Friday, 27th December 2024

Viral Video: ‘ಮುನ್ನಾ ಲಾಲ್ ಫುಲ್ ಮಾಲ್… ಮಾಲ್..’ ಕುಡಿದು ತೂರಾಡುತ್ತಾ ಸ್ಕೂಲಿಗೆ ಬಂದ ಪ್ರಿನ್ಸಿಪಾಲ್; ವಿಡಿಯೋ ಇದೆ

ಭೋಪಾಲ್: ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ನಶೆಯೇರಿಸಿಕೊಂಡು ತರಗತಿಗಳಿಗೆ ಬರುತ್ತಿರುವ ಸುದ್ದಿಗಳು ಸಾಮಾನ್ಯವೆಂಬಂತಾಗಿದೆ. ಅಂತಹದ್ದೇ ಒಂದು ಘಟನೆ ಮಧ್ಯಪ್ರದೇಶದ (Madhya Pradesh) ರೇವಾ (Rewa) ಜಿಲ್ಲೆಯಲ್ಲಿ ವರದಿಯಾಗಿದ್ದು, ಇಲ್ಲಿನ ಸರಕಾರಿ ಶಾಲೆಯೊಂದರ ಪ್ರಾಂಶುಪಾಲ ಮದ್ಯದ ನಶೆಯಲ್ಲಿ ತೂರಾಡುತ್ತಾ ಶಾಲೆಯ ಮೆಟ್ಟಿಲು ಹತ್ತಲು ಹರಸಾಹಸಪಡುತ್ತಿರುವ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ. ಅಂದ ಹಾಗೆ ಈ ಘಟನೆ ರೇವಾ ಜಿಲ್ಲೆಯ ಜವಾಹ್ (Jawah) ಸರಕಾರಿ ಶಾಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದ್ದು, ಮದ್ಯದ ನಶೆಯಲ್ಲಿ ತೂರಾಡುತ್ತಾ ಶಾಲೆಗೆ ಬಂದು ವಿಡಿಯೋದಲ್ಲಿ ಸೆರೆಯಾದ ಪ್ರಾಂಶುಪಾಲರನ್ನು ಮುನ್ನಾ ಲಾಲ್ ಕೊಲ್ (Munna Lal Kol) ಎಂದು ಗುರುತಿಸಲಾಗಿದೆ.

ಈ ವೈರಲ್ ವಿಡಿಯೋದಲ್ಲಿ ರೆಕಾರ್ಡ್ ಆಗಿರುವಂತೆ, ನಿವೃತ್ತಿ ಅಂಚಿನಲ್ಲಿರುವಂತೆ ತೋರುವ, ಸಾಂಪ್ರದಾಯಿಕ ಕುರ್ತಾ ಪೈಜಾಮದಲ್ಲಿರುವ ವ್ಯಕ್ತಿಯೊಬ್ಬ ತೂರಾಡಿಕೊಂಡು ಶಾಲೆಯ ಮೆಟ್ಟಿಲ ಬಳಿ ನಿಲ್ಲಲೂ ಆಗದ ಸ್ಥಿತಿಯಲ್ಲಿರುವುದು ಮತ್ತು ಬ್ಯಾಲೆನ್ಸ್ ತಪ್ಪಿ ಬೀಳುತ್ತಿರುವುದು, ಮತ್ತೆ ಕಷ್ಟಪಟ್ಟು ಎದ್ದೇಳುತ್ತಿರುವುದು ಮತ್ತೆ ಬೀಳುತ್ತಿರುವುದು ಈ ವಿಡಿಯೋದಲ್ಲಿ ದಾಖಲಾಗಿದೆ.

ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು, ಈ ಕುಡುಕ ಪ್ರಾಂಶುಪಾಲರ ‘ಮದ್ಯಂತರ’ ನಾಟಕ ಸಾಗುತ್ತಿದ್ದ ಸಂದರ್ಭದಲ್ಲೇ ಶಾಲೆಗೆ ಇನ್ ಸ್ಪೆಕ್ಟರ್ ಅವರ ಆಗಮನವಾಗಿದೆ. ಈ ಸಂದರ್ಭದಲ್ಲಿ ನಶೆಯಲ್ಲಿದ್ದ ಮುನ್ನಾಲಾಲ್ ಇನ್ ಸ್ಪೆಕ್ಟರ್ ಜೊತೆಯಲ್ಲೇ ವಾಗ್ವಾದಕ್ಕಿಳಿದಿದ್ದಾರೆ. ಈ ದೃಶ್ಯಗಳೂ ಸಹ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಈ ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಈ ಪ್ರಾಂಶುಪಾಲರ ಮೇಲೆ ಕಠಿಣ ಕ್ರಮ ಜರುಗಿಸಲು ನಿರ್ಧರಿಸಿದೆ. ಇದೀಗ ತಿಳಿದುಬಂದಿರುವ ಮಾಹಿತಿ ಪ್ರಕಾರ, ಮುನ್ನಾ ಲಾಲ್ ಇದೇ ಮೊದಲು ಈ ರೀತಿಯಾಗಿ ನಶೆಯಲ್ಲಿ ಶಾಲೆಗೆ ಬರುತ್ತಿರುವುದಲ್ಲ, ಬದಲಾಗಿ ಈ ಹಿಂದೆಯೂ ಅನೇಕ ಸಲ ಮದ್ಯದ ಅಮಲೇರಿಸಿಕೊಂಡು ಇವರು ಶಾಲೆಗೆ ಬರುತ್ತಿದ್ದರಂತೆ.

