Tuesday, 7th January 2025

Viral Video:‌ ಇದು ಸರ್ಪ ಸಂಬಂಧ! ಸತ್ತ ಗಂಡು ಹಾವಿನ ಎದುರು ಗಂಟೆಗಟ್ಟಲೆ ಕೂತು ಶೋಕಿಸಿದ ಹೆಣ್ಣು ಹಾವು; ವಿಡಿಯೊ ವೈರಲ್

ಭೋಪಾಲ್:‌ ಬಹುತೇಕ ನಾವೆಲ್ಲರೂ ಹಾವುಗಳ ಸರಸ-ಸಲ್ಲಾಪಗಳನ್ನು ನೋಡಿರುತ್ತೇವೆ. ಅಷ್ಟೇ ಅಲ್ಲದೆ ಹಾವುಗಳ ಕುರಿತಾದ ನೂರಾರು ದಂತಕತೆಗಳನ್ನೂ ಕೇಳಿರುತ್ತೇವೆ. ಹಾವುಗಳ ಅದೆಷ್ಟೋ ವಿಡಿಯೊಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಅದೆಲ್ಲಕ್ಕಿಂತ ಭಿನ್ನವಾದ ದೃಶ್ಯವೊಂದು ಇದೀಗ ಗಮನ ಸೆಳೆದಿದೆ. ಮಧ್ಯಪ್ರದೇಶದ (Madhya Pradesh) ಹಳ್ಳಿಯೊಂದರಲ್ಲಿ ಜೆಸಿಬಿ ವಾಹನಕ್ಕೆ ಸಿಲುಕಿ ಸತ್ತ ಗಂಡು ಹಾವಿನ ಎದುರು ಹೆಣ್ಣು ಹಾವೊಂದು ಗಂಟೆಗಟ್ಟಲೆ ಕೂತು ಶೋಕಿಸಿರುವ ವಿಡಿಯೊ ಭಾರೀ ವೈರಲ್‌ ಆಗಿದೆ (Viral Video).

ಮನುಷ್ಯರು ಮಾತ್ರ ಪರಸ್ಪರ ಪ್ರೀತಿಸುತ್ತಾರೆ ಮತ್ತು ದುಃಖಿಸುತ್ತಾರೆ ಎಂದು ತಿಳಿದುಕೊಂಡಿದ್ದೇವೆ. ಆದರೆ ಇಲ್ಲಿ ಹೆಣ್ಣು ಹಾವೊಂದು ತನ್ನ ಜೊತೆಗಾರನನ್ನು ಕಳೆದುಕೊಂಡು ರೋದಿಸಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ. ಪ್ರೀತಿ ದೊಡ್ಡದು. ಇದು ಸರ್ಪ ಪ್ರೇಮ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಮಧ್ಯಪ್ರದೇಶದ ಛತ್ರಿ ಗ್ರಾಮದ ರೈತರೊಬ್ಬರು ತಮ್ಮ ಹೊಲವನ್ನು ಸ್ವಚ್ಛಗೊಳಿಸುವ ಕಾಮಗಾರಿಗೆ ಜೆಸಿಪಿ ವಾಹನವನ್ನು ಬಳಸಿದ್ದಾರೆ. ಜೆಸಿಬಿ ಎಂಜಿನ್ ವೇಗವಾಗಿ ಕೆಲಸ ಮಾಡಿದೆ. ಈ ವೇಳೆ ಕೃಷಿ ಭೂಮಿಯ ಗುಂಡಿಯಲ್ಲಿ ಅಡಗಿ ಕುಳಿತಿದ್ದ ಜೋಡಿ ಹಾವುಗಳು ಅನಿರೀಕ್ಷಿತವಾಗಿ ಜೆಸಿಬಿಗೆ ಸಿಲುಕಿವೆ. ಅದರಲ್ಲಿ ಒಂದು ಗಂಡು ಹಾವು ಸ್ಥಳದಲ್ಲೇ ಮೃತಪಟ್ಟಿದೆ. ಹೆಣ್ಣು ಹಾವು ಕೂಡ ಗಂಭೀರವಾಗಿ ಗಾಯಗೊಂಡಿದೆ. ಈ ಘಟನೆಯ ನಂತರ ಜೆಸಿಬಿ ಚಾಲಕರು ಕೆಲಸವನ್ನು ನಿಲ್ಲಿಸಿದ್ದಾರೆ. ತೋಟದ ಮಾಲೀಕರು ಮತ್ತು ಇತರರು ಜೋಡಿ ಹಾವುಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಜೀವಂತ ಹೆಣ್ಣು ಹಾವಿಗೆ ನೀರು ಕೊಟ್ಟು ಆರೈಕೆ ಮಾಡಿದ್ದಾರೆ. ಈ ವೇಳೆ ಹೆಣ್ಣು ಹಾವು ಗಂಟೆಗಟ್ಟಲೆ ಗಂಡು ಹಾವಿನ ದೇಹವನ್ನೇ ದಿಟ್ಟಿಸಿ ನೋಡಿದೆ. ಒಂದು ಕ್ಷಣವೂ ಹೆಣ್ಣು ಹಾವು ಗಂಡು ಹಾವಿನಿಂದ ದೂರ ಸರಿದಿಲ್ಲ. ಗಂಡು ಹಾವು ಎದ್ದು ಸರಿದಾಡುತ್ತದೆ ಎಂದು ಹೆಣ್ಣು ಹಾವು ಎಷ್ಟು ಹೊತ್ತು ಕಾದರೂ ಅದು ಪ್ರಯೋಜನವಾಗಲಿಲ್ಲ.

