Friday, 22nd November 2024

ಯಾಸ್‌ ಚಂಡಮಾರುತಕ್ಕೆ ಸೆಡ್ಡು ಹೊಡೆಯಲು ಸರ್ವಸಿದ್ದತೆ

ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉಂಟಾಗಿರುವ ಯಾಸ್ ಚಂಡಮಾರುತ ಮೇ26 ರಂದು ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿದ್ದು, ಭಾರತೀಯ ನೌಕಾಪಡೆಯ ನಾಲ್ಕು ನೌಕೆಗಳನ್ನು ಸರ್ವ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದುಹೋಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದ್ದು ಮುಂಜಾಗ್ರತಾ ಕ್ರಮವಾಗಿ ಒಡಿಶಾ ಕರಾವಳಿ ತೀರದಲ್ಲಿ ನಾಲ್ಕು ನೌಕೆಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

ಪ್ರವಾಹ ಪರಿಸ್ಥಿತಿ ನಿಭಾಯಿಸಲು ಎಂಟು ತಂಡಗಳನ್ನು ನಿಯೋಜಿಸಲಾಗಿದ್ದು, ನಾಲು ಮುಳುಗ ತಜ್ಞರ ತಂಡಗಳನ್ನು ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿದೆ.

ಪೂರ್ವ- ಮಧ್ಯ ಬಂಗಾಳಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದ ಮೇಲೆ ಶನಿವಾರ ಕಡಿಮೆ ಒತ್ತಡದ ಪ್ರದೇಶ ರೂಪು ಗೊಂಡಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ಅಧಿಕಾರಿಗಳು, ‘ಈಗ ನಿರ್ಮಾಣವಾಗಿರುವ ಕಡಿಮೆ ಒತ್ತಡದ ಪ್ರದೇಶದಲ್ಲಿ ಮೇ 23ರ ಬೆಳಗಿನ ಹೊತ್ತಿಗೆ ವಾಯುಭಾರ ಕುಸಿತವಾಗಬಹುದು. ಮೇ 24ರಂದು ಚಂಡಮಾರುತದ ಸ್ವರೂಪ ಪಡೆದು, ತೀವ್ರ ಸ್ವರೂಪ ಪಡೆಯಬಹುದು. 26ರ ಬೆಳಿಗ್ಗೆ ಪಶ್ಚಿಮ ಬಂಗಾಳ, ಉತ್ತರ ಒಡಿಶಾ ಮತ್ತು ಬಾಂಗ್ಲಾದೇಶ ಕರಾವಳಿ ಯಲ್ಲಿ ಗಂಟೆಗೆ 90ರಿಂದ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು ಎಂದು ಇಲಾಖೆ ತಿಳಿಸಿದೆ.

ನೌಕಾಪಡೆಯ ವಿಶಾಖಪಟ್ಟಣದಲ್ಲಿರುವ ವಾಯುನೆಲೆ ಐಎನ್‌ಎಸ್‌ ದೆಗಾ ಹಾಗೂ ಚೆನ್ನೈನ ಐಎನ್‌ಎಸ್‌ ರಜಲಿಯಲ್ಲಿ ವಿಮಾನ ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ನೌಕಾಪಡೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.