ಲಕ್ಷದ್ವೀಪ : ಕಲ್ಪೇನಿ ದ್ವೀಪದ ಬಳಿ ಮುಳುಗುಗಾರರು ಪ್ರಾಚೀನ ಯುದ್ಧ ನೌಕೆ (Warship) ಒಂದನ್ನು ಪತ್ತೆ ಮಾಡಿದ್ದು, 17 ಅಥವಾ 18 ನೇ ಶತಮಾನದ ಯುರೋಪಿಯನ್ ನೌಕೆಯಾಗಿರಬಹುದು ಎಂದು ಊಹಿಸಲಾಗಿದೆ. ಲಕ್ಷದ್ವೀಪ (Lakshadweep) ದ್ವೀಪಸಮೂಹದ ಕಲ್ಪೇನಿ ದ್ವೀಪದ (Kalpeni Island) ಬಳಿ ಸಮುದ್ರ ಜೀವಿಗಳನ್ನು ಅನ್ವೇಷಿಸುತ್ತಿದ್ದಾಗ ಅವರು ಯುದ್ಧನೌಕೆಯನ್ನು ಅವರು ಕಂಡಿದ್ದಾರೆ.
ಸಂಶೋಧಕರ ಪ್ರಕಾರ, ದ್ವೀಪದ ಪಶ್ಚಿಮ ಭಾಗದಲ್ಲಿರುವ ನೌಕೆಯ ಅವಶೇಷಗಳು ಪೋರ್ಚುಗೀಸ್, ಡಚ್ ಅಥವಾ ಬ್ರಿಟಿಷ್ ಈ ಮೂರು ಯುರೋಪಿಯನ್ ರಾಷ್ಟ್ರಗಳಿಗೆ ಸೇರಿದೆ ಎಂದು ಹೇಳಲಾಗಿದೆ. ಇದು ಈ ಪ್ರದೇಶದಲ್ಲಿ ನಡೆದ ಮೊದಲ ಆವಿಷ್ಕಾರವಾಗಿದೆ . ಪತ್ತೆಯಾದ ನೌಕೆಯ ಅವಶೇಷಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಿದೆ.
17 ಅಥವಾ 18 ನೇ ಶತಮಾನದ ಯುದ್ಧ ನೌಕೆ ?
17 ಮತ್ತು 18 ನೇ ಶತಮಾನದ ನೌಕೆ ಇದಾಗಿರಬಹುದೆಂದು ಎಂದು ಊಹಿಸಲಾಗಿದೆ. ಇದೇ ಮಾರ್ಗದಲ್ಲಿ ಮಧ್ಯಪ್ರಾಚ್ಯ ಮತ್ತು ಶ್ರೀಲಂಕಾ ನಡುವೆ ವ್ಯಾಪಾರ ಮಾರ್ಗ ಇತ್ತು. ವ್ಯಾಪಾರ ಮಾರ್ಗದ ಮೇಲಿನ ಪ್ರಾಬಲ್ಯಕ್ಕಾಗಿ ಯುದ್ಧ ನಡೆದಿಬಹುದು ಎನ್ನಲಾಗಿದೆ. ಫಿರಂಗಿ ಮತ್ತು ಹಡಗಿನ ಗಾತ್ರವನ್ನು ಗಮನಿಸಿದಾಗ ಇದು ಯುದ್ಧನೌಕೆಯಾಗಿರಬಹುದು ಎಂಬಂತೆ ಕಾಣುತ್ತಿದೆ. ಬಹುಶಃ ಕಬ್ಬಿಣ ಅಥವಾ ಕಬ್ಬಿಣ ಮತ್ತು ಮರದ ಸಂಯೋಜನೆಯಿಂದ ನಿರ್ಮಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಮುಳುಗುಗಾರರೊಬ್ಬರು ನಾವು ಕಲ್ಪೇನಿಯ ಪಶ್ಚಿಮ ಭಾಗದಲ್ಲಿ ಅವಶೇಷಗಳನ್ನು ಗುರುತಿಸಿದಾಗ, ಅದು ಯುದ್ಧನೌಕೆ ಎಂದು ತಿಳಿದಿರಲಿಲ್ಲ. ಫಿರಂಗಿ ಮತ್ತು ಆಂಕರ್ ಅನ್ನು ನೋಡಿದಾಗ ಇದು ಒಂದು ಪ್ರಮುಖ ಶೋಧನೆ ಎಂದು ನಾವು ಅರಿತುಕೊಂಡೆವು ಎಂದು ಹೇಳಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಜ್ಞಾನಿ ಮತ್ತು ಡೈವರ್ಸ್ ಗುಂಪಿಗೆ ಮಾರ್ಗದರ್ಶಕರಾಗಿರುವ ಇದ್ರೀಸ್ ಬಾಬು ಮಾತನಾಡಿ ಇಂತಹ ಹಡಗು ದುರಂತವು ಈ ಪ್ರದೇಶದಲ್ಲಿ ಈ ಹಿಂದೆ ದಾಖಲಾಗಿರಲಿಲ್ಲ ಎಂದು ಹೇಳಿದರು. ನೌಕೆಯ ಉದ್ದವು 50m-60m ಆಗಿರಬಹುದು ಎಂದು ಅಂದಾಜಿಲಾಗಿದೆ
ಈಸ್ಟ್ ಇಂಡಿಯಾ ಕಂಪನಿಯು 17 ನೇ ಶತಮಾನ ಅಥವಾ 18 ನೇ ಶತಮಾನದಲ್ಲಿ ಈ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿತ್ತು. ಅದಕ್ಕಾಗಿ ಕಬ್ಬಿಣದ ಹಡಗುಗಳನ್ನು ಬಳಸಲಾರಂಭಿಸಿತು. ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪುರಾತತ್ತ್ವ ಶಾಸ್ತ್ರದ ಅಧ್ಯಯನಗಳು ಬೇಕಾಗುತ್ತವೆ; ಅಲ್ಲಿಯವರೆಗೆ ನಾವು ಇದನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Maldivian Minister: ಪ್ರಧಾನಿ ಮೋದಿ ವಿರುದ್ಧ ಟೀಕೆ; ಅಮಾನತುಗೊಂಡಿದ್ದ ಮಾಲ್ಡೀವ್ಸ್ ಸಚಿವರಿಬ್ಬರು ರಾಜೀನಾಮೆ