ತೋಟದ ಮಾಲೀಕರು ಕೂಡಲೇ ಆ ಪ್ರದೇಶದಲ್ಲಿದ್ದ ಹಾವು ಹಿಡಿಯುವ ಸಲ್ಮಾನ್ ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಲ್ಲಿಗೆ ತಲುಪಿ ಗಾಯಗೊಂಡ ಹಾವಿಗೆ ಚಿಕಿತ್ಸೆ ನೀಡಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಸ್ಥಳದಲ್ಲಿ ಕಂಡುಬರುವ ಗುರುತುಗಳನ್ನು ನೋಡಿದರೆ, ಈ ಹಾವುಗಳು ಹಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿವೆ ಎಂದು ತಿಳಿದು ಬಂದಿದೆ. ಹಾವುಗಳು ಚಳಿಗಾಲವನ್ನು ಇಷ್ಟಪಡುವುದಿಲ್ಲವಾದ್ದರಿಂದ ಅವು ನೆಲದಡಿಯಲ್ಲಿ, ರಂಧ್ರಗಳಲ್ಲಿ ಅಥವಾ ಬಿರುಕುಗಳಲ್ಲಿ ಆಶ್ರಯ ಪಡೆಯುತ್ತವೆ. ಹೀಗಾಗಿಯೇ ಈ ಎರಡು ಹಾವುಗಳು ಅಲ್ಲಿ ಇದ್ದವು ಎಂದು ಉರಗ ತಜ್ಞರು ತಿಳಿಸಿದ್ದಾರೆ.

ಅನಿರೀಕ್ಷಿತ ದುರಂತದಿಂದಾಗಿ ಎರಡು ಹಾವುಗಳು ಈಗ ಬೇರ್ಪಟ್ಟಿವೆ. ಈ ವಿಡಿಯೊ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. 

ಈ ಸುದ್ದಿಯನ್ನೂ ಓದಿ:Mossad Spy: 1965ರಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿದ್ದ ಎಲಿ ಕೊಹೆನ್ ದೇಹ ಹಿಂಪಡೆಯಲು ಇಸ್ರೇಲ್ ಪ್ರಯತ್ನ; ಇದರ ಹಿಂದಿದೆ ಮುಖ್ಯ ಕಾರಣ

Leave a Reply

Your email address will not be published. Required fields are marked *