ಮೀರತ್: ಉತ್ತರಪ್ರದೇಶದ ಮೀರತ್ (Meerut)ನಲ್ಲಿ ತನ್ನ ಸಹೋದರನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವತಿಯೊಬ್ಬಳಿಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ. ಇಷ್ಟು ಸಾಲದೆಂಬಂತೆ ಬಳಿಕ ಸ್ಕೂಟರ್ ಸವಾರರು ಯುವತಿಯ ಸಹೋದರನ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಒಟ್ಟಿನಲ್ಲಿ ಆಗಿದ್ದೇನೆಂದರೆ, ನ. 6ರಂದು ಇಲ್ಲಿನ ಅಹಮ್ಮದ್ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯ ಕಿರಿದಾದ ಜಾಗದಲ್ಲಿ ಯುವಕರು ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಯುವತಿಯೊಬ್ಬಳು ತನ್ನ ಸಹೋದರನೊಂದಿಗೆ ಅಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಈ ವೇಳೆ ಸ್ಕೂಟರ್ ಸವಾರರು ಬೇಕಂತಲೇ ಯುವತಿಯ ಮೇಲೆ ಸ್ಕೂಟರ್ ಚಲಾಯಿಸಿದ್ದಾರೆ ಮತ್ತು ಆಕೆಯ ಸಹೋದರನಿಗೆ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.
ಇದಾದ ಬಳಿಕ ಸ್ಕೂಟರ್ ಸವಾರರು ಅಲ್ಲಿಂದ ತೆರಳಿ ಸ್ವಲ್ಪ ಹೊತ್ತಿನ ಬಳಿಕ ತಮ್ಮ ಗೆಳೆಯರ ತಂಡದೊಂದಿಗೆ ವಾಪಾಸಾಗಿದ್ದಾರೆ. ಬಂದವರೇ ಯುವತಿಯ ಸಹೋದರನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.
ವಿಡಿಯೊದಲ್ಲಿ ಏನಿದೆ?
ಅಲ್ಲೇ ಇದ್ದ ಸಿಸಿ ಕೆಮ್ಯಾರಾ ಈ ಗಲಾಟೆಯ ದೃಶ್ಯಗಳು ಸೆರೆಯಾಗಿದೆ. ಅದರಲ್ಲಿರುವಂತೆ ಯುವಕನ ಮೇಲೆ ಗಂಪು ಹಲ್ಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ಗಲಾಟೆ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಈ ನಡುವೆ ತನ್ನ ಸಹೋದರನನ್ನು ಹಲ್ಲೆಕೋರರಿಂದ ರಕ್ಷಿಸಲು ಯುವತಿಯೂ ಮಧ್ಯ ಪ್ರವೇಶ ಮಾಡಿದ್ದಾಳೆ. ಆದರೆ ಹಲ್ಲೆಕೋರರ ಗುಂಪು ಯಾರ ಮಾತನ್ನೂ ಕೇಳಿಸಿಕೊಳ್ಳದೆ ಯುವಕನ ಮೇಲೆ ಹಲ್ಲೆ ನಡೆಸುವುದನ್ನು ಮುಂದುವರಿಸಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ಈ ನಡುವೆ ಘಟನೆಯು ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದ್ದು, ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ತೆರಳಿ ಹಲ್ಲೆಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆಯನ್ನು ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯಕ್ಕೆ ಪೊಲೀಸರು ಘಟನಾ ಸ್ಥಳದ ಸಿಸಿ ಕೆಮ್ಯಾರಾ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. “ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Murder case: ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಚಾಕುವಿನಿಂದ ಇರಿದು ತಾಯಿಯನ್ನೇ ಕೊಂದ ಪಾಪಿ ಮಗ!