ಭಾರತೀಯ ಮದುವೆಗಳೆಂದರೆ (Indian Marriage) ಮೊದಲಿನಿಂದಲೂ ವೆಚ್ಚದಾಯಕವೆಂದೇ ಹೆಸರುವಾಸಿ. ಹಿಂದಿನ ಕಾಲದಲ್ಲಿ ಹೆಣ್ಣು ಹೆತ್ತವರು ಮದುವೆ ಎಂದರೆ ಬೆಚ್ಚಿ ಬೀಳುತ್ತಿದ್ದರು. ವರದಕ್ಷಿಣೆ, ವರೋಪಚಾರ, ಒಡವೆ, ಮದುವೆ ಖರ್ಚು, ಬೀಗರೌತಣ.. ಹೀಗೆ ಮದುವೆ ಎಂದರೆ ಅದು ವೆಚ್ಚದ ಸರಮಾಲೆಯೇ ಸರಿ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು-ಗಂಡುಗಳಿಬ್ಬರೂ ತಮ್ಮ ಮದುವೆ ಹೀಗೇ ಆಗಬೇಕೆಂಬ ಕನಸನ್ನು ಕಟ್ಟಿಕೊಂಡಿರುತ್ತಾರೆ ಮತ್ತು ಅದಕ್ಕೆ ಸರಿಯಾಗಿ ಇಬ್ಬರೂ ದುಡಿದು ಗಳಿಸುವುದರಿಂದ, ತಮ್ಮ ಮದುವೆ ಖರ್ಚು ವೆಚ್ಚಗಳನ್ನು ನಿಭಾಯಿಸಲು ಅವರೂ ಸಹ ಹೆತ್ತವರಿಗೆ ಸಾಥ್ ನೀಡುತ್ತಾರೆ. ಅದರಲ್ಲೂ ಜೆನ್-ಝಡ್ (Gen Z) (1990 ರಿಂದ 2010ರ ನಡುವೆ ಜನಿಸಿದವರು) ತಮ್ಮ ಮದುವೆ ಸಮಾರಂಭ ಅದ್ದೂರಿಯಾಗಿ ನಡೆಯಬೇಕೆಂಬ ದುಬಾರಿ ಕನಸುಗಳನ್ನು ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಇದಕ್ಕೆ ಕಮೆಡಿಯನ್ ಒಬ್ಬರು ನೀಡಿರುವ ಹಾಸ್ಯದ ದಾಟಿಯ ಪ್ರತಿಕ್ರಿಯೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಜೆನ್ –ಝಡ್ ಯುವ ಸಮುದಾಯದವರಲ್ಲಿ ನಿರೂಪಕಿಯೊಬ್ಬರು ನಿಮ್ಮ ಮದುವೆಗೆ ಎಷ್ಟು ಖರ್ಚು ಮಾಡಲು ಬಯಸುತ್ತೀರಿ ಎಂಬ ಪ್ರಶ್ನೆ ಕೇಳಿದಾಗ ಅವರಲ್ಲಿ ಹೆಚ್ಚಿನವರು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ತಮ್ಮ ಮದುವೆ ಸಮಾರಂಭ ನಡೆಯಬೇಕು ಎಂದು ಹೇಳಿರುವುದು ಇದೀಗ ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಇವರಲ್ಲಿ ಹೆಚ್ಚಿನವರು ಎಂಟು ಅಂಕೆ (ಕೋಟಿ) ಮೊತ್ತವನ್ನು ನಮೂದಿಸಿರುವುದು ಅಚ್ಚರಿಯ ವಿಷಯವಾಗಿದೆ.
ಈ ವಿಡಿಯೋದಲ್ಲಿರುವಂತೆ, ಯುವತಿಯೊಬ್ಬಳು ತನ್ನ ಮದುವೆಗೆ 6 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ಬಯಸುವುದಾಗಿ ಹೇಳುತ್ತಾಳೆ. ಇನ್ನೊಬ್ಬರು ತಮ್ಮ ಮದುವೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಬೇಕೆಂದು ಆಸೆಪಟ್ಟಿದ್ದಾರೆ.
ಈ ಅಭಿಪ್ರಾಯವನ್ನು ತಮ್ಮ ವಿಡಿಯೋದಲ್ಲಿ ಮೀಮ್ ಮಾಡಿರುವ ಕಮೆಡಿಯನ್ ಶಾ, ಈಗಿನ ಯುವ ಜನಾಂಗ ತಮ್ಮ ಮದುವೆಯನ್ನು ಕೋಟಿಗಳಲ್ಲಿ ನಡೆಸಲು ಇಚ್ಛಿಸುತ್ತಿರುವುದು ನಿಜವಾಗ್ಲೂ ಆಶ್ಚರ್ಯದ ವಿಷಯವೇ ಸರಿ. ಇವರ ಕೋಟಿಗಟ್ಟಲೆ ಮದುವೆ ಬಜೆಟ್ ನಷ್ಟು ನನ್ನ ಜೀವಮಾನದ ಬಜೆಟ್ ಕೂಡಾ ಇಲ್ಲ ಎಂದು ಹಾಸ್ಯಭರಿತವಾಗಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ..!
