ಲಖನೌ: ಆರಕ್ಷಕ ಠಾಣೆ (Police Station) ಮತ್ತು ಆರಕ್ಷಕರು ಇರೋದು ನಾಗರಿಕರಾದ ನಮ್ಮ ರಕ್ಷಣೆಗಾಗಿ ಮತ್ತು ನಮ್ಮ ದೂರುಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರವನ್ನು ಕೊಡುವುದಕ್ಕಾಗಿ. ಆದರೆ, ಇಲ್ಲೊಂದು ಪ್ರಕರಣದಲ್ಲಿ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ..’ ಎಂಬ ಗಾದೆ ಮಾತಿನಂತೆ ಠಾಣೆಗೆ ದೂರು ನೀಡಲು ಹೋದ ವ್ಯಕ್ತಿಗೇ ಪೊಲೀಸ್ ಅಧಿಕಾರಿ ‘ಏನು..? ಎತ್ತ..?’ ಎಂದು ಕೇಳದೆ, ಆತನ ಕೆನ್ನೆಗೆ ರಪ ರಪನೆ ಬಾರಿಸಿದ ಸುದ್ದಿ ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋ ಒಂದು ದೇಶದ ಗಮನವನ್ನು ಸೆಳೆದಿದ್ದು ಎಲ್ಲೆಡೆ ವೈರಲ್ (Viral Video) ಆಗುತ್ತಿದೆ.
ಉತ್ತರಪ್ರದೇಶದಲ್ಲಿ (Uttar Pradesh) ಈ ಘಟನೆ ನಡೆದಿದ್ದು, ಇಲ್ಲಿನ ಝಾನ್ಸಿ (Jhansi) ಪೊಲೀಸ್ ಠಾಣೆಗೆ ದೂರು ನೀಡಲೆಂದು ಹೋದ ವ್ಯಕ್ತಿಯೊಬ್ಬರಿಗೆ ಅಲ್ಲಿನ ಠಾಣಾಧಿಕಾರಿ (SHO) ಸುಧಾಕರ್ ಕಶ್ಯಪ್ ರಪ ರಪನೆ ಕೆನ್ನಗೆ ಬಾರಿಸಿದ್ದು, ಶಾಕಿಂಗ್ ವಿಚಾರವೆಂದ್ರೆ ಈ ಪೊಲೀಸಪ್ಪ ಆ ವ್ಯಕ್ತಿಯ ಕೆನ್ನೆಗೆ 41 ಸೆಕೆಂಡ್ಸ್ ನಲ್ಲಿ 31 ಏಟುಗಳನ್ನು ಬಾರಿಸಿದ್ದಾರೆ. ಈ ಜನ ನೆಕ್ಸ್ಟ್ ಐಪಿಎಲ್ ಗೆ (IPL) ಹಾರ್ಡ್ ಹಿಟ್ಟರ್ ಪ್ಲೇಸ್ ಗೆ ಏನಾದ್ರೂ ಟ್ರೈ ಮಾಡ್ತಿರ್ಬೋದಾ ಮಾರ್ರೆ..!?
ಸಂತ್ರಸ್ತ ವ್ಯಕ್ತಿ ತಾನೇ ರೆಕಾರ್ಡ್ ಮಾಡಿಕೊಂಡಿರುವುದಾಗಿ ನಂಬಲಾಗಿರುವ ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾ (Social Media) ತುಂಬಾ ಹರಿದಾಡುತ್ತಿದ್ದು, ಪೊಲೀಸ್ ವ್ಯವಸ್ಥೆಯ ಕುರಿತಾಗಿ ಜನರು ಆತಮಕ ಪಡುವಂತಾಗಿದೆ. ಈ ವಿಡಿಯೋದಲ್ಲಿರುವಂತೆ ಸಂತ್ರಸ್ತ ವ್ಯಕ್ತಿ ಠಾಣೆಯ ಒಳಭಾಗಕ್ಕೆ ತಲುಪುವ ಮುಂಚೆಯೇ ಸುಧಾಕರ್ ಆ ವ್ಯಕ್ತಿಯ ದೂರನ್ನೂ ಆಲಿಸದೇ ಆತನ ಕೆನ್ನೆಗೆ ರಪ ರಪನೆ ಬಾರಿಸಲಾರಂಭಿಸಿದ್ದಾರೆ.
ಸಂತ್ರಸ್ತ ವ್ಯಕ್ತಿ ಯಾವ ವಿಚಾರದಲ್ಲಿ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲವಾದರೂ, ಆತನಿಗೆ ಪೊಲೀಸ್ ಠಾಣೆಯಲ್ಲಿ ಭರ್ಜರಿ ‘ಕಜ್ಜಾಯ’ ಸಿಕ್ಕಿರುವುದು ಮಾತ್ರ ಇದೀಗ ಹಾಟ್ ಟಾಪಿಕ್ ಆಗಿ ಚರ್ಚೆಯಲ್ಲಿದೆ.
ಕಶ್ಯಪ್ ಸಂತ್ರಸ್ತ ವ್ಯಕ್ತಿಗೆ ಗ್ಯಾಪ್ ನಿಡದೆ ಬಾರಿಸುತ್ತಿರುವಾಗ, ಆ ವ್ಯಕ್ತಿ ಶಾಕ್ ಗೆ ಒಳಗಾಗಿದ್ದು, ‘ಆಪ್ ಹಮೇ ಮಾರ್ ಕಹೇ ರಹೇ ಹೈ? (ನೀವು ನನಗ್ಯಾಕೆ ಹೊಡೆಯುತ್ತಿದ್ದೀರಿ) ಎಂದು ಕೇಳುತ್ತಿರುವುದು ಆ ವಿಡಿಯೋದಲ್ಲಿ ದಾಖಲಾಗಿದೆ. ಒಂದೊಂದು ಪೆಟ್ಟಿಗೂ ಆ ವ್ಯಕ್ತಿ ಈ ಪ್ರಶ್ನೆಯನ್ನು ರಿಪೀಟ್ ಆಗಿ ಕೇಳುತ್ತಲೇ ಇದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಥಂಡಿ ಹವಾಗೆ ‘ಥಂಡಿ’ ಹೊಡೆದ ವರ; ಮಂಟಪದಲ್ಲೇ ಮದುವೆ ಬೇಡವೆಂದ ವಧು! ಇದು ಮುರಿದ ಮದುವೆಯ ಕ(ವ್ಯ)ಥೆ!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಈ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಮೂಲಕ ಸ್ಪಷ್ಟನೆ ನಿಡಿರುವ ಪೊಲೀಸ್ ಅಧಿಕ್ಷಕರು (ಗ್ರಾಮೀಣ), ಝಾನ್ಸಿಯ ಮೌರಾಣಿಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಶ್ಯಪ್ ಅವರನ್ನು ಈ ಘಟನೆಯ ಬಳಿಕ ಕರ್ತವ್ಯದಿಂದ ಅಮಾನತುಗೊಳಿಸಿ ಇಲಾಖಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಠಾಣೆಗೆ ತನ್ನ ದೂರನ್ನು ಹೇಳಿಕೊಳ್ಳಲು ಬಂದ ವ್ಯಕ್ತಿಯ ಮೇಲೆಯೇ ಪೊಲೀಸ್ ತನ್ನ ರೌದ್ರಾವತಾರವನ್ನು ತೋರಿರುವುದಕ್ಕೆ ಎಲ್ಲೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.