ಸ್ಥಳೀಯರು ನೀಡಿರುವ ಮಾಹಿತಿಯಂತೆ, ಈ ನಶೆ ಪ್ರಾಂಶುಪಾಲ ಆಗಾಗ್ಗೆ ಮದ್ಯಸೇವನೆ ಮಾಡಿ ಶಾಲೆಗೆ ಬರುತ್ತಿದ್ದರಂತೆ. ಈ ಬಾರಿ ಕ್ಲಸ್ಟರ್ ಪ್ರಾಂಶುಪಾಲರಾಗಿರುವ ಹಿರಾಮಾನಿ ತ್ರಿಪಾಠಿ ಶಾಲೆಗೆ ಪರಿಶೀಲನೆಗೆಂದು ಬಂದ ಸಂದರ್ಭದಲ್ಲಿ ಈ ನಶೆ ಪ್ರಾಂಶುಪಾಲರ ನಶೆಯಾಟ ಬಯಲಿಗೆ ಬಂದಿದೆ. ಅವರೇ ಈ ಕುಡುಕ ಪ್ರಾಂಶುಪಾಲರ ನಿಜ ಸ್ಥಿತಿಯ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ಸಂದರ್ಭದಲ್ಲೇ ಇವರಿಬ್ಬರ ನಡುವೆ ವಾಗ್ವಾದವೂ ನಡೆದಿದೆ.

ಈ ಸುದ್ದಿಯನ್ನೂ ಓದಿ: Deadly Accident: ಅಬ್ಬಾ…ಎದೆ ಝಲ್ಲೆನಿಸುತ್ತೆ ಈ ವಿಡಿಯೊ! ಓವರ್‌ ಸ್ಪೀಡ್‌ಗೆ ಐವರು ವಿದ್ಯಾರ್ಥಿಗಳೂ ಸೇರಿ ಏಳು ಮಂದಿ ದುರ್ಮರಣ

ಮುನ್ನಾಲಾಲ್ ಕೋಲ್ ಈ ಹಿಂದೆ ನಶೆಯೇರಿಸಿಕೊಂಡು ಶಾಲೆಗೆ ಬಂದಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಇವರ ಈ ವರ್ತನೆ ಬಗ್ಗೆ ದೂರನ್ನು ನೀಡಿದ್ದರು. ಈ ದೂರಿನ ಆಧಾರದಲ್ಲಿ, ಜಿಲ್ಲಾ ಶಿಕ್ಷಣಾಧಿಕಾರಿಯವರು ಕ್ಲಸ್ಟರ್ ಪ್ರಾಂಶುಪಾಲರಿಗೆ ಶಾಲಾ ಪರಿವೀಕ್ಷಣೆ ನಡೆಸುವಂತೆ ಸೂಚನೆ ನೀಡಿದ್ದರು.

ಮೇಲಧಿಕಾರಿಗಳ ಸೂಚನೆಯಂತೆ ಶಾಲಾ ಪರಿಶೀಲನೆಗೆ ಕ್ಲಸ್ಟರ್ ಪ್ರಾಂಶುಪಾಲರು ಬಂದಿದ್ದ ಸಂದರ್ಭದಲ್ಲೇ ಈ ಮುನ್ನಾ ಲಾಲ್ ಫುಲ್ ‘ಮಾಲ್.. ಮಾಲ್..’ ಆಗಿ ಅವರ ಕಣ್ಣಿಗೆ ಬಿದ್ದಿದ್ದ. ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಶಿಕ್ಷಣಾಧಿಕಾರಿಯವರು, ಮುನ್ನಾ ಲಾಲ್ ಕೋಲ್ ಈ ಹಿಂದೆ ತನ್ನ ಅಮಲಿನ ವರ್ತನೆಗಾಗಿ ಸಸ್ಪೆಂಡ್ ಆಗಿದ್ದಾತ ಬಳಿಕ ಕ್ಷಮೆಯಾಚನೆ ಮಾಡಿ ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಶಾಲೆಯಲ್ಲಿ ಮಕ್ಕಳಿಗೆ ನೈತಿಕತೆ, ಒಳ್ಳೆಯ ವರ್ತನೆ ಬಗ್ಗೆ ತಿಳಿಹೇಳಬೇಕಿದ್ದ ಶಿಕ್ಷಕರೇ ಈ ರೀತಿಯಾಗಿ ಮದ್ಯದ ಅಮಲೇರಿಸಿಕೊಂಡು ಕೆಟ್ಟ ವರ್ತನೆ ಮೂಲಕ ಸುದ್ದಿಯಾಗುತ್ತಿರುವುದು ಮಾತ್ರ ಒಳ್ಳೆಯ ಬೆಳವಣಿಗೆಯಲ್ಲ ಎಂದು ಈ ವಿಡಿಯೋ ನೋಡಿದವರ ಅಭಿಪ್ರಾಯವಾಗಿದೆ.