ಯಾರಿಗಾದರೂ ಏನಾದರೂ ಸಂದೇಶ (Message) ರವಾನಿಸಬೇಕಿದ್ದರೆ ಈಗ ವಾಟ್ಸ್‌ಆಪ್, ಇ-ಮೇಲ್‌ಗಳು (E-mail) ಕ್ಷಣ ಮಾತ್ರದಲ್ಲಿ ಈ ಕಾರ್ಯವನ್ನು ನಿರ್ವಹಿಸುತ್ತವೆ. ಆದರೆ ಒಂದು ಕಾಲದಲ್ಲಿ ಮನೆ ಬಾಗಿಲಿಗೆ ಸಂದೇಶ (World Post Day 2024) ಹೊತ್ತು ತರುವ ಬರುವ ಅಂಚೆಯಣ್ಣನಿಗೆ (Postman) ಕಾಯಬೇಕಿತ್ತು. ಸಂದೇಶ ಪತ್ರಗಳು ಒಂದು ಊರಿನಿಂದ ಇನ್ನೊಂದು ಊರು ತಲುಪಲು ವಾರ, ತಿಂಗಳುಗಳೇ ಕಳೆಯುತ್ತಿತ್ತು.
ಆಧುನಿಕ ತಂತ್ರಜ್ಞಾನಗಳು ಮುಂದುವರಿದರೂ ಅಂಚೆ ವ್ಯವಸ್ಥೆ ಇಂದಿಗೂ ಕಾರ್ಯವನ್ನು ನಿರ್ವಹಿಸುತ್ತಿದೆ. ಸುಮಾರು ಒಂದೂವರೆ ಶತಮಾನದಿಂದ ವಿಶ್ವಾದ್ಯಂತ ಜನರ, ಸರ್ಕಾರಗಳ ಮತ್ತು ವ್ಯವಹಾರಗಳಿಗೆ ಜೀವಸೆಲೆಯಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಅಂಚೆ ಕ್ಷೇತ್ರದ ಪಾತ್ರ, ಜಾಗತಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅದರ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ಅಕ್ಟೋಬರ್ 9ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ.
1874ರಲ್ಲಿ ಸ್ವಿಟ್ಜರ್ಲೆಂಡ್‌ನ ಬರ್ನ್‌ನಲ್ಲಿ ಸ್ಥಾಪಿಸಲಾದ ಯುನಿವರ್ಸಲ್ ಪೋಸ್ಟಲ್ ಯೂನಿಯನ್ ನ (UPU) ವಾರ್ಷಿಕೋತ್ಸವವನ್ನು ವಿಶ್ವ ಅಂಚೆ ದಿನವಾಗಿ ಆಚರಿಸಲಾಗುತ್ತದೆ. ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಆಧುನಿಕ ಜಾಗತಿಕ ಸಂವಹನಕ್ಕೆ ಅಡಿಪಾಯವನ್ನು ಹಾಕಿತ್ತು.
ಈ ವರ್ಷದ ಥೀಮ್ ಏನು?
ಯುನಿವರ್ಸಲ್ ಪೋಸ್ಟಲ್ ಯೂನಿಯನ್ 150 ವರ್ಷಗಳ ಸಂಭ್ರಮದಲ್ಲಿದೆ. ಹೀಗಾಗಿ ಈ ಬಾರಿ ವಿಶ್ವ ಅಂಚೆ ದಿನವನ್ನು “150 ವರ್ಷಗಳ ಸಂವಹನವನ್ನು ಸಕ್ರಿಯಗೊಳಿಸಲು ಮತ್ತು ರಾಷ್ಟ್ರಗಳಾದ್ಯಂತ ಜನರನ್ನು ಸಬಲೀಕರಣಗೊಳಿಸಲು” ಎನ್ನುವ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ.
ಈ ದಿನದ ಇತಿಹಾಸ
ಸ್ವಿಟ್ಜರ್ಲೆಂಡ್‌ನ ಬರ್ನ್‌ನಲ್ಲಿ ಅಂತಾರಾಷ್ಟ್ರೀಯ ಅಂಚೆ ಸೇವೆಗಳನ್ನು ನಡೆಸಲು, ಏಕೀಕೃತ ಅಂಚೆ ವ್ಯವಸ್ಥೆಯನ್ನು ರಚಿಸಲು 1874ರಲ್ಲಿ ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಜಾಗತಿಕ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಇದು ದೇಶಗಳ ನಡುವೆ ಅಂಚೆ ವಿನಿಮಯವನ್ನು ಸುಲಭಗೊಳಿಸಿತ್ತು. ಅಂಚೆ ಸೇವೆಗಳ ಪ್ರಾಮುಖ್ಯತೆ ಮತ್ತು ಜಾಗತಿಕವಾಗಿ ಜನರನ್ನು ಸಂಪರ್ಕಿಸುವಲ್ಲಿ ಅದರ ಪಾತ್ರವನ್ನು ಉತ್ತೇಜಿಸಲು 1969ರಲ್ಲಿ ಟೋಕಿಯೊದಲ್ಲಿ ಯುಪಿಯು ವಿಶ್ವ ಅಂಚೆ ದಿನವನ್ನು ಘೋಷಿಸಲಾಯಿತು.
