ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅವಿವಾಹಿತ ಜೋಡಿಯ ಚಪಲಕ್ಕೆ 2 ಮುಗ್ಧ ಕಂದಮ್ಮಗಳು ಬಲಿ; ಮದುವೆಯಾಗದೆ ಹುಟ್ಟಿದ ಇಬ್ಬರು ಮಕ್ಕಳನ್ನು ಕೊಂದ್ರಾ ಪಾಪಿಗಳು? ಏನಿದು ದೇವರನಾಡನಲ್ಲಿ ನಡೆದ ಪೈಶಾಚಿಕ ಕೃತ್ಯ?

Thrissur Horror: ಅಕ್ರಮ ಸಂಬಂಧದಲ್ಲಿ ಜನಿಸಿದ ಇಬ್ಬರು ಮಕ್ಕಳನ್ನು ಜೋಡಿಯೊಂದು ಕೊಂದಿರುವ ಶಂಕೆ ವ್ಯಕ್ತವಾಗಿದ್ದು, ವ್ಯಕ್ತಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾನೆ. ದೇಶವನ್ನೇ ಬೆಚ್ಚಿ ಬೀಳಿಸಿದ ಈ ಘಟನೆ ಕೇರಳದ ತ್ರಿಶ್ಶೂರ್‌ನಲ್ಲಿ ನಡೆದಿದೆ. ಪುದುಕಾಡ್‌ ಪೊಲೀಸ್‌ ಠಾಣೆಗೆ ಆರೋಪಿ ಶಿಶುಗಳ ಅಸ್ಥಿಪಂಜರ ಹೊಂದಿದ ಚೀಲದೊಂದಿಗೆ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

2 ಶಿಶುಗಳ ಅಸ್ಥಿಪಂಜರದೊಂದಿಗೆ ಠಾಣೆಗೆ ಆಗಮಿಸಿದ ವ್ಯಕ್ತಿ; ಏನಿದು ಘಟನೆ?

ಸಾಂದರ್ಭಿಕ ಚಿತ್ರ.

Profile Ramesh B Jun 29, 2025 8:55 PM

ತಿರುವನಂತಪುರಂ: ಅವರಿಬ್ಬರು ಫೇಸ್‌ಬುಕ್‌ ಮೂಲಕ ಪರಿಚಿತರಾದವರು. ಈ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತು. ಮದುವೆಯಾಗದಿದ್ದರೂ ಇವರು ದೈಹಿಕ ಸಂಪರ್ಕ ಬೆಳೆಸಿದರು. ಪರಿಣಾಮ ಇಬ್ಬರು ಮಕ್ಕಳು ಜನಿಸಿದರು. ಇದೀಗ ಈ ಎರಡೂ ಮಕ್ಕಳನ್ನು ಇವರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಜೋಡಿಯನ್ನು ವಶಕ್ಕೆ ಪಡೆದಿದ್ದಾರೆ (Crime News). ದೇಶವನ್ನೇ ಬೆಚ್ಚಿ ಬೀಳಿಸಿದ ಈ ಘಟನೆ ಕೇರಳದ ತ್ರಿಶ್ಶೂರ್‌ನಲ್ಲಿ ನಡೆದಿದೆ (Thrissur Horror). ಪುದುಕಾಡ್‌ ಪೊಲೀಸ್‌ ಠಾಣೆಗೆ ಆರೋಪಿ ಶಿಶುಗಳ ಅಸ್ಥಿಪಂಜರ ಹೊಂದಿದ ಚೀಲದೊಂದಿಗೆ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.

ಆರೋಪಿ 26 ವರ್ಷದ ಯುವಕ ಕುಡಿದ ಮತ್ತಿನಲ್ಲಿ ಭಾನುವಾರ (ಜೂ. 29) ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ. ಆತ ತನ್ನ ಬಳಿ ಇರುವ ಚೀಲದಲ್ಲಿಎರಡು ನವಜಾತ ಶಿಶುಗಳ ಅಸ್ಥಿಪಂಜರವಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ. ಬಳಿಕ ಪೊಲೀಸರು ಪರಿಶೀಲಿಸಿದಾಗ ಆತ ಹೇಳಿದ್ದು ನಿಜ ಎನ್ನುವುದು ಗೊತ್ತಾಗಿದೆ. ಒಂದು ಮಗು ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರೆ, ಇನ್ನೊಂದು ಎರಡು ವರ್ಷಗಳ ಹಿಂದೆ ಸಾವನ್ನಪ್ಪಿತ್ತು ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಸದ್ಯ ಆತನನ್ನು ಮತ್ತು ಆತನ ಪ್ರೇಯಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

21 ವರ್ಷದ ಮಹಿಳೆಯೊಂದಿಗಿನ ಸಂಬಂಧದಿಂದ ಶಿಶುಗಳು ಜನಿಸಿವೆ ಮತ್ತು ಇಬ್ಬರೂ ಅವಿವಾಹಿತರು ಎಂದು ಆ ವ್ಯಕ್ತಿ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಇದಲ್ಲದೆ ಎರಡೂ ಶಿಶುಗಳು ಸಾವನ್ನಪ್ಪಿದ್ದು, 2 ವರ್ಷದ ಅಂತರದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹೂಳಲಾಗಿದೆ ಎಂದು ಅವನು ಹೇಳಿಕೊಂಡಿದ್ದಾನೆ.

