Thursday, 12th December 2024

Work Pressure: ಕೆಲಸದ ಒತ್ತಡದಿಂದ ಯುವತಿ ಆತ್ಮಹತ್ಯೆ; ತನಿಖೆಗೆ ಮುಂದಾದ ಕೇಂದ್ರ

Work pressure

ನವದೆಹಲಿ: ಪುಣೆಯ ಬಹುರಾಷ್ಟ್ರೀಯ ಕನ್ಸಲ್ಟಿಂಗ್‌ ಕಂಪನಿ ಅರ್ನ್ಸ್ಟ್ & ಯಂಗ್ (Ernst & Young-EY)ನ ಉದ್ಯೋಗಿ ಅತಿಯಾದ ಕೆಲಸದ ಒತ್ತಡ(Work Pressure)ದಿಂದ ಆತ್ಮಹತ್ಯೆ(Self Harming)ಗೆ ಶರಣಾದ ಘಟನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಕೆಲಸ ಒತ್ತಡಕ್ಕೆ ಬಲಿಯಾದ ಅನ್ನಾ ಸೆಬಾಸ್ಟಿಯನ್‌ ಪೆರಾಯಿಲ್‌ ಸಾವಿನ ಕುರಿತು ಕೂಲಂಕುಷ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಶೋಭಾ, ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ದುರಂತ ಸಾವಿನಿಂದ ತೀವ್ರ ದುಃಖವಾಗಿದೆ. ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಆರೋಪಗಳ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ಸಂತ್ರಸ್ತೆಗೆ ನ್ಯಾಯ ಸಿಗುವಂತೆ ನೋಡಿಕೊ‍ಳ್ಳುವುದು ಕೇಂದ್ರ ಸರ್ಕಾರ ಜವಾಬ್ದಾರಿಯಾಗಿದೆ. ಕಾರ್ಮಿಕ ಸಚಿವಾಲಯವು ದೂರನ್ನು ಅಧಿಕೃತವಾಗಿ ಸ್ವೀಕರಿಸಲಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಕೋರಿ ಬಿಜೆಪಿ ನಾಯಕ ರಾಜೀವ್‌ ಚಂದ್ರಶೇಖರ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಕುರಿತು ಅವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದರು. ಇದಕ್ಕೆ ರಿಯಾಕ್ಟ್‌ ಮಾಡಿ ಶೋಭಾ ಪೋಸ್ಟ್‌ ಮಾಡಿದ್ದಾರೆ.

ತಮ್ಮ ಮಗಳು ಅತಿಯಾದ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಯುವತಿಯ ತಾಯಿ ಅನಿತಾ ಆಗಸ್ಟಿನ್‌ ಆರೋಪಿಸಿದ್ದರು. ʼʼತಮ್ಮ ಮಗಳು ಇ.ವೈ. ಕಂಪನಿಗೆ ಚಾರ್ಟಡ್‌ ಅಕೌಂಟೆಂಟ್‌ ಆಗಿ 4 ತಿಂಗಳ ಹಿಂದೆ ಸೇರಿದ್ದಳು. ಕೆಲಸದ ಒತ್ತಡದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡದ್ದಾಳೆʼʼ ಎಂದು ಅನಿತಾ ಅಗಸ್ಟಿನ್ ಇ.ವೈ. ಇಂಡಿಯಾ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದು ತಮ್ಮ ಮಗಳ ಮೊದಲ ಕೆಲಸವಾಗಿತ್ತು ಮತ್ತು ಅರ್ನ್ಸ್ಟ್ & ಯಂಗ್ ಕಂಪನಿಗೆ ಸೇರುವ ಬಗ್ಗೆ ಆಕೆ ತುಂಬ ಉತ್ಸುಕಳಾಗಿದ್ದಳು. ಆದರೆ ಉದ್ಯೋಗಕ್ಕೆ ಸೇರಿದ ಕೇವಲ ನಾಲ್ಕು ತಿಂಗಳಲ್ಲಿ ಅತಿಯಾದ ಕೆಲಸದ ಹೊರೆಯಿಂದ ಬಲಿಯಾಗಿದ್ದಾಳೆ. ಅನ್ನಾ ತಡರಾತ್ರಿ ಮತ್ತು ವಾರಾಂತ್ಯದಲ್ಲಿಯೂ ಕೆಲಸ ಮಾಡುತ್ತಿದ್ದಳು ಅನಿತಾ ಆಗಸ್ಟಿನ್‌ ವಿವರಿಸಿದ್ದಾರೆ. ಅನ್ನಾ ಅಂತ್ಯ ಸಂಸ್ಕಾರದಲ್ಲಿ ಕಂಪನಿಯ ಯಾರೂ ಪಾಲ್ಗೊಂಡಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.

