ಸದ್ಯದ ಜಗತ್ತಿನಲ್ಲಿ ಸೈಬರ್ ಕ್ರೈಂಗಳು (Cyber Crime) ಅನ್ನೋದು ಅತಿರೇಕದ ಹಂತಕ್ಕೆ ತಲುಪಿದೆ. ಏನೋ ಆಮಿಷ, ಇನ್ನೇನು ಆಸೆಗಳನ್ನು ತೋರಿಸಿ ವಂಚಿಸುತ್ತಾರೆ. ಇಷ್ಟು ತಿಂಗಳಲ್ಲಿ ನಿಮ್ಮ ಹಣ ಡಬಲ್ (Money Double) ಆಗುತ್ತೆ ಎಂದು ನಂಬಿಸುತ್ತಾರೆ. ಇಲ್ಲವೇ, ಯಾರದ್ದೋ ಮಾತು ನಂಬಿ ಕೆಲವೊಮ್ಮೆ ನಮ್ಮ ಕೈಯಲ್ಲಿದ್ದ ಹಣವನ್ನು ಕಳೆದುಕೊಂಡ ಘಟನೆಗಳು ಕೂಡ ವರದಿಯಾಗುತ್ತಲೇ ಇರುತ್ತವೆ. ಇದೀಗ ಬಾಲಿವುಡ್ (Bollywood) ನಟಿ ದೀಪು ಶರ್ಮಾ ಇಂತಹುದೇ ಒಂದು ವಂಚನೆಗೆ (Scam) ಒಳಗಾಗಿದ್ದು, ದುಪ್ಪಟ್ಟು ಲಾಭದ ಆಸೆಗೆ ಬಿದ್ದು 1.31 ಕೋಟಿ ರೂ ಹಣ ಕಳೆದುಕೊಂಡಿದ್ದಾರೆ.
ಹೌದು, ಇತ್ತೀಚೆಗೆ ಆಕರ್ಷಕ ಹೂಡಿಕೆ, ದುಪ್ಪಟ್ಟು ಲಾಭದ ಆಸೆ ತೋರಿಸಿ ವಂಚಿಸುವ ವ್ಯವಸ್ಥಿತ ಜಾಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಾಚರಿಸುತ್ತಿದ್ದು, ದೇಶದ ಅಸಂಖ್ಯಾತ ನಿರುದ್ಯೋಗಿ ಯುವಜನರು, ಗೃಹಿಣಿಯರು, ವಿದ್ಯಾರ್ಥಿಗಳು, ಮತ್ತಿತರರು ಇವರ ಬಲೆಗೆ ಬಿದ್ದು ನಿತ್ಯ ಭಾರಿ ಮೊತ್ತದ ಹಣ ಕಳೆದುಕೊಳ್ಳುತ್ತಿದ್ದಾರೆ.
ಇದೀಗ ಸಿನಿ ನಟ – ನಟಿಯರು ಇಂತಹ ಜಾಲಕ್ಕೆ ಸಿಲುಕ್ಕಿ ಮೋಸ ಹೋಗುತ್ತಿದ್ದು, ಬಾಲಿವುಡ್ ನಟಿ ದೀಪು ಶರ್ಮಾ ಕೂಡ ಈ ಸ್ಕ್ಯಾಮ್ ಗೆ ಸಿಲುಕಿ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ವಂಚಕರ ಹಣ ಡಬಲ್ ಆಸೆಗೆ ಬಲಿ ಬಿದ್ದು ನಟಿ ದೀಪು ಶರ್ಮಾ 1.31 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದು, ಈ ಜಾಲಕ್ಕೆ ಸಿಲುಕಿರುವ ಇತರರೂ ಸೇರಿದಂತೆ ಒಟ್ಟು 2.64 ಕೋಟಿ ರೂಪಾಯಿಗಳ ಬೃಹತ್ ವಂಚನೆ ನಡೆದಿರುವ ಬಗ್ಗೆ ವರದಿಯಾಗಿದೆ.
51 ವರ್ಷ ಪ್ರಾಯದ ಈ ನಟಿ ಹಣ ಡಬಲ್ ಮಾಡಿಕೊಡುವ ಆಮಿಷ ಒಡ್ಡಿದ್ದ ಆರೋಪಿಯನ್ನು 2017ರಲ್ಲಿ ಭೇಟಿಯಾಗಿದ್ದರು. ಇವರಲ್ಲಿ ಒಬ್ಬಾಕೆ ಮೀರಾ ರೋಡ್ ನಿವಾಸಿ ಪ್ರೀತಿ ಸೊನಾವಾಡೆಕರ್ ಎಂಬಾಕೆ ತನ್ನನ್ನು ಕೆಬಿಸಿ ಆಗ್ರೋ ಪ್ರೈ.ಲಿ. ನ ಎಕ್ಸಿಕ್ಯೂಟಿವ್ ಎಂದು ಪರಿಚಯಿಸಿಕೊಂಡಿದ್ದರು. ಮತ್ತು ಒಂದು ಸಣ್ಣ ಮೊತ್ತದ ಹಣವನ್ನು ಈ ಕಂಪೆನಿಯಲ್ಲಿ ಹೂಡಿಕೆ ಮಾಡುವಂತೆ ನಟಿಯ ಮನವೊಲಿಸಿದ್ದರು. ಮತ್ತು ಹೀಗೆ ಹೂಡಿಕೆ ಮಾಡಿದ ಹಣ 10 ತಿಂಗಳೊಳಗೆ ಡಬಲ್ ಆಗುತ್ತದೆ ಎಂಬ ಆಮಿಷವನ್ನು ಆಕೆ ನಟಿಗೆ ಒಡ್ಡಿದ್ದರು ಎಂದು ಆರೋಪಿಸಲಾಗಿದೆ.
