ಸಂದರ್ಭದಲ್ಲಿ ಸಿ ಆಂಡ್ ಡಬ್ಲ್ಯು ಸಿಬ್ಬಂದಿಗಳಿಗೆ ವಿಚಿತ್ರವೊಂದು ಗೋಚರಿಸುತ್ತದೆ. ಈ ರೈಲಿ ಎಸ್-4 ಬೋಗಿಯ ಅಡಿಯಲ್ಲಿ ವ್ಯಕ್ತಿಯೊಬ್ಬ ಇರುವುದು ಅವರ ಕಣ್ಣಿಗೆ ಬೀಳುತ್ತದೆ. ಇದರಿಂದ ಶಾಕ್ ಗೊಳಗಾದ ರೈಲ್ವೇ ಸಿಬ್ಬಂದಿಗಳು ಕೂಡಲೇ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ರೈಲ್ವೇ ಪೊಲೀಸರು, ಬೋಗಿಯಡಿಯಲ್ಲಿ ಅಡಗಿದ್ದ ವ್ಯಕ್ತಿಯನ್ನು ಹೊರಬರುವಂತೆ ಸೂಚಿಸಿ, ಬಳಿಕ ಆತನನ್ನು ತಮ್ಮ ಕಸ್ಟಡಿಗೆ ಪಡೆದುಕೊಳ್ಳುತ್ತಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಸುದ್ದಿಯನ್ನೂ ಓದಿ: Viral Video: ಸ್ಕೂಟರ್ ಸವಾರನ ಪ್ರಾಣ ಕಸಿದ ಹೆಲ್ಮೆಟ್ ಒಳಗೆ ಅಡಗಿ ಕುಳಿತಿದ್ದ ಮರಿನಾಗರ – ಇಲ್ಲಿದೆ ಶಾಕಿಂಗ್ ವಿಡಿಯೋ!
ಈ ವಿಡಿಯೋದಲ್ಲಿರುವಂತೆ, ರೈಲು ಬೋಗಿಯ ಅಡಿಯಿಂದ ಹೊರಬಂದ ವ್ಯಕ್ತಿ ಪಾನಮತ್ತ ಸ್ಥಿತಿಯಲ್ಲಿರುವುದು ಗೊತ್ತಾಗುತ್ತದೆ ಮತ್ತು ಆತ ಬೋಗಿಯಡಿಯಲ್ಲಿ ಒಂದು ಹಗ್ಗವನ್ನು ಹಿಡಿದುಕೊಂಡು ನೇತಾಡುತ್ತಿದ್ದ ಎನ್ನುವುದು ಗೊತ್ತಾಗಿದೆ. ಈತ ಎಲ್ಲಿಯ ನಿವಾಸಿ ಮತ್ತು ಈತ ಈ ರೀತಿಯಾಗಿ ಬೋಗಿಯ ಅಡಿಭಾಗಕ್ಕೆ ಹೇಗೆ ಪ್ರವೇಶಿಸಿದ ಎನ್ನುವ ಮಾಹಿತಿಗಳು ಇನ್ನಷ್ಟೇ ತಿಳಿದುಬರಬೇಕಿದೆ. ರೈಲ್ವೇ ರಕ್ಷಣಾ ಪಡೆ ಆ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದು ಆತನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ಇನ್ನೂ ಪ್ರಗತಿಯಲ್ಲಿದೆ.