Sunday, 5th January 2025

Viral Video: ‘ಇವ್ರ ರೀಲ್ ಹುಚ್ಚಿಗೆ ಬೆಂಕಿ ಬೀಳ..!’ : ಹೆದ್ದಾರಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿ – ವಿಡಿಯೊ ನೋಡಿ

ಲಖನೌ: ಸೋಷಿಯಲ್ ಮೀಡಿಯಾದಲ್ಲಿ (Social Media) ಬಿಟ್ಟಿ ಪ್ರಚಾರ ಮತ್ತು ಫೇಮಸ್ ಆಗುವ ಉದ್ದೇಶದಿಂದ ಕೆಲವರು ಏನೇನೋ ಹುಚ್ಚು ಸಾಹಸಗಳನ್ನು ಮಾಡುತ್ತಿರುವುದನ್ನು ನಾವು ಕೇಳುತ್ತಲೇ ಇರುತ್ತೇವೆ. ಅಂತದ್ದೇ ಒಂದು ಪ್ರಕರಣದಲ್ಲಿ ಹೆದ್ದಾರಿಯಲ್ಲಿ ಯುವಕನೊಬ್ಬ ಬೆಂಕಿಯೊಂದಿಗೆ ಸರಸವಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮತ್ತು ಈ ಯುವಕನ ಈ ಹುಚ್ಚಾಟದ ಸುದ್ದಿ ಹಾಗೂ ವಿಡಿಯೊ ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಅಗಿದೆ.

ಈ ಘಟನೆ ಉತ್ತರಪ್ರದೇಶದ (Uttar Pradesh) ಫತೇಪುರದ (Fatehpur) ರಾಷ್ಟ್ರೀಯ ಹೆದ್ದಾರಿ-2ರಲ್ಲಿ (NH 2) ಈ ಘಟನೆ ನಡೆದಿದ್ದು, ಶೇಖ್ ಬಿಲಾಲ್ ಎಂಬ ಯುವಕನೊಬ್ಬ ‘2024’ ಎಂದು ರಸ್ತೆಯಲ್ಲಿ ಬರೆದು ಅದರ ಮೇಲೆ ಪೆಟ್ರೋಲ್ ಸುರಿದು ಅದಕ್ಕೆ ಸ್ಟೈಲಿಷಾಗಿ ಬೆಂಕಿ ಕಡ್ಡಿ ಗೀರಿ ಬಿಸಾಕಿದ್ದಾನೆ. ಅದು ಹೊತ್ತಿ ಉರಿಯುತ್ತಿರುವುದನ್ನು ವಿಡಿಯೊ ಮಾಡಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ಯುವಕನ ಈ ಕೃತ್ಯಕ್ಕೆ ಇದೀಗ ನೆಟ್ಟಿಗರು ಗರಂ ಆಗಿದ್ದು, ಈತನ ಈ ಕಿಲಾಡಿತನವನ್ನು ಟೀಕಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿರುವ ಈ ವೈರಲ್ ವಿಡಿಯೋ ಕ್ಲಿಪ್‌ನಲ್ಲಿ ಈ ರೀತಿಯಾಗಿ ಬರೆಯಲಾಗಿದೆ. ‘ಶೇಖ್ ಬಿಲಾಲ್ ಎಂಬ ಯುವಕನೊಬ್ಬ ಫತೇಪುರದ ಬಳಿ, ರಾ.ಹೆ.-2ರಲ್ಲಿ ತನ್ನ ಥಾರ್ (Thar) ಗಾಡಿಯ ಮುಂದೆ ನಿಂತುಕೊಂಡು ಪೆಟ್ರೋಲ್ ಸುರಿಯುವ ಮೂಲಕ ರಸ್ತೆಗೆ ಬೆಂಕಿ ಹಚ್ಚಿದ್ದಾನೆ’ ಎಂಬ ಕ್ಯಾಪ್ಷನ್ ನೀಡಿ ಶೇರ್ ಮಾಡಲಾಗಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದು, ನೆಟ್ಟಿಗರು ಈ ಯುವಕನ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಯುವಕನ ಈ ಹುಚ್ಚಾಟ ಸಾರ್ವಜನಿಕ ಸುರಕ್ಷತೆಗೆ ಭಂಗ ತಂದಿರುವುದು ಮಾತ್ರವಲ್ಲದೇ ಹಲವು ಕಾನೂನುಗಳ ಉಲ್ಲಂಘನೆಯೂ ಆಗಿದೆ.

