Monday, 6th January 2025

Viral News: ಸತ್ತವನಿಗೆ ಪುನರ್‌ಜನ್ಮ ನೀಡಿದ ಸ್ಪೀಡ್‌ ಬ್ರೇಕರ್‌; ಆಗಿದ್ದೇನು?

Viral Video

ಮುಂಬೈ: ಮಹಾರಾಷ್ಟ್ರದ ಕೊಲ್ಹಾಪುರದ ಖಾಸಗಿ ಆಸ್ಪತ್ರೆಯ ವೈದ್ಯರು ‘ಮೃತಪಟ್ಟಿದ್ದಾರೆ’ ಎಂದು ಘೋಷಿಸಿದ್ದ 65 ವರ್ಷದ ವ್ಯಕ್ತಿಯು ಮತ್ತೆ ಬದುಕಿ ಬಂದ ರೋಚಕ ಘಟನೆ ನಡೆದಿದೆ. ʼಮೃತದೇಹʼವನ್ನು ಆಂಬ್ಯುಲೆನ್ಸ್‌ನಲ್ಲಿ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಸಿಕ್ಕ ಸ್ಪೀಡ್ ಬ್ರೇಕರ್‌ನಿಂದ ವ್ಯಕ್ತಿ ಮತ್ತೆ ಉಸಿರಾಡಿದ್ದಾರೆ. ಈ ಘಟನೆ ವೈರಲ್ (Viral News) ಆಗಿದ್ದು, ಇದು ಪವಾಡವೇ ಅಥವಾ ವೈದ್ಯರ ತಪ್ಪೇ ಎಂದು ಜನರು ಪ್ರಶ್ನಿಸುವಂತೆ ಮಾಡಿದೆ.

ಡಿಸೆಂಬರ್ 16ರಂದು ಈ ಘಟನೆ ವರದಿಯಾಗಿದ್ದು, ಪಾಂಡುರಂಗ ಉಲ್ಪೆ ಎಂಬುವವರಿಗೆ  ಹೃದಯಾಘಾತವಾದ ಕಾರಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಅವರ ದೇಹವನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸಿದ್ದಾರೆ. ಆಂಬ್ಯುಲೆನ್ಸ್ ಉಲ್ಪೆ ಅವರ ಮನೆಗೆ ಹೋಗುತ್ತಿದ್ದಾಗ, ಸ್ಪೀಡ್ ಬ್ರೇಕ್‍ ಅನ್ನು ಹಾದು ಹೋಗಿದೆ. ಆಗ  ಅವರ ‘ದೇಹ’ದ ಪಕ್ಕದಲ್ಲಿ ಕುಳಿತಿದ್ದ ಅವರ ಪತ್ನಿ ಅವರ ಬೆರಳುಗಳಲ್ಲಿ ಸೂಕ್ಷ್ಮ ಚಲನೆಯನ್ನು ಗಮನಿಸಿದ್ದಾರೆ.

ವರದಿಗಳ ಪ್ರಕಾರ, ಆಂಬ್ಯುಲೆನ್ಸ್ ಸ್ಪೀಡ್ ಬ್ರೇಕರ್ ಅನ್ನು ದಾಟಿದ ನಂತರ, ಉಲ್ಪೆ ದೇಹ ಅಲುಗಾಡಿದೆ. ಹಾಗಾಗಿ ಅವರ ದೇಹದಲ್ಲಿ ಮತ್ತೆ ಉಸಿರಾಟ ಶುರುವಾಗಿದೆ. ಆಗ ಅವರ ಪಕ್ಕದಲ್ಲಿ ಕುಳಿತ ಅವರ ಪತ್ನಿ ಬೆರಳುಗಳು ಚಲಿಸುತ್ತಿರುವುದನ್ನು ನೋಡಿದ್ದಾರೆ. ಅದರಿಂದ ಅವರು ಜೀವಂತವಾಗಿದ್ದಾರೆ ಎಂಬುದು ತಿಳಿದುಬಂದಿದೆ. ಹಾಗಾಗಿ ಅವರ ಪತ್ನಿ  ಚಾಲಕನ ಬಳಿ  ಆಸ್ಪತ್ರೆಗೆ ಹಿಂತಿರುಗುವಂತೆ ಕೇಳಿಕೊಂಡಿದ್ದಾರೆ. ಉಲ್ಪೆ ಅವರಿಗೆ ನಂತರ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಳಿಗೆ ಒಳಪಡಿಸಲಾಗಿದೆ. ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ವೈದ್ಯರೇ ನಂತರ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಿದ್ದಾರೆ. ಹದಿನೈದು ದಿನಗಳ ಕಾಲ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಿದ ನಂತರ, ಸತ್ತಿದ್ದ ಆ ವ್ಯಕ್ತಿ ಜೀವಂತವಾಗಿ ಮನೆಗೆ ಹೋಗಿದ್ದಾರೆ.

ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಉಲ್ಪೆ, ತನ್ನನ್ನು ಮತ್ತೆ ಜೀವಂತವಾಗಿ ತಂದ ಭಗವಾನ್ ವಿಠ್ಠಲನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. “ಇದು ಭಗವಾನ್ ಶ್ರೀ ವಿಠ್ಠಲನ ಆಶೀರ್ವಾದವಲ್ಲದೆ ಬೇರೇನೂ ಅಲ್ಲ” ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ನ್ಯೂ ಇಯರ್‌ ಪಾರ್ಟಿ ಮಾಡಿ ಕುಡಿದ ಮತ್ತಿನಲ್ಲಿ ಫುಟ್‌ಪಾತ್‌ ಮೇಲೆ ಬಿದ್ದ ಮಹಿಳೆ ಪೊಲೀಸ್‌ ಅಧಿಕಾರಿಗೆ ಹೀಗಾ ಮಾಡೋದು?!

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಹೃದಯ ತಜ್ಞ ಡಾ.ಸ್ನೇಹದೀಪ್ ಪಾಟೀಲ್, ಇಂತಹ ಘಟನೆಗಳು ಅಪರೂಪವಾಗಿ ಸಂಭವಿಸುತ್ತವೆ ಎಂದು ತಿಳಿಸಿದ್ದಾರೆ. “ಇದಕ್ಕೆ ಕೆಲವು ಕಾರಣಗಳಿರಬಹುದು. ಈ ರೀತಿಯ ಉದಾಹರಣೆಗಳೂ ಇವೆ” ಎಂದು ವೈದ್ಯರು ಇತ್ತೀಚಿನ ಪ್ರಕರಣವನ್ನು ಉಲ್ಲೇಖಿಸಿ ಹೇಳಿದ್ದಾರೆ.