ಬೆಂಗಳೂರು: ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ (Actor Darshan) ಜೊತೆಗೆ ಸಿಗರೇಟ್ ಪಾರ್ಟಿ ಮಾಡಿದ್ದ ಕುಖ್ಯಾತ ರೌಡಿ ನಾಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ (Wilson Garden Naga) ಸೇರಿದಂತೆ 20 ಮಂದಿ ವಿಚಾರಣಾಧೀನ ಕೈದಿಗಳನ್ನು ರಾಜ್ಯದ ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಸೆಷನ್ಸ್ ನ್ಯಾಯಾಲಯವು (Court News) ಮಂಗಳವಾರ ಅನುಮತಿ ನೀಡಿದೆ.
ನ್ಯಾಯಾಲಯದ ಆದೇಶ ಪ್ರತಿ ಬುಧವಾರ ಪೊಲೀಸರ ಕೈ ಸೇರಲಿದ್ದು, ಬಳಿಕ ರೌಡಿ ನಾಗ ಸೇರಿದಂತೆ 20 ಮಂದಿ ವಿಚಾರಣಾಧೀನ ಕೈದಿಗಳನ್ನು ರಾಜ್ಯದ ಬೇರೆ ಜೈಲುಗಳಿಗೆ ಪೊಲೀಸರು ಸ್ಥಳಾಂತರಿಸಲಿದ್ದಾರೆ. ನಾಗನನ್ನು ಕಲಬುರಗಿ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊಲೆ ಆರೋಪಿ ನಟ ದರ್ಶನ್, ರೌಡಿ ವಿಲ್ಸನ್ ಗಾರ್ಡನ್ ನಾಗ ಹಾಗೂ ಆತನ ಗ್ಯಾಂಗ್‌ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಿರುವ ಫೋಟೋ ಹಾಗೂ ವಿಡಿಯೋಗಳು ಲೀಕ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ನಗರ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಸೇರಿದಂತೆ 10 ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಿದ್ದರು.
ಈ ನಡುವೆ ರೌಡಿ ನಾಗ ಸೇರಿದಂತೆ 20 ಮಂದಿ ಆರೋಪಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಅನುಮತಿ ಕೋರಿ ನಗರ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯವು ಅನುಮತಿ ನೀಡಿ ಆದೇಶಿಸಿದೆ.
ಇದನ್ನೂ ಓದಿ: Actor Darshan: ನಟ ದರ್ಶನ್‌ಗೆ ಜೈಲೇ ಗತಿ; ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