Saturday, 4th January 2025

Viral Video: ಆನ್‌ಲೈನ್ ಸ್ಕ್ಯಾಮರ್‌ಗೆ ಚಳ್ಳೆ ಹಣ್ಣು! ಯುವಕ ರಾಕ್ಸ್… ನಕಲಿ ಪೊಲೀಸ್‌ ಶಾಕ್‌- ತುಂಬಾ ಮಜವಾಗಿದೆ ಈ ವಿಡಿಯೊ

ನವದೆಹಲಿ: ಆನ್ ಲೈನ್ ಫ್ರಾಡ್ (Online Fraud) ಪ್ರಕರಣಗಳು ಇತ್ತಿಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ. ‘ಡಿಜಿಟಲ್ ಅರೆಸ್ಟ್’ (Digital Arrest) ಮೂಲಕ ಸಂತ್ರಸ್ತರನ್ನು ಬೆದರಿಸಿ ಅವರಿಂದ ದೊಡ್ಡ ಮೊತ್ತದ ಹಣವನ್ನು ಪೀಕಿಸಿಕೊಳ್ಳುವಲ್ಲಿ ಆನ್‌ಲೈನ್‌ ವಂಚಕರು ನಿಸ್ಸೀಮರಾಗಿದ್ದಾರೆ. ಆದರೆ, ಇತ್ತೀಚೆಗೆ ಇಂತಹ ಆನ್ ಲೈನ್ ವಂಚಕರ ಬಗ್ಗೆ ಜನರಲ್ಲೂ ಜಾಗೃತಿ ಮೂಡುತ್ತಿದೆ. ಅಂತಹ ಒಂದು ಘಟನೆಯಲ್ಲಿ, ‘ಡಿಜಿಟಲ್ ಅರೆಸ್ಟ್’ ಪ್ರಕರಣವೊಂದು ವಂಚಕರಿಗೇ ಬ್ಯಾಕ್ ಫೈರ್ (Back Fire) ಆಗಿರುವ ಘಟನೆಯ ವಿಡಿಯೋ ಒಂದು ಇದೀಗ ಎಲ್ಲೆಡೆ ವೈರಲ್ (Viral video) ಆಗುತ್ತಿದೆ.

ವಂಚಕನೊಬ್ಬ ಪೊಲೀಸ್ ಧಿರಿಸಿನಲ್ಲಿ ವ್ಯಕ್ತಿಯೊಬ್ಬರಿಗೆ ವಿಡಿಯೋ ಕಾಲ್ ಮಾಡಿ, ನಿಮ್ಮ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿದೆ ಮತ್ತು ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಹೇಳುತ್ತಾರೆ ಮತ್ತು ಇದರೊಂದಿಗೆ ಸಂತ್ರಸ್ತರು ತಮ್ಮ ಖಾತೆಯಲ್ಲಿರುವ ಲಕ್ಷಾಂತರ ಅಥವಾ ಕೋಟ್ಯಂತರ ರೂಪಾಯಿಗಳನ್ನು ಕಳೆದುಕೊಳ್ಳುತ್ತಾರೆ.

ಆದರೆ ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆನ್ ಲೈನ್ ಫ್ರಾಡ್ ಮಾಡುತ್ತಿರುವ ವ್ಯಕ್ತಿಗೆ ಆತನ ಪ್ಲ್ಯಾನ್ ಬ್ಯಾಕ್ ಫೈರ್ ಆಗಿದೆ. ಈ ವಿಡಿಯೋದಲ್ಲಿರುವಂತೆ ವ್ಯಕ್ತಿಯೊಬ್ಬರಿಗೆ (ಅವರ ಮುಖ ವಿಡಿಯೋದಲ್ಲಿ ಕಾಣಿಸುವುದಿಲ್ಲ) ಪೊಲೀಸ್ ಧಿರಿಸಿನಲ್ಲಿರುವ ಸ್ಕ್ಯಾಮರ್ ನಿಂದ ಒಂದು ವಿಡಿಯೋ ಕಾಲ್ ಬರುತ್ತದೆ. ಈ ವ್ಯಕ್ತಿ ಆ ವಿಡಿಯೋ ಕಾಲ್ ರಿಸೀವ್ ಮಾಡಿದ ತಕ್ಷಣ ಆತನಿಗೆ ಪೊಲೀಸ್ ಧಿರಿಸಿನಲ್ಲಿದ್ದ ವ್ಯಕ್ತಿ ವಿಡಿಯೋ ಮುಂದೆ ಬರುವಂತೆ ಸೂಚಿಸುತ್ತಾನೆ.

