ಚಿಕ್ಕಬಳ್ಳಾಪುರ: ನಮ್ಮ ಪೂರ್ವಿಕರು ಬದುಕಿನ ಭಾಗವಾಗಿ ರೂಢಿಸಿಕೊಂಡು ಬಂದಿದ್ದ ಭಜನೆ,ಹಾಡು,ಕೋಲಾಟ, ದೇವರ ನಾಮದ ಸ್ತುತಿಗಳು, ಪಾಶ್ಚಾತ್ಯ ನಾಗರೀಕತೆಯ ದಾಳಿಗೆ ಸಿಕ್ಕಿ ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿ ಯಾಗಿದೆ. ಆದರೆ ಚುಂಚಶ್ರೀ ಪ್ರತಿಷ್ಠಾನದ ಚಿಕ್ಕಬಳ್ಳಾಪುರ ಜಿಲ್ಲೆಯ ಪದಾಧಿಕಾರಿಗಳು ಸಾಂಸ್ಕೃತಿಕ ಸುಗ್ಗಿಯ ಮೂಲಕ ಇವುಗಳಿಗೆ ಮರುಜೀವ ಕೊಡುತ್ತಿರುವುದು ಸಂತೋಷದ ತಂದಿದ್ದು ಇವರಿಗೆ ಭೈರವೇಶ್ವರ ಒಳಿತು ಮಾಡಲಿ ಎಂದು ಆದಿಚುಂಚನಗಿರಿ ಶಾಖಾಮಠದ ಶ್ರೀಮಂಗಳನಾಥ ಸ್ವಾಮೀಜಿ ತಿಳಿಸಿದರು.
ನಗರ ಹೊರವಲಯ ಎಸ್‌ಜೆಸಿಐಟಿ ಸಿವಿಲ್ ಇಂಜನಿಯರಿಂಗ್ ವಿಭಾಗದ ಸಭಾಂಗಣದಲ್ಲಿ ಸೋಮವಾರ ಚುಂಚಶ್ರೀ ಪ್ರತಿಷ್ಠಾನ ಚಿಕ್ಕಬಳ್ಳಾಪುರದ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಸುಗ್ಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾರೀಶಕ್ತಿಯ ಬಗ್ಗೆ ದೇಶದ ಪ್ರಧಾನಿಗಳು ಮಾತನಾಡುವ ಈ ಹೊತ್ತಿನಲ್ಲಿ ಚುಂಚಶ್ರೀ ಪ್ರತಿಷ್ಠಾನ ಚಿಕ್ಕಬಳ್ಳಾಪುರ ಘಟಕವು ನಿರ್ಮಲ ಭಾವದಲ್ಲಿ ಜಿಲ್ಲೆಯ ಮಹಿಳಾ ಕಲಾರಂಡಗಳನ್ನು ಒಂದೆಡೆ ಸೇರಿಸಿ ಅವರಲ್ಲಿ ಅಂತರ್ಗತ ವಾಗಿರುವ ಪ್ರತಿಭಾಶಕ್ತಿಯನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಪ್ರಧಾನ ಸ್ಥಾನವಿದೆ ಎಂಬುದಕ್ಕೆ ಇಲ್ಲಿನ ಗುಡಿಗುಂಡಾರ ಸಹಿತ ದೇವತಾ ನೆಲೆಗಳೇ ಸಾಕ್ಷಿ ಎಂದರು.
