Friday, 22nd November 2024

ವನಿತೆಯರ ಕ್ರಿಕೆಟ್‌: ಭಾರತಕ್ಕೆ ಸರಣಿ ಸೋಲು

ಲಖನೌ: ಅಗ್ರ ಕ್ರಮಾಂಕದ ನಾಲ್ವರ ಅರ್ಧಶತಕಗಳ ಬಲದಿಂದ ದಕ್ಷಿಣ ಆಫ್ರಿಕಾ ಮಹಿಳೆಯರ ತಂಡ ನಾಲ್ಕನೇ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಆದರೆ, ಭಾರತದ ಪರ ಆರಂಭಿಕ ಆಟಗಾರ್ತಿ ಪೂನಂ ರಾವತ್ (ಔಟಾಗದೆ 104) ಅವರ ಶತಕ ಮತ್ತು ಮಧ್ಯಮ ಕ್ರಮಾಂಕದ ಹರ್ಮನ್‌ಪ್ರೀತ್ ಕೌರ್ (54) ಅವರ ಸ್ಫೋಟಕ ಬ್ಯಾಟಿಂಗ್ ಪ್ರಯೋಜನ ಬೀಳಲಿಲ್ಲ.

ಭಾನುವಾರ ನಡೆದ ಹಣಾಹಣಿಯಲ್ಲಿ ಭಾರತ ನೀಡಿದ 267 ರನ್‌ಗಳ ಗೆಲುವಿನ ಗುರಿಯನ್ನು ಪ್ರವಾಸಿ ತಂಡ 48.4 ಓವರ್‌ಗಳಲ್ಲಿ ತಲುಪಿತು. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 3-1ರ ಮುನ್ನಡೆ ಸಾಧಿಸಿತು.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ಹಂಗಾಮಿ ನಾಯಕಿ ಲೌರಾ ಆತಿಥೇಯರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ತಂಡದ ಮೊತ್ತ 17 ರನ್ ಆಗುವಷ್ಟರಲ್ಲಿ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಮರಳಿದರು. ಈ ಸಂದರ್ಭದಲ್ಲಿ ಪ್ರಿಯಾ ಪೂನಿಯಾ ಜೊತೆಗೂಡಿದ ಪೂನಂ ರಾವತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮಿಥಾಲಿ ರಾಜ್ (45) ಮತ್ತು ಹರ್ಮನ್‌ಪ್ರೀತ್ ಕೌರ್ ಉತ್ತಮ ಕಾಣಿಕೆ ನೀಡಿದರು.

ಪೂನಂ ಅವರು ಮಿಥಾಲಿ ರಾಜ್ ಜೊತೆ ಮೂರನೇ ವಿಕೆಟ್‌ಗೆ 103 ರನ್ ಸೇರಿಸಿದರು. ಎರಡು ಪಂದ್ಯಗಳಲ್ಲಿ ಗುರಿ ಬೆನ್ನತ್ತಿ ಗೆದ್ದಿದ್ದ ದಕ್ಷಿಣ ಆಫ್ರಿಕಾದ ಮುಂದೆ ಸವಾಲಿನ ಮೊತ್ತ ಕಲೆ ಹಾಕಲು ಈ ಜೊತೆಯಾಟ ನೆರವಾಯಿತು. ಮಿಥಾಲಿ ಬಳಿಕ ಹರ್ಮನ್‌ಪ್ರೀತ್ ಕೌರ್ ಸ್ಫೋಟಕ ಶೈಲಿಯ ಬ್ಯಾಟಿಂಗ್ ಮಾಡಿ ಎದುರಾಳಿ ತಂಡದ ಬೌಲರ್‌ಗಳನ್ನು ಕಂಗೆಡಿಸಿದರು. 33 ಎಸೆತಗಳಲ್ಲಿ 50 ರನ್ ಗಳಿಸಿ ಶೇಖುಖುನೆ ಹಾಕಿದ ನಿಧಾನಗತಿಯ ಎಸೆತಕ್ಕೆ ಬಲಿಯಾದರು.

ಪೂನಂ ಭರ್ಜರಿ ಶಬ್ನಿಮ್ ಇಸ್ಮಾಯಿಲ್ ಎಸೆತವನ್ನು ಥರ್ಡ್‌ ಮ್ಯಾನ್ ಬೌಂಡರಿಗೆ ಅಟ್ಟುವ ಮೂಲಕ 90 ರನ್ ದಾಟಿದ ಅವರು ಇನಿಂಗ್ಸ್ ಮುಕ್ತಾಯಕ್ಕೆ ಕೆಲವೇ ಓವರ್‌ಗಳು ಬಾಕಿ ಇದ್ದಾಗ ಶತಕ ಪೂರೈಸಿದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿರುವ ಅನುಭವಿ ಆಟಗಾರ್ತಿ, ನಾಯಕಿ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನಲ್ಲಿ ಏಳು ಸಾವಿರ ರನ್ ಗಳಿಸಿದರು. ಈ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಖ್ಯಾತಿ ಅವರ ಮುಡಿಯೇರಿತು.

ಭಾನುವಾರ ಅವರು ಆಡಿದ್ದು ವೈಯಕ್ತಿಕ 213ನೇ ಪಂದ್ಯವಾಗಿತ್ತು. ಆರು ಸಾವಿರ ರನ್ ಪೂರೈಸಿದ ಮೊದಲ ಆಟಗಾರ್ತಿ ಎಂಬ ಖ್ಯಾತಿಯನ್ನು ಮಿಥಾಲಿ ಈ ಹಿಂದೆ ತಮ್ಮದಾಗಿಸಿಕೊಂಡಿದ್ದರು. ಹೆಚ್ಚು ರನ್‌ ಗಳಿಸಿದವರ ಪಟ್ಟಿಯ ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ನ ನಿವೃತ್ತ ಆಟಗಾರ್ತಿ ಚಾರ್ಲೊಟೆ ಎಡ್ವರ್ಡ್ಸ್‌ ಖಾತೆಯಲ್ಲಿ 5,992 ರನ್‌ಗಳಿವೆ.