ಅಹಮದಾಬಾದ್: ಇತ್ತೀಚಿನ ದಿನಗಳಲ್ಲಿ ವಾಹನಗಳು ರಸ್ತೆ ಮೇಲೆ ಹೋಗೋದಕ್ಕಿಂತ ರಸ್ತೆ ಬದಿಯಲ್ಲೇ ಹೋಗಿ ಯಡವಟ್ಟು ಮಾಡಿಕೊಳ್ಳೋದು ಜಾಸ್ತಿಯಾಗಿದೆ. ವಾಹನ ಸವಾರರ ಇಂತಹ ಯಡವಟ್ಟು ಡ್ರೈವಿಂಗ್‌ನಿಂದ ಹೆಚ್ಚಿನ ಸಂದರ್ಭಗಳಲ್ಲಿ ಅಮಾಯಕರ ಪ್ರಾಣಹಾನಿ ಸಂಭವಿಸುತ್ತದೆ. ಅಂತಹ ಒಂದು ಅಪಘಾತದ (Accident) ಘಟನೆ ಗುಜರಾತ್‌ನ (Gujarat) ಛೋಟಾ ಉದಯಪುರ್ (Chhota Udaipur) ಜಿಲ್ಲೆಯಿಂದ ವರದಿಯಾಗಿದ್ದು, ಎಸ್.ಯು.ವಿ. (SUV) ಕಾರೊಂದು ರಸ್ತೆ ಬದಿಯ ರೆಸ್ಟೋರೆಂಟಿಗೆ ನುಗ್ಗಿದೆ. ಸದ್ಯಕ್ಕೆ ಅಲ್ಲಿನ ಸಿಸಿ ಕೆಮರಾದಲ್ಲಿ ದಾಖಲಾಗಿದ್ದ ಈ ಅಪಘಾತದ ವಿಡಿಯೊ ಎಲ್ಲೆಡೆ ವೈರಲ್ (Viral Video) ಆಗುತ್ತಿದೆ.
ಇಲ್ಲಿನ ರೆಸ್ಟೊರೆಂಟ್ ಒಂದರಲ್ಲಿ ಗ್ರಾಹಕರು ತಮ್ಮ ಹಸಿವನ್ನು ಇಂಗಿಸಿಕೊಳ್ಳಲು ತಾವು ಆರ್ಡರ್ ಮಾಡಿದ್ದ ಫುಡ್ ಸೇವಿಸುತ್ತಾ ಎಂಜಾಯ್ ಮಾಡ್ತಿದ್ದ ಸಂದರ್ಭದಲ್ಲಿ ಅದೆಲ್ಲಿದಂಲೋ ರೊಯ್ಯನೇ ಬಂದ ಕಾರೊಂದು ಸೀದಾ ರೆಸ್ಟೊರೆಂಟ್ ಒಳಗೇ ನುಗ್ಗಿದೆ. ಕ್ಷಣಮಾತ್ರದಲ್ಲಿ ಆ ಹೊಟೇಲಿನ ಪರಿಸ್ಥಿತಿ ಯುದ್ಧಗ್ರಸ್ತ ರಣಭೂಮಿಯಂತಾಗಿದೆ.
ಡಿ.10ರ ಬೆಳ್ಳಂಬೆಳಗ್ಗೆ 1 ಗಂಟೆ ಸಂದರ್ಭದಲ್ಲಿ ಅಪಘಾತದ ದೃಶ್ಯಾವಳಿಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಕಾರು ನುಗ್ಗಿದ ರಭಸಕ್ಕೆ ರೆಸ್ಟೋರೆಂಟಿನಲ್ಲಿದ್ದ ಟೇಬಲ್, ಚೇರ್‌ಗಳು ಎಗರಿ ಬಿದ್ದಿವೆ. ಈ ಘಟನೆಯಲ್ಲಿ ರೆಸ್ಟೋರೆಂಟ್ ಒಳಗಿದ್ದ ಮೂವರು ಗಾಯಗೊಂಡಿದ್ದಾರೆ.
ಸಿಸಿ ಕೆಮರಾದಲ್ಲಿ ದಾಖಲಾಗಿರುವಂತೆ ಬೊಡೇಲಿಯಲ್ಲಿರುವ ರೆಸ್ಟೋರೆಂಟಿಗೆ ನುಗ್ಗಿದ ಕಾರು ಅಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದು, ಅಪಘಾತವಾದ ಕೂಡಲೇ ಕಾರಿನ ಹಾರ್ನ್ ನಿರಂತರವಾಗಿ ಮೊಳಗಲಾರಂಭಿಸಿದೆ, ಕಾರಿನ ಹೆಡ್ ಲೈಟ್ ಅಲ್ಲಿದ್ದ ಬಟ್ಟೆಯ ಗೋಡೆ ಮೇಲೆ ಪ್ರತಿಫಲಿಸಲಾರಂಭಿಸಿದೆ.
ಈ ಕಾರು ನುಗ್ಗಿದ ಟೇಬಲ್‌ನಲ್ಲಿ ಕುಳಿತಿದ್ದ ವ್ಯಕ್ತಿ ಫೋನಿನಲ್ಲಿ ಮಾತನಾಡುತ್ತಿದ್ದಂತೆ ಈ ಘಟನೆ ನಡೆದಿದೆ. ಕಾರು ತನ್ನತ್ತ ನುಗ್ಗಿ ಬರುತ್ತಿರುವುದನ್ನು ಕಂಡ ಆ ವ್ಯಕ್ತಿ ಎದ್ನೋ ಬಿದ್ನೋ ಅಂತ ಕೊನೇ ಕ್ಷಣದಲ್ಲಿ ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಅಲ್ಲಿಂದ ಓಡಲು ಪ್ರಯತ್ನಿಸಿದ್ದಾನೆ. ಆದರೆ ಅದ್ರ ಪಕ್ಕದಲ್ಲೇ ಇದ್ದ ಇನ್ನೊಂದು ಟೇಬಲ್‌ನಲ್ಲಿ ಕುಳಿತಿದ್ದವರು ಆ ವ್ಯಕ್ತಿಯಷ್ಟು ಅದೃಷ್ಟವಂತರಾಗಿರಲಿಲ್ಲ, ಸಿಸಿ ಕೆಮರಾದಲ್ಲಿ ದಾಖಲಾಗಿರುವಂತೆ ಅವರಿಬ್ಬರ ಮೇಲೆ ಎಸ್.ಯು.ವಿ ಕಾರು ನುಗ್ಗಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಹೈವೇ ಬದಿಯಲ್ಲಿ ಕಾರ್ಯಾಚರಿಸುತ್ತಿದ್ದ ಈ ರೆಸ್ಟೋರೆಂಟ್ ಅಗತ್ಯ ಅನುಮತಿ ಪತ್ರಗಳಿಲ್ಲದೇ ವ್ಯವಹರಿಸುತ್ತಿತ್ತು ಎನ್ನಲಾಗಿದ್ದು, ಈ ಕಾರಣದಿಂದ ಇದರ ಮಾಲಕರು ಯಾವುದೇ ದೂರು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಮಾತ್ರವಲ್ಲದೇ, ಈ ಅಪಘಾತದಲ್ಲಿ ಗಾಯಗೊಂಡವರೂ ಸಹ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಹಾಗಾಗಿ ಅವರೂ ಸಹ ಯಾವುದೇ ಪ್ರಕರಣ ದಾಖಲಿಸಲು ಬಯಸಿಲ್ಲ ಎಂದು ತಿಳಿದುಬಂದಿದೆ.