Thursday, 12th December 2024

ಕಾರಿಗೆ ಖಾಸಗಿ ಬಸ್ ಡಿಕ್ಕಿ:ಐವರ ದುರ್ಮರಣ

ತುಮಕೂರು: ಇನ್ನೋವಾ ಕಾರಿಗೆ ಖಾಸಗಿ ಬಸ್(ಕೆಎ-06-ಎಬಿ6345) ಡಿಕ್ಕಿ ಹೊಡೆದ ರಭಸಕ್ಕೆ ಒಂದೇ ಕುಟುಂಬದ ಐದು ಮಂದಿ ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಭವಿಸಿದೆ.
ತುಮಕೂರಿನ ಹಿರೇಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ನಡೆದಿದೆ. ಗೋವಿಂದ ನಾಯಕ (೫೮), ತಿಪ್ಪಮ್ಮ (೫೨), ದಿನೇಶ್, ರಾಜೇಶ್ ಹಾಗೂ ಪಿಂಕಿ ಮೃತಪಟ್ಟಿದ್ದು, ಕಡೂರು ತಾಲೂಕಿನ ಗಿರಿಯಾಪುರದ ಶ್ರೀಕಂಠಪ್ಪ (೭೮), ದಾವಣಗೆರೆಯ ಮಂಜುನಾಥ್ (೪೫), ಶಿರಾ ತಾಲೂಕಿನ ವೀರಬೊಮ್ಮನ ಹಳ್ಳಿಯ ಪುಟ್ಟಮ್ಮ (೪೫), ಕರೇತಿಮ್ಮನ ಹಳ್ಳಿಯ ಭಾಗ್ಯಮ್ಮ (೩೮), ಕರಿಯಮ್ಮ, ಮಂಜುಳ ಗಾಯಗೊಂಡವರು.
ಮೃತ ಗೋವಿಂದನಾಯಕ ಮೂಲತಃ ಚಳ್ಳಕೆರೆ ತಾಲೂಕಿನ ನಿವಾಸಿಗಳಾಗಿದ್ದಾರೆ. ಬೆಂಗಳೂರಿನ ವಿಜಯನಗರ ದಲ್ಲಿ ಪತ್ನಿ ಜತೆ ವಾಸವಿದ್ದರು.
ಬೆಂಗಳೂರಿನಿಂದ ಚಳ್ಳಕೆರೆಗೆ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಶಿರಾದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ವಿಜಯಲಕ್ಷ್ಮಿ ಖಾಸಗಿ ಬಸ್ ರಸ್ತೆ ಡಿವೈಡರ್ ತಾಗಿ  ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಂಡಿದ್ದಾರೆ.