ದುಬೈ: 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ ಫೈನಲ್(T20 World Cup Final) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು(ಭಾನುವಾರ) ರಾತ್ರಿ 7.30 ದುಬೈ ಅಂಗಳದಲ್ಲಿ ದಕ್ಷಿಣ ಆಫ್ರಿಕಾ(South Africa Women) ಮತ್ತು ನ್ಯೂಜಿಲ್ಯಾಂಡ್(New Zealand Women) ಚೊಚ್ಚಲ ಪ್ರಶಸ್ತಿಗಾಗಿ ಸೆಣಸಾಡಲಿದೆ. ಪಂದ್ಯ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪ್ರಸಾರಗೊಳ್ಳಲಿದೆ. ದಕ್ಷಿಣ ಆಫ್ರಿಕಾಗೆ(SAW vs NZW) ಇದು ಸತತ 2ನೇ ಫೈನಲ್ ಆದರೆ, ನ್ಯೂಜಿಲೆಂಡ್‌ಗೆ ಮೂರನೆ ಫೈನಲ್. ಯಾರೇ ಗೆದ್ದರೂ ಇತಿಹಾಸ.
ನ್ಯೂಜಿಲೆಂಡ್ ಗೆದ್ದರೆ ಮಹಿಳೆಯರ ಏಕದಿನ-ಟಿ20 ವಿಶ್ವಕಪ್ ಎರಡೂ ಗೆದ್ದ 3ನೇ ತಂಡವೆನಿಸಲಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮೊದಲೆರಡು ತಂಡಗಳಾಗಿವೆ. ನ್ಯೂಜಿಲೆಂಡ್ 2000ದಲ್ಲಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದಿತ್ತು. ಇದೇ ವರ್ಷ ಜೂನ್‌ನಲ್ಲಿ ಬಾರ್ಬಡಾಸ್‌ನಲ್ಲಿ ನಡೆದಿದ್ದ ಪುರುಷರ ಟಿ20 ವಿಶ್ವಕಪ್ನಲ್ಲೂ ಫೈನಲ್ಗೇರಿದ್ದ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ 7 ರನ್ಗಳಿಂದ ಸೋತು ರನ್ನರ್ಅಪ್ಗೆ ತೃಪ್ತಿಪಟ್ಟಿತ್ತು. ಈ ನಿರಾಸೆಯನ್ನು ಅಳಿಸುವ ಅವಕಾಶವೀಗ ದಕ್ಷಿಣ ಆಫ್ರಿಕಾದ ಮಹಿಳೆಯರ ಮುಂದಿದೆ.
ಲೀಗ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಎಡವಿಯೂ ಫೈನಲ್ ತನಕ ಬಂದದ್ದು ದಕ್ಷಿಣ ಆಫ್ರಿಕಾದ ಸಾಹಸಗಾಥೆಗೆ ಸಾಕ್ಷಿ. ಅದರಲ್ಲೂ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಬಗ್ಗುಬಡಿದ ರೀತಿಯಂತೂ ಅಮೋಘ. ತಂಡದ ಸರ್ವಾಂಗೀಣ ಪ್ರದರ್ಶನಕ್ಕೆ ಇದೊಂದು ಅತ್ಯುತ್ತಮ ನಿದರ್ಶವಾಗಿತ್ತು. ಇದೇ ಮಟ್ಟವನ್ನು ಉಳಿಸಿಕೊಂಡರೆ ನ್ಯೂಜಿಲೆಂಡ್‌ಗೆ ಖಂಡಿತವಾಗಿಯೂ ಅಪಾಯವಿದೆ.
ಇದನ್ನೂ ಓದಿ IND vs NZ: ಸೋಲಿನ ಭೀತಿಯಲ್ಲಿ ಭಾರತ
ಲಾರಾ ವೋಲ್ವಾರ್ಟ್-ಟಾಜ್ಮಿನ್ ಬ್ರಿಟ್ಸ್ ಈ ಕೂಟದ ಅತ್ಯುತ್ತಮ ಆರಂಭಿಕ ಜೋಡಿ. ಇಬ್ಬರೂ ಟಾಪ್ ಫಾರ್ಮ್‌ನಲ್ಲಿದ್ದಾರೆ. ಹಾಗೆಯೇ ಬೌಲಿಂಗ್‌ನಲ್ಲಿ ನಾನ್‌ಕುಲುಲೆಕೊ ಮ್ಲಾಬಾ-ಅಯಬೊಂಗಾ ಖಾಕಾ ಜೋಡಿಯೂ ಭರ್ಜರಿ ಲಯದಲ್ಲಿದೆ. ಇವರಿಬ್ಬರು ಸೇರಿಕೊಂಡು ಆಸೀಸ್ ಬ್ಯಾಟಿಂಗ್ ಸರದಿಯನ್ನು ಸೀಳಿದ ಪರಿ ಪ್ರಶಂಸನೀಯ. ಆಲೌರೌಂಡರ್ ಮರಿಜಾನ್ ಕಾಪ್, ಅನುಭವಿ ಸುನೆ ಲುಸ್ ತಂಡದ ಮತ್ತಿಬ್ಬರು ಪ್ರಮುಖ ಆಟಗಾರ್ತಿಯರು.
ಕಿವೀಸ್ 3ನೇ ಬಾರಿ ಮತ್ತು 14 ವರ್ಷಗಳ ಬಳಿಕ ಫೈನಲ್ಗೇರಿದೆ. ಈ ಮುನ್ನ 2009, 2010ರಲ್ಲಿ ಫೈನಲ್ಗೇರಿದಾಗ ಇಂಗ್ಲೆಂಡ್, ಆಸೀಸ್ ಎದುರು ಸೋತಿದ್ದ ಕಿವೀಸ್, ಈ ಬಾರಿ 3ನೇ ಪ್ರಯತ್ನದಲ್ಲಿ ಟ್ರೋಫಿ ಗೆಲ್ಲುವ ಹಂಬಲದಲ್ಲಿದೆ. ನಾಯಕಿ ಸೋಫಿ ಡಿವೈನ್ ಅವರಿಗೆ ಇದು ಕೊನೆಯ ವಿಶ್ವಕಪ್ ಟೂರ್ನಿಯಾಗುವ ಸಾಧ್ಯತೆ ಇದೆ. ಎಲ್ಲ ಆವೃತ್ತಿಯ ಟಿ20 ವಿಶ್ವಕಪ್ ಆಡಿರುವ ಅವರು ಈ ಬಾರಿ ಗೆದ್ದು ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದಾರೆ.