Monday, 6th January 2025

Zakir Hussain: ತಬಲಾ ಮಾಂತ್ರಿಕ ಜಾಕಿರ್ ಹುಸೇನ್‌ಗೆ ಸ್ವರ ನಮನ- ಸಂಗೀತ ದಿಗ್ಗಜರಿಂದ ಹಾಡಿನ ವಿದಾಯ!

Zakir hussain

ವಾಷಿಂಗ್ಟನ್‌: ಕೆಲವು ದಿನಗಳ ಹಿಂದೆಯಷ್ಟೇ ನಿಧನರಾಗಿರುವ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ (Zakir Hussain) ಅವರ ಅಂತ್ಯಕ್ರಿಯೆಯನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆರ‌ವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಹಲವಾರು ಸಂಗೀತ ದಿಗ್ಗಜರು ಭಾಗಿಯಾಗಿದ್ದು ಹಾಡಿನ ಮೂಲಕವೇ ವಿದಾಯ ಹೇಳಿದ್ದಾರೆ.

72 ವಯಸ್ಸಿನ ಜಾಕಿರ್ ಅವರಿಗೆ ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆ ಎದುರಾಗಿದ್ದು‌ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಹಲವು ದಿನಗಳ ಚಿಕಿತ್ಸೆ ನೀಡಿದರೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಡಿಸೆಂಬರ್ 15 ರಂದು ಇವರು ಇಹಲೋಕ ತ್ಯಜಿಸಿದ್ದರು. ಈ ಬಗ್ಗೆ ಜಾಕಿರ್ ಹುಸೇನ್ ಸಂಬಂಧಿಕರಿಂದ ಅಧಿಕೃತ ಮಾಹಿತಿ ಮಾಧ್ಯಮದ ಮುಂದೆ ಬಾರದೆಯೂ ಹುಸೇನ್ ಬದುಕಿದ್ದಾರೆ ಎಂಬ ಗೊಂದಲ ಕೂಡ ಏರ್ಪಟ್ಟಿತ್ತು. ಬಳಿಕ ಡಿಸೆಂಬರ್ 16ರಂದು ಎಲ್ಲ ಗೊಂದಲಕ್ಕೂ ತೆರೆ ಬಿದ್ದಿದ್ದು ಅಧಿಕೃತ ಘೋಷಣೆ ಮಾಡಲಾಗಿದೆ. ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಜಾಕಿರ್ ಹುಸೇನ್ ಅಗಲಿಕೆಗೆ ಕಂಬನಿ ಮಿಡಿದಿದೆ.

ಹಾಡಿನ ವಿದಾಯ
ಇವರ ಅಂತ್ಯಕ್ರಿಯೆಯಲ್ಲಿ ಡ್ರಮ್ಮರ್ ಆನಂದನ್ ಶಿವಮಣಿ, ಇತರ ಕೆಲವು ಪ್ರಖ್ಯಾತ ಸಂಗೀತಗಾರರು ಜಾಕಿರ್ ಹುಸೇನ್ ಅವರಿಗೆ ಸಂಗೀತದ ಮೂಲದ ಗೌರವವನ್ನು ಸಲ್ಲಿಸಿದ್ದಾರೆ. ಅನೇಕ ಸಂಗೀತ ದಿಗ್ಗಜರು ವಿವಿಧ ಹಾಡನ್ನು ಹಾಡುವ ಮೂಲಕ ಮತ್ತು ವಾದ್ಯಗಳನ್ನು ನುಡಿಸುವ ಮೂಲಕ ತಬಲಾ ಮಾಣಿಕ್ಯನಿಗೆ ಹಾಡಿನ (ಸಂಗೀತದ) ವಿದಾಯ ಹೇಳಿದ್ದಾರೆ.

ತಂದೆಯೇ ಗುರು
ತಬಲಾ ವಾದಕ ಉಸ್ತಾದ್ ಅಲ್ಲಾ ರಖಾ ಅವರ ಮಗ ಜಾಕಿರ್ ಹುಸೇನ್ ಅವರಿಗೆ ತಂದೆಯೇ ಮೊದಲ ಗುರು ಎನ್ನಬಹುದು. ಜಾಕಿರ್​ ತಂದೆಯಿಂದಲೇ ಪ್ರೇರಿತರಾಗಿ ತಬಲಾ ನುಡಿಸುವುದನ್ನು ಕಲಿತಿದ್ದರು. ಹೀಗಾಗಿ ಕೇವಲ 11 ವಯಸ್ಸಿಗೆ ಅಮೆರಿಕದಲ್ಲಿ ತಬಲಾ ವಾದ್ಯ ನುಡಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಬಾಲ್ಯದಿಂದಲೇ ಸಂಗೀತ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದ ಇವರು ‌ತಂದೆಯ ಸಂಗೀತ ಬೋಧನೆಗಳನ್ನು ಅರ‍್ಥೈಸಿಕೊಳ್ಳುತ್ತಾ ತಬಲ ವಾದ್ಯದ ಬಗ್ಗೆ ಬಹಳಷ್ಟು ತಿಳುವಳಿಕೆಯನ್ನು ಹೊಂದಿದ್ದರು. ಸಂಗೀತ ಕಾರ್ಯಕ್ರಮ, ಜಾಹೀರಾತು , ವಿವಿಧ ಲೈವ್ ಶೋ ಮೂಲಕ ಜನರನ್ನು ರಂಜಿಸಿ ಅಪಾರ ಅಭಿಮಾನಿಗಳ ಪ್ರೀತಿ ಪಾತ್ರರಾದ ಜಾಕಿರ್ ಹುಸೇನ್ ಅವರು ದೈವಾಧೀನರಾಗಿದ್ದು ಅವರ ಅಭಿಮಾನಿಗಳಿಗೆ ಹಾಗೂ ಸಂಗೀತ ಲೋಕಕ್ಕೆ ತುಂಬಲಾಗದ ನಷ್ಟವಿದ್ದಂತೆ ಎನ್ನಬಹುದು.

ವಿವಿಧ ಪುರಸ್ಕಾರ ಸಂದಿದೆ!
ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಬಹಳಷ್ಟು ಪ್ರಸಿದ್ಧಿ ಪಡೆದಿರುವ ಜಾಕಿರ್‌ ಹುಸೇನ್ ಅವರು ಯುಎಸ್‌ ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಆರ್ಟ್ಸ್‌ನಿಂದ ಪ್ರತಿಷ್ಠಿತ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ.ಅನೇಕ ಕಷ್ಟದ ಸವಾಲು ಗಳನ್ನು ದಾಟಿ ಹೆಸರು ಮಾಡಿರುವ ಜಾಕಿರ್ ಹುಸೇನ್​ಗೆ 2009ರಲ್ಲಿ ಗ್ರ‍್ಯಾಮಿ ಪ್ರಶಸ್ತಿಯನ್ನು ಕೂಡ ನೀಡಲಾಗಿತ್ತು. 1988ರಲ್ಲಿ ಪದ್ಮಶ್ರೀ ಮತ್ತು 2002ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ:Zakir Hussain: ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಇನ್ನಿಲ್ಲ