ಇದೇ ಸಂದರ್ಭದಲ್ಲಿ ಸ್ಕ್ಯಾಮರ್ ತನ್ನ ಪೊಲೀಸ್ ಗೆಟಪನ್ನೇ ಮೈಂಟೇನ್‌ ಮಾಡ್ತಿರ್ತಾನೆ ಮತ್ತು ತಾನು ನಿಜವಾಗ್ಲೂ ಪೊಲೀಸ್ ಅಧಿಕಾರಿಯೇ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುತ್ತಾನೆ. ಆದ್ರೆ ಇದು ಹೆಚ್ಚು ಸಮಯ ಉಳಿಯೋದಿಲ್ಲ, ಇಲ್ಲೇ ಇರೋದು ಗಮ್ಮತ್ತು ಮತ್ತು ಕಥೆಗೊಂದು ಟ್ವಿಸ್ಟ್..! ಪೊಲೀಸ್ ಧಿರಿಸಿನಲ್ಲಿದ್ದ ಸೈಬರ್ ವಂಚಕ, ತಾನು ಕರೆ ಮಾಡಿದ್ದ ವ್ಯಕ್ತಿಗೆ ವಿಡಿಯೋ ಕಾಲ್ ನಲ್ಲಿ ಸ್ಕ್ರೀನ್ ಮುಂದೆ ಬರಲು ಹೇಳಿದಾಗ, ಆ ವ್ಯಕ್ತಿ ಬುದ್ಧಿವಂತಿಕೆ ಉಪಯೋಗಿಸಿ ತಾನು ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುವ ಬದಲು ತನ್ನ ನಾಯಿಯನ್ನು ಸ್ಕ್ರೀನ್ ಮುಂದೆ ತರುತ್ತಾನೆ!

‘ಯೇ ಲೀಜಿಯೇ ಸರ್. ಆಗಯಾ ಮೈ ಕೆಮರಾ ಕೆ ಸಾಮ್ನೆ’ (ತಗೋಳಿ ಸರ್. ಬಂದೆ ನೋಡಿ ನಾನು ಕೆಮರಾ ಮುಂದೆ’) ಎಂದು ಆ ವ್ಯಕ್ತಿ ಹೇಳುತ್ತಾನೆ. ಇಷ್ಟಕ್ಕೇ ಪಟ್ಟು ಬಿಡದ ಸ್ಕ್ಯಾಮರ್, ಆ ವ್ಯಕ್ತಿಯ ಮುಖವನ್ನು ತೋರಿಸುವಂತೆ ಗಟ್ಟಿ ಧ್ವನಿಯಲ್ಲಿ ಹೇಳುತ್ತಾನೆ. ಆದರೆ ಆ ವ್ಯಕ್ತಿ ಮತ್ತೆ ಮತ್ತೆ ಅದನ್ನೇ ಹೇಳುತ್ತಾನೆ – ಇದೇ (ನಾಯಿ) ನನ್ನ ನಿಜವಾದ ಮುಖ ಎಂದು ಹೇಳುತ್ತಾನೆ. ಮಾತ್ರವಲ್ಲದೇ ಸ್ಕ್ಯಾಮರ್ ಗೆ ‘ನಕಲಿ ವರ್ದಿ’ (ಫೇಕ್ ಸಮವಸ್ತ್ರ) ಎಂದು ಹೇಳುತ್ತಿರುತ್ತಾನೆ.

‘ನಾನು ಇಲ್ಲೇ ಇದ್ದೇನೆ. ಹೇ, ಆಫಿಸರ್. ನಾನು ಕಾಣಿಸ್ತಾ ಇದ್ದೀನಾ? ಓ, ಫೇಕ್ ಯೂನಿಫಾರ್ಮ್’ – ಎಂದು ಆ ವ್ಯಕ್ತಿ ವಿಡಿಯೋ ಕಾಲ್ ನಲ್ಲಿದ್ದ ಸ್ಕ್ಯಾಮರನ್ನು ಕಿಚಾಯಿಸುತ್ತಾನೆ!

ಈ ಸುದ್ದಿಯನ್ನೂ ಓದಿ: Obscene Video: ತರಗತಿಯಲ್ಲೇ ಕುಳಿತು ಅಶ್ಲೀಲ ವಿಡಿಯೊ ವೀಕ್ಷಿಸಿದ ಮಾನಗೆಟ್ಟ ಶಿಕ್ಷಕ; ನೋಡಿ ನಕ್ಕ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿತ!

ಇಷ್ಟೆಲ್ಲಾ ಆಗುವಾಗ ಇನ್ನು ತನ್ನ ಆಟ ನಡೆಯೋದಿಲ್ಲ ಎಂದುಕೊಂಡ ಸ್ಕ್ಯಾಮರ್ ಸಣ್ಣಗೆ ಮುಗುಳ್ನಕ್ಕು ಬಳಿಕ ವಿಡಿಯೋ ಕಾಲ್ ಕಟ್ ಮಾಡ್ತಾನೆ. ಅಲ್ಲಿಗೆ ಅಮಾಯಕರನ್ನು ಪೊಲೀಸ್ ಹೆಸರು ಮತ್ತು ವೇಷದಲ್ಲಿ ಬೆದರಿಸಿ ಹಣ ಪೀಕುವ ಆನ್ ಲೈನ್ ಸ್ಕ್ಯಾಮರ್ ನ ಪ್ಲ್ಯಾನ್ ಅವನಿಗೇ ಉಲ್ಟಾ ಆಗಿಬಿಡ್ತು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ಡಿಜಿಟಲ್ ಅರೆಸ್ಟ್ ಅನ್ನು ಸಮರ್ಥವಾಗಿ ನಿಭಾಯಿಸಿದ ಆ ಆಗಂತುಕ ಯುವಕನ ಬಗ್ಗೆ ನೆಟ್ಟಿಗರು ಪ್ರಶಂಸೆಯ ಮಾತುಗಳನ್ನಾಡುತ್ತಿದ್ದಾರೆ.