Monday, 25th November 2024

World Food Day 2024: ಇಂದು ವಿಶ್ವ ಆಹಾರ ದಿನ; ಜಾಗತಿಕ ಹಸಿವು ನಿವಾರಿಸಲು ನಾವೇನು ಮಾಡಬಹುದು?

World Food Day 2024

ಹವಾಮಾನ ಬದಲಾವಣೆ, ಆರ್ಥಿಕ ಕುಸಿತ, ಸಂಘರ್ಷ, ವಿವಿಧ ಸಾಂಕ್ರಾಮಿಕದ ಪರಿಣಾಮದಿಂದಾಗಿ ವಿಶ್ವಾದ್ಯಂತ ಇಂದಿಗೂ ಕೋಟ್ಯಂತರ ಜನರು ಹಸಿವಿನಿಂದ (Hunger) ಬಳಲುತ್ತಿದ್ದಾರೆ. ಈ ನಡುವೆ ನಾವು ಪೋಲು ಮಾಡುತ್ತಿರುವ ಆಹಾರದ (Food waste) ಪ್ರಮಾಣವೂ ಅತ್ಯಧಿಕವಾಗುತ್ತಿದೆ. ವಿಶ್ವ ಆಹಾರ ದಿನಾಚರಣೆಯ (World Food Day 2024) ಈ ಸಂದರ್ಭದಲ್ಲಿ ಆಹಾರದ ಕುರಿತು ಜಾಗೃತಿ ನಮ್ಮೆಲ್ಲರಲ್ಲೂ ಮೂಡಬೇಕಿದೆ. ಅಕ್ಟೋಬರ್ 16 ಅನ್ನು ವಿಶ್ವಾದ್ಯಂತ ಆಹಾರ ದಿನವಾಗಿ ಆಚರಿಸಲಾಗುತ್ತಿದೆ. ಹಸಿವಿನ ಜಾಗತಿಕ ಸಮಸ್ಯೆ ಮತ್ತು ಇದಕ್ಕಾಗಿ ಕ್ರಮದ ತುರ್ತು ಅಗತ್ಯವನ್ನು ಇದು ಸಾರುತ್ತದೆ.

ಆಹಾರ ಅಭದ್ರತೆ

2024ರ ಆಹಾರ ತ್ಯಾಜ್ಯ ಸೂಚ್ಯಂಕ ವರದಿ ಪ್ರಕಾರ ಪ್ರಪಂಚದಾದ್ಯಂತ ಸುಮಾರು 78.3 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಈ ನಡುವೆಯೇ ದಿನಕ್ಕೆ ಒಂದು ಶತಕೋಟಿ ಮಂದಿ ಸೇವಿಸಬಹುದಾದಷ್ಟು ಊಟ ವ್ಯರ್ಥವಾಗುತ್ತಿದೆ. ಅಂದರೆ ಪ್ರಪಂಚದಾದ್ಯಂತ ಮೂರನೇ ಒಂದು ಭಾಗದಷ್ಟು ಜನರು ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ.

ಪ್ರಪಂಚದಾದ್ಯಂತ ರೈತರು ಸಾಕಷ್ಟು ಆಹಾರವನ್ನು ಉತ್ಪಾದಿಸುತ್ತಿದ್ದರೂ ಬಡತನ, ಅಸಮಾನತೆ, ಸಂಘರ್ಷ ಮತ್ತು ಹವಾಮಾನ ಬದಲಾವಣೆಯಂತಹ ವಿವಿಧ ಅಂಶಗಳಿಂದ ಆಹಾರದ ಕೊರತೆ ಮುಂದುವರಿದಿದೆ. ಇದರಿಂದ ಹೆಚ್ಚಿನ ಜನರು ಹಸಿವಿನಿಂದ ಬಳಲುವಂತಾಗಿದೆ. ಇದು ಅತ್ಯಂತ ದುರ್ಬಲ ಜನರ ಜೀವನದ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತಿದೆ.

ಜಾಗತಿಕ ಹಸಿವು ಕೇವಲ ಅಂಕಿಅಂಶವಲ್ಲ. ಇದು ಲಕ್ಷಾಂತರ ಜನರ ದೈನಂದಿನ ಹೋರಾಟ. ವಿಶ್ವಸಂಸ್ಥೆಯ ಲೆಕ್ಕಾಚಾರದ ಪ್ರಕಾರ 2.8 ಶತಕೋಟಿ ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಇಂದು ಸಾಧ್ಯವಾಗುತ್ತಿಲ್ಲ. ಇದರಿಂದ ಅಪೌಷ್ಟಿಕತೆ, ಪೋಷಕಾಂಶಗಳ ಕೊರತೆ ಮತ್ತು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

World Food Day 2024

ವಿಶ್ವ ಆಹಾರ ದಿನದ ಥೀಮ್

ಉತ್ತಮ ಜೀವನ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು ಎನ್ನುವ ಥೀಮ್ ನೊಂದಿಗೆ ಈ ಬಾರಿ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತಿದೆ. ಆಹಾರದ ಹಕ್ಕು ಪ್ರತಿಯೊಬ್ಬರ ಹಕ್ಕು ಆಗಿದೆ. ಮಾನವನ ಅಭಿವೃದ್ಧಿ, ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪೌಷ್ಟಿಕ ಆಹಾರ ಅತ್ಯಗತ್ಯ ಎಂಬುದನ್ನು ಇದು ಸಾರುತ್ತದೆ.

