Sunday, 15th December 2024

Viral Video: ಇಬ್ಬರು ಮಕ್ಕಳ ಶವಗಳನ್ನು ಹೆಗಲ ಮೇಲೆ ಹೊತ್ತು 15 ಕಿ.ಮೀ ನಡೆದ ಪೋಷಕರು; ಹೃದಯ ಕರಗಿಸುವ ವಿಡಿಯೊ

Viral Video


ಮಕ್ಕಳು ಹೆತ್ತವರ ಜೀವವಾಗಿರುತ್ತಾರೆ. ಪೋಷಕರು ತಮ್ಮ ಮಕ್ಕಳಿಗಾಗಿ ಎಂತಹ ತ್ಯಾಗಕ್ಕೂ ಮುಂದಾಗುತ್ತಾರೆ. ಅಂತಹದರಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡಾಗ ಅವರಿಗಾಗುವಂತಹ ನೋವು ಊಹಿಸಲು ಸಾಧ್ಯವಾಗದಂತಹುದು. ಇತ್ತೀಚೆಗೆ ತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಂಡ ದಂಪತಿ ಅವರ ಶವಗಳನ್ನು ಹೆಗಲ ಮೇಲೆ ಹೊತ್ತುಕೊಂಡು 15 ಕಿಲೋಮೀಟರ್ ನಡೆದು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ತಮ್ಮ ಹಳ್ಳಿಯನ್ನು ತಲುಪಿದ್ದಾರೆ. ಅವರು ಮಕ್ಕಳ ಶವಗಳನ್ನು ಹೊತ್ತು ಅಳುತ್ತಾ ಬರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದ್ದು, ಇದನ್ನು ನೋಡಿದವರಿಗೆ ಕರುಳು ಕಿತ್ತು ಬರುವಷ್ಟು ನೋವಾಗಿದೆ.

ಈ ಘಟನೆ ಸೆಪ್ಟೆಂಬರ್ 4ರಂದು ದೂರದ ಗ್ರಾಮ ಪಟ್ಟಿಗಾಂವ್‍ನಲ್ಲಿ ನಡೆದಿದೆ. 6 ಮತ್ತು 3 ವರ್ಷದ ಇಬ್ಬರು ಪುಟ್ಟ ಸಹೋದರರು ಸೆಪ್ಟೆಂಬರ್ 4 ರಂದು ಜ್ವರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಗ್ರಾಮದಲ್ಲಿ ಸರಿಯಾದ ಆರೋಗ್ಯ ಸೌಲಭ್ಯಗಳಿಲ್ಲದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಸಾಂಪ್ರದಾಯಿಕ ಪರಿಹಾರಗಳಿಗಾಗಿ ತಮ್ಮ ಊರಿನ ಅರ್ಚಕರ ಬಳಿಗೆ ಕರೆದೊಯ್ದರು. ಪುರೋಹಿತರು ಕೆಲವು ಗಿಡಮೂಲಿಕೆ ಔಷಧಿಗಳನ್ನು ನೀಡಿದರು, ಆದರೆ ಇಬ್ಬರೂ ಮಕ್ಕಳ ಪರಿಸ್ಥಿತಿಗಳು ಮತ್ತಷ್ಟು ಹದಗೆಟ್ಟಿದೆ. ಕೆಲವೇ ಗಂಟೆಗಳಲ್ಲಿ, ಇಬ್ಬರೂ ಸಹೋದರರು ಒಬ್ಬರ ನಂತರ ಒಬ್ಬರು ಜೀವ ಕಳೆದುಕೊಂಡಿದ್ದಾರೆ.

ಪಟ್ಟಿಗಾಂವ್‍ನಿಂದ ಜಿಮ್ಲಘಟ್ಟದ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಸಂಪರ್ಕಿಸುವ ಯಾವುದೇ ಸುಸಜ್ಜಿತ ರಸ್ತೆ ಇಲ್ಲದ ಕಾರಣ ಆ ಸಮಯದಲ್ಲಿ ಯಾವುದೇ ಆಂಬ್ಯುಲೆನ್ಸ್ ಸೇವೆ ಇರಲಿಲ್ಲ. ಹಾಗಾಗಿ ಪೋಷಕರಿಗೆ ತಮ್ಮ ಮಕ್ಕಳ ಶವಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಅವರು ನೀರಿನಿಂದ ತುಂಬಿದ ಕೆಸರು ರಸ್ತೆಯ ಮೂಲಕ 15 ಕಿಲೋಮೀಟರ್ ನಡೆದು ಜಿಮ್ಲಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಲುಪಿದ್ದಾರೆ. ಆದರೆ ಅಲ್ಲಿ ವೈದ್ಯರು ಇಬ್ಬರೂ ಮಕ್ಕಳು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಕೊನೆಗೆ ಮಕ್ಕಳ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್ ಅನ್ನು ಆಸ್ಪತ್ರೆಗೆ ಕರೆಸಿದರೂ ಕೂಡ ಆ ಪೋಷಕರು ಅದನ್ನು ನಿರಾಕರಿಸಿ ಮತ್ತೆ ಶವವನ್ನು ಹೆಗಲನ ಮೇಲೆ ಹಾಕಿಕೊಂಡು ನಡೆದುಕೊಂಡೇ ಮನೆಗೆ ಹಿಂದಿರುಗಿದ್ದಾರೆ.

ಇದನ್ನೂ ಓದಿ:ಲೈಂಗಿಕ ಕ್ರಿಯೆಯ ಆಸೆ ತೋರಿಸಿ ಹನಿಟ್ರ್ಯಾಪ್‌; ಮರ್ಯಾದೆಗೆ ಅಂಜಿ ಕೋಟಿ ರೂ. ಕೊಟ್ಟ ನಿವೃತ್ತ ಅಧಿಕಾರಿ!

ಈ ಘಟನೆಯು ಗಡ್ಚಿರೋಲಿ ಜಿಲ್ಲೆಯ ಮೊದಲ ಪ್ರಕರಣವಲ್ಲ. ಭಮ್ರಾಗಡ್, ಎಟಪಲ್ಲಿ ಮತ್ತು ಅಹೇರಿ ತಹಸಿಲ್ ಗಳ ಇತರ ದೂರದ ಹಳ್ಳಿಗಳಲ್ಲಿ ಇದೇ ರೀತಿಯ ದುರಂತಗಳು ಈ ಹಿಂದೆ ವರದಿಯಾಗಿವೆ, ಈ ದೂರದ ಪ್ರದೇಶಗಳಲ್ಲಿ ಸರಿಯಾದ ಆರೋಗ್ಯ ಸೌಲಭ್ಯಗಳಿಲ್ಲದಿರುವುದರ ಬಗ್ಗೆ ಈ ವಿಡಿಯೊ ತಿಳಿಸುತ್ತದೆ. ಅನೇಕ ಹಳ್ಳಿಗಳಲ್ಲಿ ಸರಿಯಾದ ರಸ್ತೆಗಳು, ಆಸ್ಪತ್ರೆಗಳು ಮತ್ತು ಆಂಬ್ಯುಲೆನ್ಸ್ ಸೇವೆಗಳಿಲ್ಲದೆ ಜನರು ಪರದಾಡುತ್ತಿದ್ದಾರೆ.