ಈಕೆಯ ಮಾತನ್ನು ನಂಬಿದ ನಟಿ ಒಂದು ಸಣ್ಣ ಮೊತ್ತವನ್ನು ಈ ಕಂಪೆನಿಯ ಶೇರ್ ಆಗಿ ಹೂಡಿಕೆ ಮಾಡಿದ್ದರು ಮತ್ತು 10 ತಿಂಗಳಲ್ಲಿ ಆಕೆಯ ಮೊತ್ತ ಡಬಲ್ ಆಗಿತ್ತು. ಇದನ್ನು ನಂಬಿದ ನಟಿ 2018ರಲ್ಲಿ 1.31 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನು ಈ ಕಂಪೆನಿಯ ಶೇರ್ ಆಗಿ ಹೂಡಿಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಪ್ರೀತಿ ಅವರು ಕಂಪೆನಿಗೆ ಸಂಬಂಧಿಸಿದ್ದೆಂದು ಹೇಳಲಾದ ಕೆಲವೊಂದು ದಾಖಲೆ ಪತ್ರಗಳನ್ನೂ ಸಹ ನಟಿಗೆ ಕೊಟ್ಟಿದ್ದರು.
‘ನನಗೆ ನೀಡಲಾದ ದಾಖಲೆಗಳು ಫೇಕ್ ರಶೀತಿಗಳು ಎಂದು ನನಗೆ ಈಗ ತಿಳಿದುಬಂದಿದೆ. ಮತ್ತು ಆ ಬಳಿಕ, ಈ ಕಂಪೆನಿಯೂ ಫೇಕ್ ಎಂದು ನನಗೆ ತಿಳಿಯಿತು’ ಎಂದು ಶರ್ಮಾ ಹೇಳಿಕೊಂಡಿದ್ದಾರೆ. ತನಗೆ ಭರವಸೆ ನೀಡಿದ್ದ ಡಬಲ್ ಮೊತ್ತವನ್ನು 10 ತಿಂಗಳ ಬಳಿಕ ವಾಪಾಸು ನೀಡದೇ ಇದ್ದಾಗ, ತನ್ನ ಹಣದ ವಿಷಯ ಏನಾಯಿತೆಂದು ನಟಿ ವಿಚಾರಿಸಿದ ಸಂದರರ್ಭದಲ್ಲಿ ಕಂಪೆನಿ ನಷ್ಟದಲ್ಲಿದೆ ಎಂದು ಆಕೆಗೆ ಸಮಜಾಯಿಸಿ ನೀಡಲಾಗಿತ್ತು.
ಈ ಸುದ್ದಿಯನ್ನೂ ಓದಿ: Anita Anand: ಕೆನಡಾದ ಪ್ರಧಾನಿ ರೇಸ್‌ನಲ್ಲಿರುವ ಭಾರತೀಯ ಮೂಲದ ಅನಿತಾ ಆನಂದ್; ಇವರ ಹಿನ್ನೆಲೆಯೇನು?
ಇನ್ನು ಕಂಗಾಲಾದ ನಟಿ ಈ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದ ಇತರೇ ಹೂಡಿಕೆದಾರರಲ್ಲಿ ಕೇಳಿದ ಸಂದರ್ಭದಲ್ಲಿ ಅವರಿಗೂ ಇದೇ ರೀತಿಯ ಮೋಸವಾಗಿರುವುದು ಗೊತ್ತಾಗಿದೆ. ಆ ಬಳಿಕ, ನಟಿ ಆರೋಪಿಯ ಬಳಿ ತನ್ನ ಹೂಡಿಕೆ ಹಣವನ್ನಾದರೂ ಹಿಂತಿರುಗಿಸುವಂತೆ ಕೇಳಿದ್ದಾರೆ, ಆದರೆ ಆ ಬಳಿಕ ಆರೋಪಿಯು ನಟಿಯ ಕರೆಯನ್ನೇ ನಿರ್ಲಕ್ಷಿಸಲು ಪ್ರಾರಂಭಿಸಿದ್ದಾರೆ.
‘ಕಂಪೆನಿಯ ಕಚೇರಿ ಮೀರಾ ರೋಡ್ ನಲ್ಲಿದೆ ಎಂದು ಆರೋಪಿ ಹೇಳಿದ್ದರು, ಆದರೆ ಅದನ್ನೀಗ ಮುಚ್ಚಲಾಗಿದೆ’ ಎಂದು ನಟಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಇದೀಗ ಕೋಟ್ಯಂತರ ರೂಪಾಯಿ ಹಣವನ್ನು ಕಳೆದುಕೊಂಡಿರುವ ನಟಿ ಮಲಾಡ್ ನಲ್ಲಿ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಇಲ್ಲಿಂದ ಈ ಪ್ರಕರಣ ಮಲಾಡ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದೆ.