Thursday, 26th December 2024

MP Shocker: ಆಸ್ತಿ ಆಸೆಗಾಗಿ ತಾಯಿಯ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಪಾಪಿ ಪುತ್ರ!

ಭೋಪಾಲ್: ಮಧ್ಯಪ್ರದೇಶದ (Madhya Pradesh) ಸಿಧಿ (Sidhi) ಜಿಲ್ಲೆಯಲ್ಲೊಂದು ಆಘಾತಕಾರಿ ಘಟನೆ ವರದಿಯಾಗಿದ್ದು (MP Shocker), ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತನ್ನ ತಾಯಿಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾನೆ.

ಪಾನಮತ್ತ ಪಾಪಿ ಪುತ್ರ ತನ್ನ ತಾಯಿಯ ಬಳಿ ಜಾಗ ಮತ್ತು ಮನೆಯಲ್ಲಿ ಪಾಲು ಬೇಕೆಂದು ಕೇಳಿದ್ದಾನೆ. ಆದರೆ ಇದಕ್ಕೆ ತಾಯಿ ಒಪ್ಪದೇ ಇದ್ದಾಗ ಸಿಟ್ಟಿಗೆದ್ದ ಮಗ ತಾಯಿಯ ಮೇಲೆ ಹರಿತವಾದ ಆಯುಧದಿಂದ ಯದ್ವಾತದ್ವಾ ದಾಳಿ ನಡೆಸಿದ್ದಾನೆ.

ಮುಖ-ಮೂತಿ ನೋಡದೆ ಹೊಡೆಯೊದು ಅಂತಾರಲ್ಲ..? ಅದೇ ರೀತಿ ಈ ಪಾಪಿ ಪುತ್ರ ತನ್ನ ತಾಯಿಯ ಮುಖದ ಮೇಲೆಯೇ ಸಿಕ್ಕಸಿಕ್ಕಲ್ಲಿ ಇರಿದಿದ್ದು, ಇದೀಗ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ಪಡೆದುಕೊಂಡಿರುವ ಸ್ಥಳೀಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತನ್ನ ತಾಯಿಯ ಮೇಲೆ ಈ ರೀತಿ ಪೈಶಾಚಿಕವಾಗಿ ಹಲ್ಲೆ ನಡೆಸಿದಾತನನ್ನು ಅರ್ಜುನ್ ರಾವತ್ ಎಂದು ಗುರುತಿಸಲಾಗಿದೆ. ಮತ್ತು ಪುತ್ರನ ದಾಳಿಯಿಂದ ಗಾಯಗೊಂಡಿರುವ ಮಹಿಳೆಯನ್ನು ರಮಾಬಾಯಿ ರಾವತ್ ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ, ಕುಡಿತದ ಅಮಲಿನಲ್ಲಿ ಮನೆಗೆ ಬಂದ ಅರ್ಜುನ್ ಆಸ್ತಿ ವಿಚಾರದಲ್ಲಿ ತಾಯಿಯೊಂದಿಗೆ ಜಗಳವಾಡಿದ್ದಾನೆ. ಈ ಜಗಳ ತಾರಕ್ಕೇರಿದಾಗ ಸಿಟ್ಟಿನಿಂದ ಈತ ತಾಯಿಯ ಮುಖದ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ: Uttar Pradesh: ಮದುವೆಯಾಗಲು ಹುಡುಗಿ ಹುಡುಕುತ್ತಿದ್ದೀರಾ? ಈ ಸುದ್ದಿಯನ್ನು ಒಮ್ಮೆ ಓದಿ!

ಮಗನ ಮಾರಣಾಂತಿಕ ದಾಳಿಯಿಂದ ಕಂಗಾಲಾದ ತಾಯಿ ನೋವಿನಿಂದ ಚಿರಾಡುತ್ತಿದ್ದರೂ ಕರುಣೆ ತೋರದ ಪಾಪಿ ಮಗ ಆಕೆಯ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ.

ಈ ಸಂದರ್ಭದಲ್ಲಿ ಮನೆಯೊಳಗಿನಿಂದ ಮಹಿಳೆಯ ಬೊಬ್ಬೆ ಕೇಳಿ ಬಂದ ನೆರೆಹೊರೆಯವರು ತಕ್ಷಣವೇ ಜಗಳ ಬಿಡಿಸಿ ತಿವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ ಪುತ್ರ ಇದೀಗ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.