ಈ ದಿನ ಮಹತ್ವ ಏನು?
ವಿಶ್ವ ಅಂಚೆ ದಿನವನ್ನು ಸಂವಹನ, ವ್ಯಾಪಾರ ಮತ್ತು ಅಭಿವೃದ್ಧಿಯಲ್ಲಿ ಅಂಚೆ ಸೇವೆಗಳ ಪ್ರಮುಖ ಪಾತ್ರದ ಮೇಲೆ ಕೇಂದ್ರೀಕರಿಸಲು ಆಚರಿಸಲಾಗುತ್ತದೆ. ಇಂದು ಇ-ಕಾಮರ್ಸ್, ಲಾಜಿಸ್ಟಿಕ್ಸ್ ಮತ್ತು ಆರ್ಥಿಕ ಸೇರ್ಪಡೆಗಾಗಿ ಅಂಚೆ ವ್ಯವಸ್ಥೆಯು ಅವಶ್ಯಕವಾಗಿದೆ. ಅಂಚೆ ನಮ್ಮ ಜನಜೀವನದ ಪ್ರಧಾನ ಭಾಗವಾಗಿದೆ. ಹಾಗಾಗಿ ವಿಶ್ವ ಅಂಚೆ ದಿನ ಆಚರಿಸಲಾಗುತ್ತದೆ.
ಈ ದಿನದ ಆಚರಣೆ ಹೇಗೆ?
ಪ್ರಪಂಚದಾದ್ಯಂತ 150ಕ್ಕೂ ಹೆಚ್ಚು ದೇಶಗಳು ಪ್ರತಿ ವರ್ಷ ವಿಶ್ವ ಅಂಚೆ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತವೆ. ಕೆಲವು ದೇಶಗಳಲ್ಲಿ ಇದನ್ನು ಕೆಲಸದ ರಜಾದಿನವೆಂದು ಗುರುತಿಸಲಾಗಿದೆ. ಆದರೂ ವಿಶೇಷ ಆಚರಣೆಗಳೊಂದಿಗೆ ಅಂಚೆ ಸೇವೆಗಳನ್ನು ನಡೆಸಲಾಗುತ್ತದೆ.ತ್ಥತವಾ ಪ್ರಚಾರ ಮಾಡಲು, ಅತ್ಯುತ್ತಮ ಸೇವೆಗಾಗಿ ತಮ್ಮ ಉದ್ಯೋಗಿಗಳನ್ನು ಗುರುತಿಸಲು ಮತ್ತು ಬಹುಮಾನ ನೀಡಲು ಈ ದಿನವನ್ನು ಬಳಸಿಕೊಳ್ಳುತ್ತವೆ.
ಕೆಲವೆಡೆ ಅಂಚೆಚೀಟಿ ಸಂಗ್ರಹದ ಪ್ರದರ್ಶನಗಳು, ಹೊಸ ಅಂಚೆಚೀಟಿಗಳ ಬಿಡುಗಡೆ, ವಿಶ್ವ ಅಂಚೆ ದಿನದ ಪೋಸ್ಟರ್‌ಗಳ ಪ್ರದರ್ಶನ, ವಿವಿಧ ಕಾರ್ಯಾಗಾರಗಳು, ಸಾಂಸ್ಕೃತಿಕ ಅಥವಾ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿಶೇಷವಾಗಿ ಉತ್ತರ ಪ್ರದೇಶವು ಅಂತಾರಾಷ್ಟ್ರೀಯ ಪತ್ರ ಬರವಣಿಗೆ ಸ್ಪರ್ಧೆಯನ್ನು ಆಯೋಜಿಸಿ, ರಾಷ್ಟ್ರೀಯ ಮಟ್ಟದಲ್ಲಿ ವಿಜೇತರನ್ನು ಆಯ್ಕೆ ಮಾಡಿ ಈ ದಿನ ಗೌರವಿಸುತ್ತದೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿರುವ ಪ್ರಧಾನ ಅಂಚೆ ಕಚೇರಿಯು ಅಂಚೆ ದಿನವನ್ನು ವಿಶೇಷವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತದೆ.