Wednesday, 8th January 2025

Viral Video: ನ್ಯೂಇಯರ್‌ ಪಾರ್ಟಿಗೆ ಮದ್ಯ ಕದಿಯೋಕೆ ಬಾರ್‌ಗೆ ನುಗ್ಗಿದ ಐನಾತಿ ಕಳ್ಳ; ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ!

ಹೈದರಾಬಾದ್: ತೆಲಂಗಾಣದ(Telangana) ಮೇದಕ್‌ನಲ್ಲಿ(Medak) ಹೊಸ ವರ್ಷದ ಆಚರಣೆಗೆ(New Year) ಮದ್ಯ ಕದಿಯಲು ಯತ್ನಿಸಿದ ಐನಾತಿ ಕಳ್ಳ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಘಟನೆ ವರದಿಯಾಗಿದೆ. ಕದ್ದ ಮದ್ಯವನ್ನು ಅಲ್ಲಿಯೇ ಕಂಠಪೂರ್ತಿ ಕುಡಿದು ಅಂಗಡಿಯಲ್ಲೇ ಮಲಗಿದ್ದು, ಬೆಳಗ್ಗೆ ಅಂಗಡಿ ಮಾಲೀಕ ಬಾಗಿಲು ತೆಗೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.(Viral Video)

2025 ರ ಹೊಸ ವರ್ಷದ ಸಂಭ್ರಮಾಚರಣೆಗೆ ಹಣವಿಲ್ಲದ ಕಾರಣ ತೆಲಂಗಾಣ ವ್ಯಕ್ತಿಯೊಬ್ಬ ಮದ್ಯದ ಅಂಗಡಿಗೆ ನುಗ್ಗಿ ಮದ್ಯದ ಬಾಟಲಿಗಳನ್ನು ಲಪಟಾಯಿಸಿದ್ದಾನೆ. ಕದ್ದ ಬಾಟಲಿಯೊಂದಿಗೆ ಬಾರ್​ನಿಂದ ಹೊರಗಡೆ ಬರುವ ಮುನ್ನ ಅಲ್ಲಿದ್ದ ಒಂದಿಷ್ಟು ಮದ್ಯವನ್ನು ಕುಡಿದು ಮತ್ತೆ ಹೋಗುವ ಎಂದು ಪ್ಲಾನ್​​ ಮಾಡಿದ್ದಾನೆ. ಆದರೆ ಕಂಠಪೂರ್ತಿ ಕುಡಿದ ಖದೀಮ ಅಲ್ಲೇ ಮಲಗಿದ್ದು, ಮರುದಿನ ಬೆಳಗ್ಗೆ ಅಂಗಡಿಯ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದಾನೆ. ತೆಲಂಗಾಣದ ಮೇದಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಭಾನುವಾರ ರಾತ್ರಿ ಕಳ್ಳ ‘ಕನಕದುರ್ಗಾ ವೈನ್ಸ್’ ಹೆಸರಿನ ಅಂಗಡಿಗೆ ನುಗ್ಗಿದ್ದು, ಛಾವಣಿಯ ಕೆಲವು ಹೆಂಚುಗಳನ್ನು ಕಿತ್ತು ಸಿಸಿಟಿವಿ ಕ್ಯಾಮೆರಾ ಹಾಳುಮಾಡಿ ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ಕದ್ದಿದ್ದು,ಇನ್ನೇನು ಅಂಗಡಿಯಿಂದ ಪಾರಾಗಬೇಕು ಎನ್ನುವಷ್ಟರಲ್ಲಿ ಮದ್ಯದ ಮೇಲಿನ ಆಸೆಗೆ ವಿಪರೀತವಾಗಿ ಕುಡಿದಿದ್ದಾನೆ. ಸೋಮವಾರ ಮುಂಜಾನೆ ಅಂಗಡಿ ಮಾಲೀಕ ಅಂಗಡಿಯ ಬಾಗಿಲು ತೆರೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಕಂಡು ಅಲ್ಲಿನ ಎಲ್ಲರೂ ಶಾಕ್​ ಆಗಿದ್ದಾರೆ.

ಸೋಮವಾರ ಬೆಳಗ್ಗೆ ಪೊಲೀಸರು ಸ್ಥಳಕ್ಕೆ ಬಂದ ನಂತರ ಘಟನೆಯ ದೃಶ್ಯಗಳನ್ನು ಪತ್ತೆ ಹಚ್ಚಿದ್ದಾರೆ. ಕಳ್ಳ ಮದ್ಯದಂಗಡಿಯಲ್ಲಿ ನೆಲದ ಮೇಲೆ ಮಲಗಿದ್ದು ಹಣ ಮತ್ತು ಮದ್ಯದ ಬಾಟಲಿಗಳು ಅವನ ಸುತ್ತಲೂ ಬಿದ್ದಿರುವುದನ್ನು ತೋರಿಸುವ ಫೋಟೊ ಭಾರೀ ವೈರಲ್ ಆಗಿದೆ. ಈ ಕುರಿತು ಮಾಹಿತಿ ನೀಡಿದ ಸಬ್ ಇನ್ಸ್‌ಪೆಕ್ಟರ್ ಅಹ್ಮದ್ ಮೊಯಿನುದ್ದೀನ್ “ಕಳ್ಳನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಂಧಿಸಲಾಗಿದೆ. ಆತನನ್ನು ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಬೇಕಿದೆ. ಅವನಿಗೆ ಪ್ರಜ್ಞೆ ಬರಲಿ ಎಂದು ಪೊಲೀಸ್ ತಂಡ ಕಾಯುತ್ತಿದೆ ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Traffic Jam: ಹೈವೇಯಲ್ಲಿ ಭಾರೀ ಟ್ರಾಫಿಕ್‌ ಜಾಮ್;‌ ಆಂಬ್ಯುಲೆನ್ಸ್‌ನಲ್ಲಿದ್ದ ಇಬ್ಬರು ರೋಗಿಗಳು ದುರ್ಮರಣ!