ಈ ಘಟನೆ ಬೆಳಕಿಗೆ ಬಂದ ತಕ್ಷಣವೇ ಫತೇಪುರ ಪೊಲೀಸರು ಯುವಕನ ಮೇಲೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಮತ್ತು ಇದಕ್ಕೆ ಸಂಬಂಧಿಸಿದಂತೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಅಧಿಕಾರಿಗಳು, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೊಟ್ವಾಲಿ ಪೊಲೀಸರು ಬಂ‍ಧಿಸಿದ್ದಾರೆ ಹಾಗೂ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆಯೂ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವ ಮೂಲಕ ಕಿಡಿಗೇಡಿ ಕೃತ್ಯಗಳು ನಡೆದಿರುವ ಉದಾಹರಣೆಗಳಿವೆ. ಉತ್ತರ ಪ್ರದೇಶದ ಮೀರತ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮಹೀಂದ್ರ ಥಾರ್ ಎಸ್.ಯು.ವಿ.ನಲ್ಲಿ (SUV) ಅಪಾಯಕಾರಿ ಸ್ಟಂಟ್ ನಿರ್ವಹಿಸಿ ವಿವಾದಕ್ಕೀಡಾಗಿದ್ದಾನೆ. ಇಲ್ಲಿನ ಮುಂಡಾಲಿ ಗ್ರಾಮದ ಇಂತೆಝಾರ್ ಆಲಿ ಎಂಬ ವ್ಯಕ್ತಿ ತನ್ನ ಥಾರ್ ವಾಹನದ ಮೇಲ್ಬಾಗಕ್ಕೆ ಮಣ್ಣನ್ನು ಸುರಿದು ಬಳಿಕ ತನ್ನ ವಾಹನವನ್ನು ವೇಗವಾಗಿ ಓಡಿಸಿದ್ದ. ಗಾಡಿ ವೇಗವಾಗಿ ಸಾಗುವಾಗ ಅದರ ಮೇಲಿದ್ದ ಮಣ್ಣು ಧೂಳಿನ ಕಣಗಳು ಎಲ್ಲಾ ಕಡೆಗಳಿಗೂ ಸ್ಪ್ರೆಡ್ ಆಗಿತ್ತು, ಇದರಿಂದಾಗಿ ಆ ರಸ್ತೆಯಲ್ಲಿ ಸಾಗುವವರಿಗೆ ಇದು ಅಪಾಯಕಾರಿಯಾಗಿ ಪರಿಣಮಿಸಿತ್ತು. ಇದರ ವಿಡಿಯೋ ಆ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ: Viral News: ಕೊರಿಯಾ ಪಾಪ್‌ ತಾರೆಯರ ಭೇಟಿಗೆ ಹಣ ಹೊಂದಿಸಲು ಖತರ್ನಾಕ್ ಬಾಲಕಿಯರು ಮಾಡಿದ್ದೇನು ಗೊತ್ತಾ? ಪೊಲೀಸರೇ ಶಾಕ್‌

ಈ ವಿಡಿಯೋ ಸಹ ಬಹಳಷ್ಟು ವಿವಾದವನ್ನು ಸೃಷ್ಟಿಸಿತ್ತು, ಬಳಿಕ ಮೀರತ್ ಪೊಲೀಸರು ಮಧ್ಯಪ್ರವೇಶಿಸಿ, ಆ ವಿಡಿಯೋದ ಆಧಾರದಲ್ಲಿ ವಾಹನವನ್ನು ಪತ್ತೆ ಹಚ್ಚಿ ಅದನ್ನು ಸೀಝ್ ಮಾಡಿದ್ದರು. ಇನ್ನೊಂದು ವಿಲಕ್ಷಣ ಘಟನೆಯಲ್ಲಿ, ಹರ್ಯಾಣದ ಪಾಣಿಪತ್‌ನ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಯುವಕನೊಬ್ಬ ರೀಲ್ ಹುಚ್ಚಿನಲ್ಲಿ ಮಹಿಳೆಯರ ಬ್ರಾ ಮತ್ತು ಪ್ಯಾಂಟ್ ಧರಿಸಿ ಗೊಂದಲಕ್ಕೆ ಕಾರಣನಾಗಿದ್ದ. ಬಳಿಕ ಅಲ್ಲಿದ್ದವರೆಲ್ಲಾ ಆಕ್ಷೇಪಿಸಿದ ಬಳಿಕ ಆತ ಅಲ್ಲಿಂದ ಕಾಲ್ಕಿತ್ತಿದ್ದ.