ʼʼಅನ್ನಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಶಾಲೆ ಮತ್ತು ಕಾಲೇಜಿನಲ್ಲಿ ಟಾಪರ್‌ ಆಗಿದ್ದಳು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮುಂದಿದ್ದಳು. ಸಿಎ ಕೋರ್ಸ್‌ ಅನ್ನು ಡಿಸ್ಟಿಂಕ್ಷನ್‌ನಲ್ಲಿ ಪಾಸ್‌ ಮಾಡಿದ್ದಳು. ಕೆಲಸದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಳು. ಅದಾಗ್ಯೂ ಕೆಲಸದ ಒತ್ತಡ, ಹೊಸ ವಾತಾವರಣದಿಂದ ಆಕೆಗೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಇದು ಆಕೆಯ ಮೇಲೆ ಪರಿಣಾಮ ಬೀರಿತುʼʼ ಎಂದು ಅನಿತಾ ಪತ್ರದಲ್ಲಿ ವಿವರಿಸಿದ್ದಾರೆ.

ಅನ್ನಾ 2024ರ ಮಾರ್ಚ್‌ 19ರಂದು ಪುಣೆಯ ಇ.ವೈ. ಕಂಪನಿಗೆ ಸೇರಿದ್ದರು. ಇದಾಗಿ 4 ತಿಂಗಳ ನಂತರ ಅಂದರೆ ಜುಲೈ 20 ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲಸದ ಹೊರೆಯಿಂದಾಗಿ ಹಲವು ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ʼʼಅನ್ನಾಗೆ ಮ್ಯಾನೇಜರ್‌ ಅವಧಿ ಮುಗಿದ ಬಳಿಕವೂ ಕೆಲಸ ವಹಿಸುತ್ತಿದ್ದರು. ಓವರ್‌ ಟೈಮ್‌ ಕೆಲಸ ನಿರ್ವಹಿಸುವಂತೆ ಒತ್ತಡ ಹಾಕುತ್ತಿದ್ದರುʼʼ ಎಂದು ಅನಿತಾ ಆರೋಪಿಸಿದ್ದಾರೆ. ʼʼಕೆಲವೊಮ್ಮೆ ರಾತ್ರಿ ಇಡೀ ಕೆಲಸ ನಿರ್ವಹಿಸಬೇಕಿತ್ತು. ಅಲ್ಲದೆ ಭಾನುವಾರವೂ ಕೆಲಸದ ಹೊರೆ ಹೊರಿಸುತ್ತಿದ್ದರು. ಪದೇ ಪದೆ ಮೀಟಿಂಗ್‌ ಆಯೋಜಿಸಿ ಬೇರೆ ಬೇರೆ ಜವಾಬ್ದಾರಿ ವಹಿಸಲಾಗುತ್ತಿತ್ತುʼʼ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Self Harming: ಅತಿಯಾದ ಕೆಲಸದ ಒತ್ತಡ ತಾಳಲಾರದೆ 26 ವರ್ಷದ ಯುವತಿ ಆತ್ಮಹತ್ಯೆ