ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಆಟೋ ರಿಕ್ಷಾ ಕ್ಕಾಗಿ ಡಿವೈಡರ್ ಮೇಲೆ ಕಾದು ಕುಳಿತ ಮಹಿಳೆಯರ ಮೇಲೆ ಟ್ರಕ್ ಹರಿದಿದೆ.
ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳದಲ್ಲೇ ಟ್ರಕ್ ಅನ್ನು ಬಿಟ್ಟು ಚಾಲಕ ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶ ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿದ ಘಟನೆ ಮಾಸುವ ಮೊದಲೇ ಅಂಥದ್ದೇ ಮತ್ತೊಂದು ಘಟನೆ ಗುರುವಾರ ಹರಿಯಾಣ-ದೆಹಲಿ ಗಡಿಯಲ್ಲಿ ವರದಿಯಾಗಿದೆ.
ಟ್ರಕ್ ಅಪಘಾತ ಸಂಭವಿಸಿದ ಸ್ಥಳದಲ್ಲೇ ಇಬ್ಬರು ಮಹಿಳೆರು ಪ್ರಾಣ ಬಿಟ್ಟಿದ್ದರೆ, ಗಂಭೀರ ವಾಗಿ ಗಾಯಗೊಂಡ ಒಬ್ಬ ಮಹಿಳೆ ಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವರದಿಗಳ ಪ್ರಕಾರ, ಅಪಘಾತದಲ್ಲಿ ಮೃತಪಟ್ಟಿರುವ ಮಹಿಳೆಯರು ಪಂಜಾಬ್‌ನ ಮಾನ್ಸಾ ಜಿಲ್ಲೆಗೆ ಸೇರಿದವರು ಎಂದು ತಿಳಿದು ಬಂದಿದೆ. ಕಳೆದ ಅ.3ರಂದು ಉತ್ತರ ಪ್ರದೇಶದ ಲಖೀಂ ಪುರ್ ಖೇರಿಯಲ್ಲಿ ಪ್ರತಿಭಟನಾಕಾರ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ಪಡೆ ವಾಹನ ಹರಿದು ಹೋಗಿತ್ತು.
ಈ ಘಟನೆಯಲ್ಲಿ ನಾಲ್ವರು ರೈತರು ಒಬ್ಬ ಪತ್ರಕರ್ತ ಸೇರಿದಂತೆ ಒಟ್ಟು ಎಂಟು ಮಂದಿ ಪ್ರಾಣ ಬಿಟ್ಟಿದ್ದರು. ಇನ್ನು ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾರನ್ನು ಬಂಧಿಸಲಾಗಿದೆ.