Saturday, 28th December 2024

Viral Video: ಶಾಲೆಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಪ್ರಾಂಶುಪಾಲರು; ವಿಡಿಯೊ ವೈರಲ್

Viral Video

ಪಾಟನಾ: ಬಿಹಾರದ ವೈಶಾಲಿ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಮಕ್ಕಳ ಮಧ್ಯಾಹ್ನದ ಊಟಕ್ಕೆ ಮೀಸಲಾದ ಮೊಟ್ಟೆಗಳನ್ನು ಕದಿಯುವಾಗ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. ಪ್ರಾಂಶುಪಾಲರು ಮೊಟ್ಟೆ ಕದಿಯುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆದ ನಂತರ, ರಾಜ್ಯ ಶಿಕ್ಷಣ ಇಲಾಖೆ ಈ ಬಗ್ಗೆ ತನಿಖೆ ನಡೆಸಿದೆ. ಈ ಘಟನೆಯು ವೈಶಾಲಿಯ ಲಾಲ್‌ಗಂಜ್‌ ಬ್ಲಾಕ್‍ನ ರಿಖರ್ ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.

ನಂತರ ಶಿಕ್ಷಣ ಇಲಾಖೆಯು ಶಾಲೆಯ ಆರೋಪಿ ಪ್ರಾಂಶುಪಾಲ ಸುರೇಶ್ ಸಹಾನಿ ಅವರಿಗೆ ನೋಟಿಸ್ ನೀಡಿ, ಸಹಾನಿ ಶಿಕ್ಷಣ ಇಲಾಖೆಯ ಇಮೇಜ್‍ ಅನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಕಳ್ಳತನಕ್ಕಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ಧರಿಸಿದೆ.

ವೈರಲ್ ಆದ ವಿಡಿಯೊದಲ್ಲಿ, ಪ್ರಾಂಶುಪಾಲರು ಮಕ್ಕಳ ಮಧ್ಯಾಹ್ನದ ಊಟಕ್ಕಾಗಿ ಬಂದ ಮೊಟ್ಟೆಗಳನ್ನು ಚೀಲದಲ್ಲಿ ಇರಿಸಿ ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಪ್ರಾಂಶುಪಾಲರು ವಾಹನದಲ್ಲಿದ್ದ ಮೊಟ್ಟೆಗಳನ್ನು ತನ್ನ ಚೀಲದೊಳಗೆ ತುಂಬಿಸಿಕೊಳ್ಳುತ್ತಿರುವ ದೃಶ್ಯವನ್ನು ಯಾರೋ ಕಿಟಕಿಯ ಬಳಿ ನಿಂತು ವಿಡಿಯೊ ಮಾಡಿದ್ದಾರೆ. ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ವಿಡಿಯೊ ವೈರಲ್ ಆಗಿದೆ. ವಿಡಿಯೊ ಬೆಳಕಿಗೆ ಬಂದ ನಂತರ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಪ್ರಾಂಶುಪಾಲರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಆದರೆ ಪ್ರಾಂಶುಪಾಲ ಸುರೇಶ್ ಸಹಾನಿ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದು, ತಾನು ಮೊಟ್ಟೆಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಲಿಲ್ಲ, ಆದರೆ ಅವುಗಳನ್ನು ಶಾಲೆಯ ಅಡುಗೆಯವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಪ್ರಾಂಶುಪಾಲರು ಮುಂದಿನ ವರ್ಷದ ಜನವರಿಯಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:ಲೈವ್-ಸ್ಟ್ರೀಮ್ ರಾಫೆಲ್ಸ್‌ನಲ್ಲಿ ಲಕ್ಕಿ ಬ್ಯಾಗ್‌ ಪಡೆಯಲು ಚೀನಾದ ವ್ಯಕ್ತಿ ಮಾಡಿದ್ದೇನು?

ಪ್ರಾಂಶುಪಾಲ ಸಹಾನಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, 24 ಗಂಟೆಗಳ ಒಳಗೆ ಅವರ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಕೇಳಲಾಗಿದೆ, ಇಲ್ಲದಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.