‘ಈ ಜೆನ್-ಝಡ್ ಯುವಕರ-ಯುವತಿಯರು ಯಾಕೆ ಈ ಭ್ರಮಾಲೋಕದಲ್ಲಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ತಮ್ಮ ಮದುವೆ ಬಜೆಟ್ 6 ಕೋಟಿ ಎಂದು ಸಾಮಾನ್ಯ ರೀತಿಯಲ್ಲಿ ಹೇಳುತ್ತಿದ್ದಾರೆ. ಇದು ನನ್ನ ಜೀವನಪೂರ್ತಿ ಬಜೆಟ್ ಆಗಿದೆ. ನನಗೆ ಯಾರಾದ್ರೂ ಕೋಟಿ ರೂಪಾಯಿಗಳನ್ನು ನೀಡಿದ್ರೆ, ನಾನು ಈಗ್ಲೇ ನಿವೃತ್ತನಾಗ್ತೇನೆ ಮತ್ತು ಯಾವುದಾದ್ರೂ ಪರ್ವತ ಪ್ರದೇಶಕ್ಕೆ ಹೋಗಿ ಅಲ್ಲಿ ಕೆಫೆ ತೆರೆದು, ಕ್ರಿಕೆಟ್ ಆಡುತ್ತಾ ಖುಷಿಯಾಗಿ ಜೀವನ ಕಳೀತೀನಿ’ ಎಂದು ಶಾ ತನ್ನ ವಿಡಿಯೋದಲ್ಲಿ ಹೇಳಿಕೊಂಡಿರುವುದು ಇದೀಗ ವೈರಲ್ ಆಗಿದೆ.
‘ಕೋಟಿ ಅಂದರೆ ಏನೂ ಅಲ್ಲ ಎನ್ನುವ ರೀತಿಯಲ್ಲಿ ಇವರೆಲ್ಲಾ ಕೋಟಿ ಬಗ್ಗೆ ಮಾತನಾಡುತ್ತಿದ್ದಾರೆ. ನಾವೆಲ್ಲಾ ಟ್ಯಾಕ್ಸಿಯಲ್ಲಿ ಹೋಗ್ಬೇಕಾಗಿ ಬಂದ್ರೆ ಉಬರ್ ಮತ್ತು ಓಲಾದ ನಡುವಿನ ರೇಟ್ ಕಂಪೇರ್ ಮಾಡ್ಕೊಂಡು ಬಳಿಕ ರೈಲು ಹಿಡಿದು ಹೊಗ್ತೀವಿ, ಅಂತಹ ಜನಾಂಗ ನಮ್ಮದು’ ಎಂದು ಶಾ ತಮಾಷೆಯಾಗಿ ಹೇಳಿದ್ದರು ಅದರೊಳಗಿನ ಗುಡಾರ್ಥ ಮಾರ್ಮಿಕವಾಗಿದೆ.
ಈ ಸುದ್ದಿಯನ್ನೂ ಓದಿ: Viral Post: ಪಾನಿಪೂರಿ ವ್ಯಾಪಾರಿಗೆ ಬಂತು GST ನೊಟೀಸ್! ಒಂದು ವರ್ಷದಲ್ಲಿ ಈತನ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ..!
ಇನ್ನು, ಈ ರೀಲ್ ಅನ್ನು ಐಟಿ ಇಲಾಖೆಯವರು ನೋಡಿದ್ರೆ ಯಾರ ಮಕ್ಕಳ ಹೆತ್ತವರು ಕೋಟ್ಯಾಧಿಪತಿಗಳು ಎಂದು ಅವರಿಗೆ ಸುಲಭವಾಗಿ ತಿಳಿಯುತ್ತದೆ ಎಂದೂ ಸಹ ಶಾ ವ್ಯಂಗವಾಗಿ ಹೇಳಿದ್ದಾರೆ. ‘ನನ್ನ ಪ್ರಕಾರ ಆದಾಯ ತೆರಿಗೆ ಇಲಾಖೆಯವರು ಈ ನಿರೂಪಕರನ್ನು ತಮ್ಮ ಸೀಕ್ರೆಟ್ ಏಜೆಂಟ್ ಗಳನ್ನಾಗಿ ಮಾಡ್ಕೊಂಡು ಇಂತಹ ಮಕ್ಕಳಲ್ಲಿ ತಮ್ಮ ಮದುವೆ ಪ್ಲ್ಯಾನ್ ಬಗ್ಗೆ ಕೇಳ್ಕೊಂಡು ಅವರ ಹೆತ್ತವರ ಆದಾಯದ ಮಾಹಿತಿಯನ್ನು ಪಡೆದುಕೊಳ್ಳುತ್ತಿರಬಹುದು’ ಎಂದೂ ಸಹ ಶಾ ತಮ್ಮ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಜೆನ್-ಝಡ್ ತಮ್ಮ ಮದುವೆ ಬಗ್ಗೆ ಕೋಟಿಗಳಲ್ಲಿ ಮಾತನಾಡಿರುವುದು ಇದೀಗ ನೆಟ್ ಲೋಕದಲ್ಲಿ ಭರ್ಜರಿ ಚರ್ಚೆ ಮತ್ತು ಕತೂಹಲಕ್ಕೆ ಕಾರಣವಾಗಿದೆ.