ನವದೆಹಲಿ: ದೊಡ್ಡ ದೊಡ್ಡ ಮಾಲ್ಗಳಲ್ಲಿ ಜನರಿಗೆ ಮೆಟ್ಟಿಲುಗಳನ್ನು ಏರಲು ಇಳಿಯಲು ಕಷ್ಟವಾಗಬಾರದೆಂದು ಎಸ್ಕಲೇಟರ್ಗಳನ್ನು ಅಳವಡಿಸಿರುತ್ತಾರೆ. ಆದರೆ ಹಳ್ಳಿಯಿಂದ ಬಂದ ಸಾಮಾನ್ಯ ಜನರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ಹಾಗಾಗಿ ಅಂತವರು ಈ ಎಸ್ಕಲೇಟರ್ನಿಂದ ಸಮಸ್ಯೆಗೆ ಸಿಲುಕುತ್ತಾರೆ. ಅಂತಹದೊಂದು ಘಟನೆ ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ಮಹಿಳೆಯೊಬ್ಬರು ಕೆಳಕ್ಕೆ ಚಲಿಸುತ್ತಿದ್ದ ಎಸ್ಕಲೇಟರ್ ಅನ್ನು ಹತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲಾದ ಈ ವಿಡಿಯೊದಲ್ಲಿ, ಮಹಿಳೆಯೊಬ್ಬರು ಕೆಳಕ್ಕೆ ಚಲಿಸುತ್ತಿರುವ ಎಸ್ಕಲೇಟರ್ ಅನ್ನು ಏರಲು ಪ್ರಯತ್ನಿಸಿದ್ದಾರೆ. ಕೈಯಲ್ಲಿ ಸೂಟ್ ಕೇಸ್ ಹಿಡಿದ ಮಹಿಳೆ ಎಸ್ಕಲೇಟರ್ ಕೆಳಗಡೆ ಚಲಿಸುತ್ತಿದ್ದರೂ ಸ್ವಲ್ಪವೂ ವಿಚಲಿತಳಾಗದೇ ಮೆಟ್ಟಿಲು ಹತ್ತುವುದರಲ್ಲೇ ಮಗ್ನಳಾಗಿದ್ದಾರಂತೆ. ಎಸ್ಕಲೇಟರ್ನಿಂದ ಕೆಳಕ್ಕೆ ಇಳಿಯುತ್ತಿರುವ ಹಲವರು ಸನ್ನೆ ಮಾಡುವುದು ಮತ್ತು ಅವರೊಂದಿಗೆ ಸಂವಹನ ನಡೆಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಂತೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಮತ್ತು ಕೆಲವರು ಊಹಾಪೋಹಗಳನ್ನು ಹುಟ್ಟುಹಾಕಿದ್ದಾರೆ. ಕೆಲವು ವೀಕ್ಷಕರು ಮಹಿಳೆ ಗ್ರಾಮೀಣ ಪ್ರದೇಶದಿಂದ ಬಂದಿರಬಹುದು ಮತ್ತು ಎಸ್ಕಲೇಟರ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಇತರರು ಬಹುಶಃ ತಮಾಷೆ ಅಥವಾ ಫಿಟ್ನೆಸ್ಗಾಗಿ ಹೀಗೆ ಮಾಡಿರಬಹುದು ಎಂದು ಊಹಿಸಿದ್ದಾರೆ. ಈ ಸನ್ನಿವೇಶವನ್ನು ಅನೇಕರು ಹಾಸ್ಯಾಸ್ಪದವಾಗಿ ಕಂಡಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ “ಮಹಿಳೆ ಎರಡು ಕಿಲೋಮೀಟರ್ನಷ್ಟು ನಡೆದರೂ, ಅವರು ಅದೇ ಸ್ಥಳದಲ್ಲೇ ಇರುತ್ತಾರೆ” ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು “ಅವರು ದಿನಕ್ಕೆ 10,000 ಹೆಜ್ಜೆಗಳ ಗುರಿಯನ್ನು ತಲುಪಲು ನಿರ್ಧರಿಸಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಒಪ್ಪೊತ್ತಿನ ಊಟಕ್ಕಾಗಿ ಇಟ್ಟಿಗೆ ಹೊತ್ತು, ನೀಟ್ ಪರೀಕ್ಷೆ ಪಾಸ್ ಮಾಡಿದ ಯುವಕ… ಈತನ ಸಾಧನೆಗೆ ಬಹುಪರಾಕ್ ಎಂದ ಜನ!
ಈ ವೈರಲ್ ವಿಡಿಯೊ ಈಗಾಗಲೇ 6.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ, ಅಸಂಖ್ಯಾತ ಕಾಮೆಂಟ್ಗಳು ಬಂದಿವೆ. ಮಹಿಳೆ ನಿಜವಾಗಿಯೂ ಗೊಂದಲಕ್ಕೊಳಗಾಗಿ ಹೀಗೆ ಮಾಡಿದ್ದಾರೋ ಅಥವಾ ನೋಡುಗರನ್ನು ರಂಜಿಸುವುದಕ್ಕಾಗಿ ಹೀಗೆ ಮಾಡಿದ್ದಾರೋ ಎಂಬುದು ಗೊತ್ತಿಲ್ಲ, ಆದರೆ ಮಹಿಳೆಯ ದೃಢನಿಶ್ಚಯವು ಖಂಡಿತವಾಗಿಯೂ ಎಲ್ಲರ ಗಮನವನ್ನು ಸೆಳೆದಿದೆ. ಅನೇಕರು ಅವರನ್ನು ತಮಾಷೆ ಮಾಡಿದ್ದಾರೆ.