ಗ್ರಾಮೀಣ ಪ್ರದೇಶದಲ್ಲಿ ನಡೆಯುವ ದೇವತಾ ಕಾರ್ಯಗಳಲ್ಲಿ ಹಬ್ಬ ಹರಿದಿನಗಳಲ್ಲಿ, ಭಜನೆ ಮತ್ತು ಕೋಲಾಟಕ್ಕೆ ಹೆಚ್ಚಿನ ಮನ್ನಣೆಯಿರುವುದನ್ನು ಕಾಣಬಹುದು. ಸಮಾನ ಮನಸ್ಥಿತಿಯ ಹತ್ತಾರು ಜನ ಕೂಡಿಕೊಂಡು ಮಾಡುವ ಭಜನೆ, ಹಾಡುವ ದೇವರ ನಾಮ,ಕೋಲಾಟಗಳು ಹಳ್ಳಿಯ ಸೊಬಗನ್ನು ಸಾರುವುದಲ್ಲದೆ, ಏಕತೆಯನ್ನು ಸಾರುತ್ತವೆ. ಭಗವಂತನ ನಾಮಸ್ಮರಣೆ ಮಾಡುವುದರಿಂದ ಮಾನಸಿಕ ರೋಗಗಳು ದೂರವಾಗಿ ಮನಸ್ಸು ಶಾಂತವಾಗುತ್ತದೆ. ಆದ್ದರಿಂದ ಸಾಂಸ್ಕೃತಿಕ ಸುಗ್ಗಿಯಲ್ಲಿ ಭಾಗಿಯಾಗಿರುವ ತಾಯಂದಿರು ಪೂರ್ವಿಕರು ಬಿಟ್ಟುಹೋಗಿರುವ ಪದ್ಧತಿ ಗಳನ್ನು ಎಳೆಯ ಮಕ್ಕಳಿಗೆ ಧಾರೆಯೆರೆಯುವ ಮೂಲಕ ಭಾರತೀಯ ಸಂಸ್ಕೃತಿ ಸಂಸ್ಕಾರ ಪೊರೆಯುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಚುಂಚಶ್ರೀ ಮಹಿಳಾ ಪ್ರತಿಷ್ಟಾನ ನಡೆಸಿದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ 32 ಭಜನಾತಂಡ, 22 ಕೋಲಾಟ ತಂಡಗಳು ಭಾಗವಹಿಸಿದ್ದರು. ಈ ಪೈಕಿ, ಚಿಕ್ಕಬಳ್ಳಾಪುರ ನಗರದ ಆರ್.ಸುಬ್ಬಲಕ್ಷ್ಮೀ ಬ್ರಹ್ಮಾಚಾರಿ ನೇತೃತ್ವ ದಲ್ಲಿ ಭಾಗವಹಿಸಿದ್ದ ಜಮುನಾ, ಪುಷ್ಪಾವತಮ್ಮ, ಪಾರಿಜಾತ, ಭಾರತೀ, ವಿನೋದಲಕ್ಷ್ಮೀ, ಲತಾ, ವಾಣಿ ಅವರ ವಿಶ್ವಕರ್ಮ ಮಹಿಳಾ ತಂಡ ಎರಡನೇ ಬಹುಮಾನ ಪಡೆದರು.
ಈ ಸಂದರ್ಭದಲ್ಲಿ ಚುಂಚಶ್ರೀ ಮಹಿಳಾ ಪ್ರತಿಷ್ಠಾನದ ಜಿಲ್ಲಾ ಗೌರವಾಧ್ಯಕ್ಷೆ, ರಾಜ್ಯ ಉಪಾಧ್ಯಕ್ಷೆ ಉಷಾ ಆಂಜನೇಯರೆಡ್ಡಿ, ರಾಜ್ಯ ನಿರ್ದೇಶಕಿ ಅನಸೂಯ ಆನಂದ್, ಜಿಲ್ಲಾಧ್ಯಕ್ಷೆ ಶಾಂತಾವೆಂಕಟೇಶ್, ಚುಂಚಶ್ರೀ ಪ್ರತಿಷ್ಠಾನದ ನಿರ್ದೇಶಕಿ ಲೀಲಮ್ಮ, ಪ್ರಾಂಶುಪಾಲ ಡಾ.ರಾಜು. ಮತ್ತಿತರರು ಇದ್ದರು.
ಇದನ್ನೂ ಓದಿ: Chickballapur News: ಸಾರ್ವಜನಿಕರು ಇ-ಆಸ್ತಿ ಸಂಯೊಜನೆಯ ಸದುಪಯೋಗ ಪಡೆದುಕೊಳ್ಳಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