ಥಾಣೆ: ತನ್ನ ಮಗಳ ಮೇಲೆಯೇ ನಿರಂತರ ಲೈಂಗಿಕ ದೌರ್ಜನ್ಯ (Physical Abuse) ಎಸಗುತ್ತಿದ್ದ ಪಾಪಿ ತಂದೆಯೊಬ್ಬನನ್ನು ಪೊಲೀಸರು ಬಂಧಿಸಿರುವ ಕುರಿತು ಮಾಹಿತಿ (Crime News) ಲಭ್ಯವಾಗಿದೆ. ಮಹಾರಾಷ್ಟ್ರದ (Maharashtra) ಥಾಣೆಯಲ್ಲಿ (Thane) ಈ ಘಟನೆ ನಡೆದಿದ್ದು, 42 ವರ್ಷದ ಪ್ರಾಯದ ಈ ಪಾಪಿ ತಂದೆ ತನ್ನ ಆರು ವರ್ಷದ ಮಗಳ ಮೇಲೆಯೇ ನಿರಂತರ ಅತ್ಯಾಚಾರವೆಸಗುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಜೂನ್‌ನಿಂದ ಡೊಂಬಿವಿಲಿ (Dombivli) ಪ್ರದೇಶದ ಈ ಆರೋಪಿಯು, ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಆಕೆಯ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ವಿಷ್ಣು ನಗರ ಪೊಲೀಸ್ ಠಾಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯ ಪತ್ನಿ ನೀಡಿರುವ ದೂರನ್ನು ಆಧರಿಸಿ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ ಗಳು ಹಾಗೂ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪ್ರಾಪ್ತ ಬಾಲಕಿಯರ ಮೇಲೆ ಅವರ ಹತ್ತಿರದ ಸಂಬಂಧಿಗಳೇ ಲೈಂಗಿಕ ದೌರ್ಜನ್ಯವೆಸಗುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ವರದಿಯಾಗುತ್ತಿದೆ. ಇಂತಹ ದೌರ್ಜನ್ಯ ಪ್ರಕರಣಗಳಲ್ಲಿ ಸೆರೆಯಾಗುವ ಆರೊಪಿಗಳಿಗೆ ಪೋಕ್ಸೋ (POCSO) ಕಾಯ್ದೆಯಡಿಯಲ್ಲಿ ಜಾಮೀನುರಹಿತ ಬಂಧನ ಮತ್ತು ಇನ್ನು ಕೆಲವು ಪ್ರಕರಣಗಳಲ್ಲಿ ಆರೊಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದ್ದರೂ ಇಂತಹ ಪ್ರಕರಣಗಳು ಪ್ರತಿನಿತ್ಯವೆಂಬಂತೆ ವರದಿಯಾಗುತ್ತಲೇ ಇದೆ.
ಅಪ್ರಾಪ್ತೆಯರ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆದಿರುವ ಲೈಂಗಿಕ ಪ್ರಕರಣಗಳನ್ನು ನೊಡುವುದಾದರೆ:
ಸಾಮಾಜಿಕ ಜಾಲತಾಣದ ಪ್ರೇರಣೆ – ಮೂರು ವರ್ಷ ಪ್ರಾಯದ ಮಗುವಿನ ಮೇಲೆರಗಿದ ಕಾಮುಕ!
ಒಂಭತ್ತು ವರ್ಷ ಪ್ರಾಯದ ಅಪ್ರಾಪ್ತನೊಬ್ಬ ಮೂರು ವರ್ಷ ಪ್ರಾಯದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪುಣೆಯ ಕೊಂಧ್ವಾ ಎಂಬಲ್ಲಿ ನಡೆದಿದೆ. ಎರಡೂ ಕುಟುಂಬಗಳೂ ನೆರೆಹೊರೆಯವರಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಪರಿಚಿತರಾಗಿದ್ದರು. ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದ ಈ ಬಾಲಕ ಸಂತ್ರಸ್ತೆಯ ಮನೆಯ ಸಮೀಪವೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಮಾಹಿತಿ ಲಭ್ಯವಾಗಿದೆ. ಮಗು ತನ್ನ ಮೇಲೆ ನಡೆದಿರುವ ದೌರ್ಜನ್ಯದ ಕುರಿತು ಬಾಲ ಭಾಷೆಯಲ್ಲಿ ತನ್ನ ಮನೆಯವರಿಗೆ ತಿಳಿಸಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಸೋಷಿಯಲ್ ಮೀಡಿಯಾದಿಂದ (Social Media) ಪ್ರಭಾವಿತನಾಗಿ ಬಾಲಕ ಈ ನಿಚ ಕೃತ್ಯ ಎಸಗಿದ್ದಾನೆಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.
ಇನ್ನೊಂದು ಪ್ರಕರಣದಲ್ಲಿ ಮಹಾರಾಷ್ಟ್ರದ ಡೊಂಬಿವಿಲಿ ಪ್ರದೇಶದಲ್ಲಿ ನಾಲ್ಕು ವರ್ಷದ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 45 ವರ್ಷದ ವ್ಯಕ್ತಿಯನ್ನು ವಿಷ್ಣು ನಗರ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ತನ್ನ ಮನೆಯ ಹೊರಗಡೆ ಆಟವಾಡುತ್ತಿದ್ ಸಂದರ್ಭದಲ್ಲಿ ಆರೋಪಿಯು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Lakshmi Hebbalkar: ಸಿ.ಟಿ. ರವಿ ಹೇಳಿಕೆಯ 2 ವಿಡಿಯೊ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳಕರ್!
ಇನ್ನು, ಪುಣೆಯಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದರಲ್ಲಿ ಇಲ್ಲಿನ ಕೊರೆಗಾಂವ್ ಜಿಲ್ಲಾ ಪರಿಷತ್ ಶಾಲೆಯಲ್ಲಿ ಶಿಕ್ಷಕನೊಬ್ಬ ಅಪ್ರಾಪ್ತೆಯರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಮಾತ್ರವಲ್ಲದೇ ಈ ವಿಚಾರವನ್ನು ಎಲ್ಲಿಯೂ ಬಾಯಿ ಬಿಡದಂತೆ ಅವರಿಗೆ ಬೆದರಿಕೆಯೊಡ್ಡಿರುವ ಕುರಿತಾಗಿಯೂ ವರದಿಯಾಗಿದೆ. ಆದರೆ ಆರನೇ ಮತ್ತು ಏಳನೇ ತರಗತಿಯ ಸಂತ್ರಸ್ತೆಯರು ತಮ್ಮ ಹೆತ್ತವರಿಗೆ ಈ ಕುರಿತಾಗಿ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇದೀಗ ಶಾಲಾ ಪ್ರಿನ್ಸಿಪಾಲ್ ನಿಡಿರುವ ದೂರಿನಂತೆ ಆರೊಪಿಯ ಮೇಲೆ ಪ್ರಕರಣ ದಾಖಲಾಗಿದೆ.
ಇವೆಲ್ಲಾ ಕೆಲವೊಂದು ಉದಾಹರಣೆಗಳಷ್ಟೇ. ದೇಶದೆಲ್ಲೆಡೆ ಅಪ್ರಾಪ್ತೆಯರ ಮೇಲೆ, ಸಣ್ಣ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇರುವುದು ನಾಗರಿಕ ಸಮಾಜದಲ್ಲಿ ಆತಂಕ ಮೂಡಿಸಿದೆ.