ಇಸ್ಲಮಾಬಾದ್: ‘ಇವನೆಂತಾ ಸಹೋದರ..!?’ ಎಂದು ನೀವು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಸುದ್ದಿಯೊಂದನ್ನು ನಾವೀಗ ನಿಮಗೆ ಹೇಳಲಿದ್ದೇವೆ. ಅದೂ ನಮ್ಮ ದೇಶದ ಸುದ್ದಿಯಲ್ಲ, ಬದಲಾಗಿ ನಮ್ಮ ನೆರೆಯ ರಾಷ್ಟ್ರ ಪಾಕಿಸ್ಥಾನದಲ್ಲಿ (Pakistan) ನಡೆದಿರುವ ಘಟನೆಯೊಂದರ ಸುದ್ದಿ. ಈ ಸುದ್ದಿ ಇದೀಗ ಫುಲ್ ವೈರಲ್ (Viral Video) ಆಗ್ತಿದೆ. ತನ್ನ ಸಹೋದರನ ಮದುವೆಗೆ ವ್ಯಕ್ತಿಯೊಬ್ಬ 1 ಲಕ್ಷ ಪಾಕ್ ಕರೆನ್ಸಿಯ (Pakistani Currency) ಮಾಲೆಯನ್ನು ಹಾಕಿದ್ದಾನೆ. ಈ ನೋಟಿನ ಮಾಲೆಯಲ್ಲಿ 200, 75 ಮತ್ತು 50 ರೂಪಾಯಿಗಳ ನೋಟುಗಳನ್ನು ಜೋಡಿಸಲಾಗಿದೆ.
ಉತ್ತರಪ್ರದೇಶದಲ್ಲಿ ವರನೊಬ್ಬ ತನ್ನ ನೋಟಿನ ಮಾಲೆಯನ್ನು ಕಿತ್ತುಕೊಂಡು ಹೋಗುತ್ತಿದ್ದ ಚಾಲಕನನ್ನು ಸಾಹಸಮಯವಾಗಿ ಚೇಸ್ ಮಾಡಿದ ಸುದ್ದಿ ಹಾಗೂ ಅದರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ನಮ್ಮ ನೆರೆ ರಾಷ್ಟ್ರ ಪಾಕಿಸ್ಥಾನದಲ್ಲಿ ಮದುವೆ ಮನೆಯಲ್ಲಿ ನೋಟಿನ ಹಾರದ ಸುದ್ದಿ ಹಾಗೂ ಅದರ ವಿಡಿಯೋ ವೈರಲ್ ಆಗುತ್ತಿದೆ. ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಕೋಟ್ಲಾ ಜಾಮ್ ಪ್ರದೇಶದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವರನೊಬ್ಬ 35 ಅಡಿ ಉದ್ದದ ಪಾಕ್ ನೋಟಿನ ಮಾಲೆಯನ್ನು ಹಾಕಿಕೊಂಡು ತನ್ನ ಮದುವೆಯನ್ನು ಸ್ಪೆಷಲ್ಲಾಗಿ ಸಂಭ್ರಮಿಸಿದ್ದಾನೆ
ಈ ಬೃಹತ್ ನೋಟಿನ ಹಾರವನ್ನು ವರನಿಗೆ ಆತನ ಸಹೋದರ ಗಿಫ್ಟ್ ಮಾಡಿದ್ದು, ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದವರೆಲ್ಲರೂ ಈ ಸ್ಪೆಷಲ್ ಗಿಫ್ಟ್ ನೋಡಿ ಅಚ್ಚರಿಗೊಂಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರೂ ಸಹ ಈ ನೋಟಿನ ಗಿಫ್ಟ್ ಗೆ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಒಂದು ಲಕ್ಷ ಪಾಕ್ ಕರೆನ್ಸಿಯನ್ನು ನಾಜೂಕಾಗಿ ಹೆಣೆದು ತಯಾರಿಸಲಾದ ಈ ನೋಟಿನ ಹಾರದಲ್ಲಿ 200, 75 ಮತ್ತು 50 ರೂಪಾಯಿಗಳ ಪಾಕ್ ಕರೆನ್ಸಿಗಳನ್ನು ಜೊಡಿಸಲಾಗಿದೆ ಮತ್ತು ಇದಕ್ಕಾಗಿ ಸುಮಾರು 2000 ಪಾಕಿ ಕರೆನ್ಸಿಗಳನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ಥಾನದಲ್ಲಿ ವೈಭವೊಪೇತ ಮದುವೆಗಳು ವರದಿಯಾಗುತ್ತಿರುವುದು ಇದೇ ಹೊಸತೇನಲ್ಲ. ಈ ತಿಂಗಳ ಪ್ರಾರಂಭದಲ್ಲಿ ಪಾಕಿಸ್ಥಾನದ ಸಿಯಾಲ್ ಕೋಟ್ ನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವಿದೇಶಿ ಕರೆನ್ಸಿಗಳ ಮಳೆಯನ್ನೇ ಸುರಿಸಲಾಗಿತ್ತು ಮಾತ್ರವಲ್ಲದೇ ಮದುವೆಗೆ ಬಂದ ಅತಿಥಿಗಳೆಲ್ಲರಿಗೂ ದುಬಾರಿ ಮೊಬೈಲ್ ಫೋನ್ಗಳನ್ನು ಗಿಫ್ಟ್ ಆಗಿ ನೀಡಲಾಗಿತ್ತು. ಇಲ್ಲಿ ವರನ ಸಂಬಂಧಿಕರು ಈ ದುಬಾರಿ ಗಿಫ್ಟ್ ಗಳನ್ನು ಅತಿಥಿಗಳಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Viral Video: ಈ ಪುಣ್ಯಾತ್ಮ ಅಕ್ಷಯ್ ಕುಮಾರ್ ಫ್ಯಾನ್ ಇರ್ಬೇಕು..! ಸಿಕ್ಕಾಪಟ್ಟೆ ವೈರಲ್ ಆಯ್ತು ಮದುಮಗನ ಆನ್-ರೋಡ್ ಸ್ಟಂಟ್ ವಿಡಿಯೋ..!
ಇನ್ನು, ನಮ್ಮ ದೇಶದಲ್ಲೂ ಇಂತದ್ದೇ ಮದುವೆ ಸಮಾರಂಭಗಳು ನಡೆದಿದ್ದು, ಉತ್ತರಪ್ರದೇಶದ ಮೀರತ್ ನಲ್ಲಿ ವರನೊಬ್ಬ ಧರಿಸಿಕೊಂಡಿದ್ದ ನೋಟುಗಳ ಹಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವರ ಈ ನೋಟಿನ ಹಾರವನ್ನು ಧರಿಸಿಕೊಂಡು ಕುದುರೆಯನ್ನೇರಿ ಸಾಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಇದನ್ನು ಅಪಹರಿಸಿ ವಾಹನದಲ್ಲಿ ಪರಾರಿಯಾಗಲೆತ್ನಿಸಿದಾಗ ವರ ಆತನನ್ನು ಚೇಸ್ ಮಾಡಿ ಸಾಹಸಮಯವಾಗಿ ಆತನಿಂದ ನೋಟಿನ ಹಾರವನ್ನು ಹಿಂದಕ್ಕೆ ಪಡೆದುಕೊಂಡ ಘಟನೆಯ ವಿಡಿಯೋ ಇದೀಗ ಸೊಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ. ಒಟ್ಟಿನಲ್ಲಿ, ತಮ್ಮ ಮದುವೆಗಳಲ್ಲಿ ಏನಾದರೊಂದು ಸ್ಪೆಷಲ್ ಇರಬೇಕೆಂದು ಬಯಸುವವರು ಮಾಡುವ ಇಂತಹ ವಿಶೇಷ ವ್ಯವಸ್ಥೆಗಳು ವೈರಲ್ ಸುದ್ದಿಗಳಿಗೆ ಭರ್ಜರಿ ಕಂಟೆಟ್ ಆಗುತ್ತಿರುವುದಂತೂ ಸತ್ಯ!