ಲಖನೌ: ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಗಳ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್ ಸಿಗದೇ ರೋಗಿಗಳನ್ನು ಜೋಳಿಗೆಯಲ್ಲಿ ಅಥವಾ ಹೆಗಲ ಮೇಲೆ ಹೊತ್ತುಕೊಂಡು ಸಾಗಿಸಿರುವಂತಹ ಘಟನೆಗಳನ್ನೂ ನೋಡಿರ್ತೇವೆ. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆಗಾಗಿ ತಂದಿದ್ದ ಶವನನ್ನು ಕಾಲಿನಲ್ಲಿ ಹಿಡಿದು ಎಳೆದೊಯ್ದಿರುವ ಶಾಕಿಂಗ್ ಘಟನೆ ವರದಿಯಾಗಿದೆ. ಝಾನ್ಸಿಯಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.
A case of appalling apathy has come to the fore in #UttarPradesh's #Jhansi, where two men, in a viral video, are seen dragging a body by its legs inside a post mortem house.
— Hate Detector 🔍 (@HateDetectors) January 6, 2025
This came just days after a video showed another man manhandling another body outside a hospital in the… pic.twitter.com/UUEXJvmld0
ವರದಿಗಳ ಪ್ರಕಾರ, ವೈರಲ್ ವಿಡಿಯೊವನ್ನು ಝಾನ್ಸಿ ಮರಣೋತ್ತರ ಭವನದ ಹೊರಗೆ ರೆಕಾರ್ಡ್ ಮಾಡಲಾಗಿದೆ. ಆದರೆ, ಈ ಘಟನೆ ಯಾವಾಗ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. 10 ಸೆಕೆಂಡುಗಳ ಈ ವಿಡಿಯೊದಲ್ಲಿ, ಇಬ್ಬರು ಪುರುಷರು ಶವವನ್ನು ಹೊರಗಡೆಯಿಂದ ಎಳೆದುಕೊಂಡು ಹೋಗಿದ್ದಾರೆ. ಅದರಲ್ಲಿ ಮೇಲಿನ ಅರ್ಧ ದೇಹವನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಅವರು ಶವವನ್ನು ತೆಗೆದುಕೊಂಡು ಮರಣೋತ್ತರ ವಾರ್ಡ್‍ಗೆ ಹೋಗಿದ್ದಾರೆ. ಮಹಿಳೆಯರು ಕಿರುಚುತ್ತಿರುವಂತೆ ಶಬ್ದಗಳು ಕೇಳಿಬಂದಿವೆ. ಶವವನ್ನು ಎಳೆದೊಯ್ಯುತ್ತಿರುವ ಪುರುಷರು ಆಂಬ್ಯುಲೆನ್ಸ್ ಸಿಬ್ಬಂದಿಗಳು ಎಂದು ಶಂಕಿಸಲಾಗಿದೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಪೊಲೀಸರು ಈ ವಿಷಯದ ಬಗ್ಗೆ ಮಾಹಿತಿ ತಿಳಿದುಕೊಂಡು ತನಿಖೆಯನ್ನು ಶುರು ಮಾಡಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರು ವ್ಯಕ್ತಿಗಳನ್ನು ಇನ್ನೂ ಗುರುತಿಸಲಾಗಿಲ್ಲ ಮತ್ತು ಮೃತರ ಗುರುತನ್ನು ಸಹ ಪತ್ತೆಮಾಡಿಲ್ಲ. ಘಟನೆಯ ಸುತ್ತಲಿನ ಹೆಚ್ಚಿನ ವಿವರಗಳನ್ನು ಕಂಡುಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸರ್ಕಲ್ ಆಫೀಸರ್ ರಾಮ್ವೀರ್ ಸಿಂಗ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಖಡ್ಗಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೆ ಆಗಿದ್ದೇನು? ವಿಡಿಯೊ ಇದೆ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸರ್ಕಲ್ ಆಫೀಸರ್ ರಾಮ್ವೀರ್ ಸಿಂಗ್, “ವೈರಲ್ ವೀಡಿಯೊವನ್ನು ಪೊಲೀಸರು ಗಮನಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಶವವನ್ನು ಎಳೆಯುವುದನ್ನು ಕಾಣಬಹುದು. ನಾವು ವಿಡಿಯೊದ ಸ್ಥಳ ಮತ್ತು ಸಮಯವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.