ಆಹಾರ ಕೊರತೆಯ ಪರಿಣಾಮ ಏನು?

ಹಸಿವು ಮತ್ತು ಅಪೌಷ್ಟಿಕತೆಯ ಪರಿಣಾಮ ಕೇವಲ ವ್ಯಕ್ತಿಗಳನ್ನು ಮಾತ್ರ ಕಾಡುವುದಿಲ್ಲ. ಸಮುದಾಯ ಮತ್ತು ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತದೆ. ಅಪೌಷ್ಟಿಕತೆ, ಪೌಷ್ಟಿಕ ಆಹಾರದ ಕೊರತೆಯು ತೀವ್ರ ಆರೋಗ್ಯ ಪರಿಣಾಮಗಳನ್ನು ಉಂಟು ಮಾಡುತ್ತದೆ. ಹಸಿವು ಬಡತನವು ಸಾಮಾಜಿಕ ಅಸ್ಥಿರತೆ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತದೆ.

ಆಹಾರ ಕೊರತೆ ನೀಗಿಸುವುದು ಹೇಗೆ?

ಜಾಗತಿಕ ಹಸಿವನ್ನು ಎದುರಿಸಲು ಬಡತನ, ಅಸಮಾನತೆ, ಸಂಘರ್ಷ ಮತ್ತು ಹವಾಮಾನ ಬದಲಾವಣೆಯನ್ನು ಒಳಗೊಂಡಿರುವ ಅದರ ಮೂಲ ಕಾರಣಗಳನ್ನು ನಾವು ಪರಿಹರಿಸಬೇಕು. ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು, ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ಆಹಾರ ಸಂಪನ್ಮೂಲ ಎಲ್ಲರಿಗೂ ಸಮಾನವಾಗಿ ಸಿಗುವಂತೆ ಮಾಡುವುದರಿಂದ ಆಹಾರದ ಕೊರತೆಯನ್ನು ನೀಗಿಸಬಹುದಾಗಿದೆ.

World Food Day 2024

ಆಹಾರ ಕೊರತೆ ನೀಗಿಸಲು ನಾವೇನು ಮಾಡಬಹುದು?

ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಸಿಗುವಂತಾಗಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಈ ಕೆಳಗಿನ ಮಾರ್ಗವನ್ನು ತೋರಿಸಿದೆ. ಇದನ್ನು ಪ್ರತಿಯೊಬ್ಬರೂ ಪಾಲನೆ ಮಾಡುವುದರಿಂದ ಪ್ರತಿಯೊಬ್ಬರಿಗೂ ಆಹಾರ ಸಿಗುವಂತೆ ಮಾಡಬಹುದು.

ಆಹಾರ ಭದ್ರತೆಯ ಕುರಿತು ಜಾಗೃತಿ ಮೂಡಿಸಿ

ಸಮುದಾಯದಲ್ಲಿ ಪ್ರತಿಯೊಬ್ಬರೂ ಆಹಾರ ಭದ್ರತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ. ಆಹಾರದ ಹಕ್ಕನ್ನು ಸಂರಕ್ಷಿಸಿ.

ಸ್ಥಳೀಯ ಆಹಾರಕ್ಕೆ ಆದ್ಯತೆ

ಸ್ಥಳೀಯವಾಗಿ ಸಿಗುವ ಮತ್ತು ನಿರ್ದಿಷ್ಟ ಸಮಯದಲ್ಲಿ ಸಿಗುವ ಆಹಾರವನ್ನು ಆಯ್ದುಕೊಳ್ಳಿ. ಇದು ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸುತ್ತದೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳಿಗೆ ಕೊಡುಗೆ ನೀಡುತ್ತದೆ. ಆಹಾರದಲ್ಲಿ ವಿವಿಧ ತಾಜಾ ತರಕಾರಿ, ಹಣ್ಣು, ದ್ವಿದಳ ಧಾನ್ಯ, ಬೀಜ ಮತ್ತು ಧಾನ್ಯಗಳನ್ನು ಸೇರಿಸಿ. ಅದು ಆರೋಗ್ಯವನ್ನು ಸುಧಾರಿಸುತ್ತದೆ.

ಆರೋಗ್ಯಕರ ಅಭ್ಯಾಸ

ಸ್ನೇಹಿತರು ಮತ್ತು ಕುಟುಂಬದ ನಡುವೆ ಆರೋಗ್ಯಕರ ಆಹಾರವನ್ನು ಪ್ರೋತ್ಸಾಹಿಸಿ. ಪೌಷ್ಟಿಕಾಂಶದ ಆಯ್ಕೆಗಳನ್ನು ಉತ್ತೇಜಿಸುವ ಮೂಲಕ ಸಮುದಾಯದ ಆರೋಗ್ಯವನ್ನು ಕಾಪಾಡಿ.

ಆಹಾರದಲ್ಲಿ ವೈವಿಧ್ಯ

ಊಟದಲ್ಲಿ ಸಾಂಪ್ರದಾಯಿಕ ಮತ್ತು ಸ್ಥಳೀಯವಾಗಿ ಬೆಳೆದ ಆಹಾರಗಳನ್ನು ಸೇರಿಸಿ. ಇದು ವೈವಿಧ್ಯತೆಯನ್ನು ಹೆಚ್ಚಿಸುವುದಲ್ಲದೆ ಸ್ಥಳೀಯ ರೈತರನ್ನು ಬೆಂಬಲಿಸುತ್ತದೆ ಮತ್ತು ಸಾಂಪ್ರದಾಯಿಕ ಪಾಕಶಾಲೆಯ ಅಭ್ಯಾಸಗಳನ್ನು ಜೀವಂತವಾಗಿರಿಸುತ್ತದೆ.

ಆಹಾರ ಸುರಕ್ಷತೆ

ಆಹಾರ ಸುರಕ್ಷತೆಯ ಬಗ್ಗೆ ಜಾಗರೂಕರಾಗಿರಿ. ಸರಿಯಾದ ಶೇಖರಣೆ ಮತ್ತು ನಿರ್ವಹಣೆಯಿಂದ ಆಹಾರದಿಂದ ಹರಡುವ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಆಹಾರದ ಲೇಬಲ್‌ಗಳ ಬಗ್ಗೆ ತಿಳಿಯಿರಿ

ಆಹಾರದ ಆಯ್ಕೆಗಳನ್ನು ಮಾಡಲು ಆಹಾರ ಲೇಬಲ್‌ಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಪೌಷ್ಟಿಕಾಂಶದ ಮಾಹಿತಿಗಾಗಿ ಲೇಬಲ್‌ಗಳನ್ನು ಓದಿ.

ಆಹಾರ ತ್ಯಾಜ್ಯ ಕಡಿಮೆ ಮಾಡಿ

ನಿತ್ಯ ಬಳಕೆಯಲ್ಲಿ ಆಹಾರವನ್ನು ಪೋಲು ಮಾಡದಿರಿ. ಇದನ್ನು ನಿಮ್ಮ ಮನೆಯಿಂದಲೇ ಪಾಲಿಸಿ.

ಆಹಾರದ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಿ

ದೇಶದ ಆಹಾರದ ಮಾರ್ಗಸೂಚಿಗಳ ಬಗ್ಗೆ ತಿಳಿದುಕೊಳ್ಳಿ. ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ.

ಸ್ಥಳೀಯ ರೈತರನ್ನು ಬೆಂಬಲಿಸಿ

ಆಹಾರವನ್ನು ಬೆಳೆಯುವವರ ಹಕ್ಕುಗಳಿಗಾಗಿ ಪ್ರತಿಪಾದಿಸಿ. ರೈತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಿ. ಇದು ಸಮಾನ ಆಹಾರ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

Breast Cancer: ಸ್ತನ ಕ್ಯಾನ್ಸರ್‌ ಲಕ್ಷಣಗಳೇನು? ಇದರಿಂದ ಪಾರಾಗುವುದು ಹೇಗೆ?

ಮಾನವೀಯ ಪ್ರಯತ್ನ ಮಾಡಿ

ದೇಣಿಗೆ ಅಥವಾ ಸ್ವಯಂಸೇವೆ ಮೂಲಕ ಪ್ರತಿಯೊಬ್ಬರಿಗೂ ಆಹಾರ ಸಿಗುವಂತೆ ಮಾಡಲು ಪ್ರಯತ್ನಿಸಿ.

ಹಕ್ಕುಗಳನ್ನು ತಿಳಿದುಕೊಳ್ಳಿ

ಆಹಾರಕ್ಕಾಗಿ ನಿಮ್ಮ ಹಕ್ಕಗಳ ಬಗ್ಗೆ ತಿಳಿಯಿರಿ. ಇನ್ನೊಬ್ಬರ ಹಕ್ಕುಗಳನ್ನು ಗೌರವಿಸಿ. ಇದಕ್ಕಾಗಿ ಮಾನವ ಹಕ್ಕುಗಳ ಆಯೋಗ ಅಥವಾ ವಿಶ್ವಸಂಸ್ಥೆ ಸೇರಿದಂತೆ ಸೂಕ್ತ ಮಾರ್ಗಗಳ ಸಹಾಯ ಪಡೆಯಿರಿ.