Sunday, 27th October 2024

Ambedkar Statue: ರಾತ್ರೋರಾತ್ರಿ ಅಂಬೇಡ್ಕರ್ ಪ್ರತಿಮೆ ತಂದಿಟ್ಟ ಆನೇಕಲ್ ಅಂಬೇಡ್ಕರ್ ಯುವಕರ ಸಂಘ

ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಪ್ರತಿಮೆ ನಾವೇ ಇಟ್ಟಿರುವುದಾಗಿ ಒಪ್ಪಿಕೊಂಡ ರಾಜ್ಯಾಧ್ಯಕ್ಷ  

ಚಿಂತಾಮಣಿ : ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ರಾತ್ರಿ ಅಂಬೇಡ್ಕರ್ ಪ್ರತಿಮೆ ಇಟ್ಟಿರುವುದು ನಾವೇ ಎಂದು ಆನೇಕಲ್ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಯುವಕರ ಸಂಘದ ರಾಜ್ಯಾಧ್ಯಕ್ಷ ಮರಸೂರು ಎಂ.ಕೃಷ್ಣಪ್ಪ ಒಪ್ಪಿಕೊಂಡರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ಆನೇಕಲ್ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಾವೇ ಅಂಬೇಡ್ಕರ್ ಪ್ರತಿಮೆ ಯನ್ನು ಇಟ್ಟು ಹೋಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

ಹೌದು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾರ್ಗ ಫೌಂಡೇಶನ್ ಮತ್ತು ಅನಿತ ಚಾರಿಟಬಲ್ ಟ್ರಸ್ಟ್ ದತ್ತು ಪಡೆದುಕೊಂಡು ಶಾಲಾ ಅಭಿವೃದ್ಧಿಗೆ ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ನವೀಕರಣ ಕಾಮಗಾರಿ ಮುಗಿಸಿದ್ದು ಅಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಿ ಇಲಾಖೆಗೆ ಹಸ್ತಾಂತರಿಸಲು ಸಿದ್ಧವಾಗಿತ್ತು.

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಪ್ರತಿಷ್ಟಾಪಿಸಲು ವೇದಿಕೆಯನ್ನು ಸಹ ನಿರ್ಮಿಸಲಾಗಿರುತ್ತದೆ.ತಾಲ್ಲೂಕಿನ ಬಿಇಒ ಉಮಾದೇವಿ ಮತ್ತು ಉಪನಿರ್ದೇಶಕ ಬೈಲಾಂಜನಪ್ಪ ಪ್ರತಿಮೆ ಪ್ರತಿಷ್ಠಾಪನೆಗಾಗಿ ನಿರ್ಮಿಸಲಾಗಿದ್ದ ವೇದಿಕೆಯನ್ನು ತೆರವುಗೊಳಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಆದೇಶಿಸಿರುವುದರಿಂದ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಡಾ. ಬಿ.ಆರ್. ಅಂಬೇಡ್ಕರ ಪ್ರತಿಮೆಯನ್ನು ಸ್ಥಾಪಿಸಲು ಅನುಮತಿ ಕೊಡಬೇಕೆಂದು ಅಹಿಂದ ಹಾಗೂ ಪ್ರಗತಿ ಪರ ಸಂಘಟನೆಗಳ ಒಕ್ಕೂಟ, ಮಾರ್ಗ ಫೌಂಡೇಶನ್ ಮತ್ತು ಅನಿತ ಚಾರಿಟಬಲ್ ಟ್ರಸ್ಟ್ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಜಿಲ್ಲಾಧಿಕಾರಿ ಪಿ.ರವೀಂದ್ರರಿಗೆ ಮನವಿ ಸಲ್ಲಿಸಿದ್ದರು.

ಈ ಸಂಬಂಧ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಬಾಗದಲ್ಲಿಯೇ ೯೦೦ ಆಸನಗಳ ಭವ್ಯವಾದ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡುತ್ತಿದ್ದು,ಅಲ್ಲಿಯೇ ಅಂಬೇಡ್ಕರ್ ಪುತ್ಥಳಿಯನ್ನು ಸಹಾ ನಿರ್ಮಾಣ ಮಾಡುತ್ತಿರುವುದಾಗಿ ತಿಳಿಸಿದ್ದರು.

ಇದರ ನಡುವೆ ಒಂದು ವೇಳೆ ಸರ್ಕಾರ ಅನುಮತಿ ಕೊಟ್ಟರೂ ಕೊಡದೇ ಇದ್ದರೂ ನಾವು ಅಂಬೇಡ್ಕರ್ ಪುತ್ಥಳಿ ಯನ್ನು ಪ್ರತಿಷ್ಠಾಪನೆ ಮಾಡಲಾಗುವುದೆಂದು ಆಹಿಂದ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ತಿಳಿಸಿದ್ದರು.

ಬಿಇಒ ಡಿಡಿಪಿಐ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಶನಿವಾರ ರಾತ್ರಿ ವಿವಾದಾಸ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆನೇಕಲ್ ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ರಾತ್ರೋ ರಾತ್ರಿ ಅಂಬೇಡ್ಕರ್ ಪುತ್ಥಳಿಯನ್ನು ಇಟ್ಟು ಚೆರ್ಚೆಗೆ ಆಸ್ಪದ ಮಾಡಿದ್ದರು.