ಶಿಕ್ಷಣ (Education) ಮತ್ತು ಸಂಶೋಧನೆ (Research) ಕ್ಷೇತ್ರಕ್ಕೆ ವಿಜ್ಞಾನಿ (scientist), ಉಪನ್ಯಾಸಕರು (lecturer), ಭಾರತದ ರಾಷ್ಟ್ರಪತಿ (president of India) ಡಾ. ಎಪಿಜೆ ಅಬ್ದುಲ್ ಕಲಾಂ (Dr. APJ Abdul Kalam) ಅವರ ಕೊಡುಗೆಗಳನ್ನು ಗುರುತಿಸಿ ಅವರ ಜನ್ಮ ದಿನವಾದ ಅಕ್ಟೋಬರ್ 15 ಅನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ (World Students Day) ಆಚರಿಸಲಾಗುತ್ತದೆ.
1931ರ ಅಕ್ಟೋಬರ್ 15ರಂದು ರಾಮೇಶ್ವರಂನಲ್ಲಿ ಸಾಮಾನ್ಯ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಅವರು ಭಾರತದ ಕ್ಷಿಪಣಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವೈಜ್ಞಾನಿಕ ಕ್ಷೇತ್ರದಲ್ಲಿ ಅವರ ಸಾಧನೆಗಳು ಅವರಿಗೆ “ಮಿಸೈಲ್ ಮ್ಯಾನ್” ಮತ್ತು “ಪೀಪಲ್ಸ್ ಪ್ರೆಸಿಡೆಂಟ್” ಎಂಬ ಹೆಸರನ್ನು ತಂದುಕೊಟ್ಟಿತು. ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಳಿಗೆ ಗೌರವವಾಗಿ ಭಾರತದ 11ನೇ ರಾಷ್ಟ್ರಪತಿಯಾಗಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.
ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ತಮ್ಮ ಜೀವನದ 40 ವರ್ಷಗಳನ್ನು ಮೀಸಲಿಟ್ಟಿದ್ದ ಕಲಾಂ ಈ ಸಂಸ್ಥೆಯ ಖ್ಯಾತ ವಿಜ್ಞಾನಿ ಮತ್ತು ನಿರ್ವಾಹಕರೂ ಆಗಿದ್ದರು.
ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುತ್ತಿದ್ದ ಕಲಾಂ
ಅಬ್ದುಲ್ ಕಲಾಂ ಅವರು ದೇಶಕ್ಕಾಗಿ ಹಲವು ಶ್ರೇಷ್ಠ ಕೊಡುಗೆಗಳನ್ನು ನೀಡಿದ್ದರೂ ಭಾರತದ ಅಭಿವೃದ್ಧಿಯ ಬಗ್ಗೆ ಅವರ ದೂರದೃಷ್ಟಿಯ ವಿಧಾನ ಮತ್ತು ಮುಂಬರುವ ಪೀಳಿಗೆಯಲ್ಲಿ ಅವರ ನಂಬಿಕೆಗಾಗಿ ಕಲಾಂ ಅವರನ್ನು ಪ್ರತಿ ವರ್ಷ ಸ್ಮರಿಸಲಾಗುತ್ತದೆ. ಯಾಕೆಂದರೆ ಭಾರತದ ಯುವಜನರೇ ಬದಲಾವಣೆ ಮತ್ತು ಅಭಿವೃದ್ಧಿಯನ್ನು ತರುತ್ತಾರೆ ಎನ್ನುವ ನಂಬಿಕೆ ಅವರದಾಗಿತ್ತು.
ದೇಶಾದ್ಯಂತ ಮಕ್ಕಳೊಂದಿಗೆ ಅವರ ಸಂವಹನ, ಮಕ್ಕಳ ಸಾಧನೆಗಳಿಗೆ ಸ್ಫೂರ್ತಿ ತುಂಬುತ್ತಿದ್ದ ಅವರು ನಿರಂತರವಾಗಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ಮೂಲಕ ಅವರನ್ನು ಪ್ರೇರೇಪಿಸುತ್ತಿದ್ದರು. ವಿವಿಧ ವಯೋಮಾನದವರು ಮತ್ತು ಸಂಸ್ಥೆಗಳ ವಿದ್ಯಾರ್ಥಿಗಳನ್ನು ನಿರಂತರ ಭೇಟಿ ಮಾಡುತ್ತಿದ್ದ ಅವರೊಂದಿಗಿನ ಸಂವಹನಗಳು ಹೃದಯಸ್ಪರ್ಶಿಯಾಗಿರುತ್ತಿದ್ದವು.
ಜೀವನದ ಕೊನೆಯ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಿರುವ ಅವರು ಹೆಚ್ಚಿನ ಸಮಯವನ್ನು ವಿದ್ಯಾರ್ಥಿಗಳೊಂದಿಗೆ ಕಳೆದರು. ಶಿಲ್ಲಾಂಗ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.
ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು ತಮ್ಮ ಜ್ಞಾನದಿಂದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂದೋರ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬೆಂಗಳೂರಿನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದರು. ಕಲಾಂ ಅವರು ತಿರುವನಂತಪುರಂನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆಂಡ್ ಟೆಕ್ನಾಲಜಿಯ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
Pooja Bhatt : ಮೆಟ್ರೊದಲ್ಲಿ ಜೈಶ್ರೀರಾಮ್ ಘೋಷಣೆ; ಸಾರ್ವಜನಿಕ ಸ್ಥಳದಲ್ಲಿ ಇದೆಲ್ಲ ನಿಷಿದ್ಧ ಎಂದ ನಟಿ ಪೂಜಾ ಭಟ್!
2015ರ ಜುಲೈ 27ರಂದು ತಮ್ಮ 83ನೇ ವಯಸ್ಸಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಶಿಲ್ಲಾಂಗ್‌ನಲ್ಲಿ ಉಪನ್ಯಾಸ ನೀಡುತ್ತಿದ್ದ ಅವರು ಹೃದಯ ಸ್ತಂಭನದಿಂದ ಕುಸಿದು ಬಿದ್ದವರು ಮತ್ತೆ ಮೇಲೇಳಲೇ ಇಲ್ಲ.