ಈ ಸುದ್ದಿಯನ್ನೂಓದಿ: Physical Abuse: ಬಾಲಕಿಯರ ಮೇಲೆ ಇಬ್ಬರಿಂದ ನಿರಂತರ ಲೈಂಗಿಕ ದೌರ್ಜನ್ಯ-ಕಾಮುಕರು ಅರೆಸ್ಟ್‌

"ಮಧ್ಯಾಹ್ನ 12:30ರ ಸುಮಾರಿಗೆ ಯುವಕನೊಬ್ಬ ಪುದುಕಾಡ್‌ ಪೊಲೀಸ್‌ ಠಾಣೆಗೆ ಆಗಮಿಸಿ ಬ್ಯಾಗ್‌ನಲ್ಲಿ ಎರಡು ಶಿಶುಗಳ ಅವಶೇಷಗಳಿವೆ ಎಂದು ಹೇಳಿದ್ದ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "1 ಮಗು 4 ವರ್ಷಗಳ ಹಿಂದೆ, ಇನ್ನೊಂದು ಮಗು 2 ವರ್ಷಗಳ ಹಿಂದೆ ಸಾವನ್ನಪ್ಪಿದೆ ಎಂದು ಆತ ಹೇಳಿದ್ದಾನೆ. ನಾವು ಆತನ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಈ ಹಂತದಲ್ಲಿ ಪ್ರಕರಣವನ್ನು ಸಂಭವನೀಯ ಕೊಲೆ ಎಂದು ಪರಿಗಣಿಸುತ್ತಿದ್ದೇವೆ" ಎಂದು ವಿವರಿಸಿದ್ದಾರೆ. ಮದುವೆಯಾಗದ ಹಿನ್ನೆಲೆಯಲ್ಲಿ ಇಬ್ಬರು ಸೇರಿ ಕೊಲೆ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

ಶಿಶುಗಳನ್ನು ಹೂಳಲಾಗಿದೆ ಎಂದು ಆ ಯುವಕ ಉಲ್ಲೇಖಿಸಿರುವ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಲಿದ್ದಾರೆ. ಒಂದು ಮಗುವನ್ನು ಸಾರ್ವಜನಿಕ ಸ್ಮಶಾನದಲ್ಲಿ ಮತ್ತು ಇನ್ನೊಂದನ್ನು ಖಾಸಗಿ ಭೂಮಿಯಲ್ಲಿ ಹೂಳಲಾಗಿದೆ ಎಂದು ಆತ ಹೇಳಿದ್ದಾನೆ. "ನಾವು ಎಲ್ಲ ಕೋನಗಳನ್ನು ಪರಿಶೀಲಿಸುತ್ತಿದ್ದೇವೆ. ಇಲ್ಲಿಯವರೆಗೆ ಇದು ಕೊಲೆ ಪ್ರಕರಣವೇ ಎಂದು ಖಚಿತಪಡಿಸಲು ಸಾಧ್ಯವಾಗಿಲ್ಲ. ತನಿಖೆ ಮುಂದುವರಿದಿದೆ" ಎಂದು ಅಧಿಕಾರಿ ವಿವರಿಸಿದ್ದಾರೆ.

ಮಹಿಳೆ ಹೇಳಿದ್ದೇನು?

ವಿಚಾರಣೆ ವೇಳೆ ಬಾಯಿಬಿಟ್ಟ ಮಹಿಳೆ ಎರಡು ಮಕ್ಕಳೂ ಸಹಜವಾಗಿ ಸಾವನ್ನಪ್ಪಿವೆ ಎಂದಿದ್ದಾಳೆ. ಎರಡನೇ ಮಗು ಜೋರಾಗಿ ಅಳುತ್ತಿದೆ ಎನ್ನುವ ಕಾರಣಕ್ಕೆ ಆಕೆಯೇ ಕೊಲೆ ಮಾಡಿದ್ದಾಳೆ ಎನ್ನುವ ಶಂಕೆಯೂ ಇದೆ. ಮಹಿಳೆಯ ಕುಟುಂಬಕ್ಕೆ ಆಕೆ ಗರ್ಭ ಧರಿಸಿದ್ದು ಗೊತ್ತಿತ್ತೆ ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಜೋಡಿಯ ನಡುವಿನ ಸಂಬಂಧ ಇತ್ತೀಚೆಗೆ ಹಳಸಿದ್ದು, ಆಕೆ ಬೇರೆ ಮದುವೆಯಾಗಲು ಮುಂದಾದ ಹಿನ್ನೆಲೆಯಲ್ಲಿ ಆತ ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾನೆ ಎನ್ನಲಾಗಿದೆ. ಸಮಗ್ರ ತನಿಖೆಯ ಬಳಿಕವಷ್ಟೇ ಶಿಶುಗಳ ಸಾವಿನ ರಹಸ್ಯ ತೆರೆದುಕೊಳ್ಳಲಿದೆ.