ಗುಬ್ಬಿ: ದೇಶದ ಪ್ರಜಾಪ್ರಭುತ್ವಕ್ಕೆ ಅರ್ಥಪೂರ್ಣ ಸಂವಿಧಾನ ರಚಿಸಿದ ಡಾ.ಅಂಬೇಡ್ಕರ್ ಅವರ ಬಗ್ಗೆ ಅವಹೇಳನ ಕಾರಿ ಹೇಳಿಕೆ ನೀಡಿದ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಅವರನ್ನು ಸಂಪುಟದಿಂದ ಕೈಬಿಟ್ಟು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಪ್ರಗತಿ ಪರ ಸಂಘಟನೆಗಳು, ಅಲ್ಪ ಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳ ಒಕ್ಕೂಟ ರಾಷ್ಟ್ರಪತಿಗಳಿಗೆ ತಾಲ್ಲೂಕು ಆಡಳಿತ ಮೂಲಕ ಪತ್ರ ಮನವಿ ಮಾಡಿದರು.
ಗುಬ್ಬಿ ಬಸ್ ಸ್ಟ್ಯಾಂಡ್ ಬಳಿ ಜಮಾಯಿಸಿದ ದಲಿತ ಸಂಘರ್ಷ ಸಮಿತಿ ನೇತೃತ್ವದ ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಸದಸ್ಯರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾ ಘೋಷಣೆ ಕೂಗಿ ಅಮಿತ್ ಷಾ ಭಾವಚಿತ್ರ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ನಂತರ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿ ತಲುಪಿದರು.
ಪ್ರತಿಭಟನಾ ಸಭೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುವ ಬಿಜೆಪಿ ಮುಖಂಡರು ಮೊದಲು ಅಧಿಕಾರಕ್ಕೆ ಬರಲು ಬಳಸಿದ್ದ ಸಂವಿಧಾನ ಚುನಾವಣೆ ಬಗ್ಗೆ ತಿಳಿದುಕೊಳ್ಳಿ. ಅಂಬೇಡ್ಕರ್ ಬರೆದ ನಿಯಮಾನುಸಾರ ಅಧಿಕಾರದಲ್ಲಿರುವ ಅಮಿತ್ ಷಾ ಅವರಿಗೆ ಜಾತೀಯತೆ ಬುದ್ಧಿ ನೆತ್ತಿಗೇರಿದೆ. ದೇವರ ಸ್ಮರಣೆ ಮಾಡಿ ಪುಣ್ಯ ಅವರೇ ಕಟ್ಟುಕೊಳ್ಳಲಿ. ನಮಗೆ ಅಂಬೇಡ್ಕರ್ ಅವರೇ ದೇವರು ಎಂಬುದು ಅರ್ಥ ಮಾಡಿಕೊಳ್ಳಬೇಕು. ದೇಶದ 75 ಭಾಗ ಜನರು ಅವರನ್ನು ಆರಾಧಿಸುತ್ತಾರೆ ಎಂದು ಕಿಡಿ ಕಾರಿ ಅಮಿತ್ ಷಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಮಾತನಾಡಿ ದೇಶಕ್ಕೆ ಸಂವಿಧಾನ ಜಾರಿಯಾದಾಗ ಅಮಿತ್ ಷಾ ಹುಟ್ಟಿರ ಲಿಲ್ಲ. ಈ ಮನುಷ್ಯ ಪ್ರಭಾವಿ ಅಲ್ಲ. ಅಧಿಕಾರ ವಾಮಮಾರ್ಗದಲ್ಲಿ ಬಂದು ಮುಸ್ಲಿಂ ಕ್ರಿಶ್ಚಿಯನ್ ವಿರೋಧಿಸಿ ಕೇವಲ ಒಂದು ಧರ್ಮಕ್ಕೆ ದೇಶ ಎಂದು ಹೇಳಿ ಕೋಮು ಗಲಭೆಗಳಿಗೆ ಕಾರಣವಾಗಿದ್ದಾರೆ. ದಲಿತರನ್ನು ಶೋಷಿತ ರನ್ನು ಮತ ಬ್ಯಾಂಕ್ ಮಾಡಿಕೊಳ್ಳಲು ಇಲ್ಲಸಲ್ಲದ ಸರ್ಕಸ್ ಮಾಡುವ ಬಿಜೆಪಿ ಅಸಲಿ ಬಣ್ಣ ಅಮಿತ್ ಷಾ ಹೊರ ಗಿಟ್ಟಿದ್ದಾರೆ. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಇಡೀ ಕೇಂದ್ರ ಸರ್ಕಾರವನ್ನು ಅಮಾನ್ಯಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಚೇಳೂರು ಶಿವನಂಜಪ್ಪ ಮಾತನಾಡಿ ದೇಶದ ಸಂವಿಧಾನ ಶಕ್ತಿ ತಿಳಿದಿದ್ದರೆ ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡುತ್ತಿರಲಿಲ್ಲ. ಮನುಸ್ಮೃತಿ ಪಾಲಕರಾದ ಅಮಿತ್ ಷಾ ಸಂವಿಧಾನದಡಿ ಬರದಿದ್ದರೆ ಗೃಹ ಮಂತ್ರಿ ಆಗುತ್ತಿರಲಿಲ್ಲ. ಯಾವುದಾದರೂ ದೇವಾಲಯದಲ್ಲಿ ಪೂಜಾರಿ ಆಗಿರುತ್ತಿದ್ದೆ ಎಂದು ಕಟುವಾಗಿ ಟೀಕಿಸಿ ದೇಶದ ಪ್ರಜಾಪ್ರಭುತ್ವ ಉಳಿಯಬೇಕಾದರೆ ಇಂತಹ ವ್ಯಕ್ತಿಯನ್ನು ಅಧಿಕಾರದಿಂದ ಕೆಳಗಿಳಿಸಿ ಎಂದು ಆಗ್ರಹಿಸಿದರು.
ದಸಂಸ ತಾಲ್ಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ ಅಮಿತ್ ಷಾ ಮೊದಲು ಸಂವಿಧಾನ ಪೀಠಿಕೆ ಓದಲಿ. ಅಲ್ಲಿನ ಸಾಮಾಜಿಕ ನ್ಯಾಯ ಬದ್ಧತೆ ಬಗ್ಗೆ ತಿಳಿಯಲಿ. ಕೇವಲ ಒಂದು ಧರ್ಮ ಬೆಂಬಲಿಸಿ ಅಧಿಕಾರ ಪಡೆಯಲು ಸಾಧ್ಯವಿಲ್ಲ. ಎಲ್ಲಾ ಜಾತಿಯ ಜನ ಮತ ಹಾಕಿದ್ದಾರೆ. ಇದಕ್ಕೆ ಅಂಬೇಡ್ಕರ್ ಸಂವಿಧಾನದ ಚುನಾವಣಾ ಪದ್ದತಿ ಕಾರಣ. ಯಾವ ದೇವರೂ ನಿಮಗೆ ಮತ ನೀಡಿಲ್ಲ. ಜಾತಿ ಭೂತದ ನಿಮ್ಮ ಕೊಳಕು ಮನಸ್ಸು ಸರಿ ಪಡಿಸಿಕೊಳ್ಳಿ. ಅದಕ್ಕೂ ಮೊದಲು ಅಧಿಕಾರದಿಂದ ಕೆಳಗಿಳಿದು ಅಂಬೇಡ್ಕರ್ ಬಗ್ಗೆ ಮತ್ತಷ್ಟು ಸ್ಟಡಿ ಮಾಡಿ ನಂತರ ಜಾತ್ಯತೀತ ಮನಸ್ಥಿತಿಗೆ ಬನ್ನಿ ಎಂದು ಛೇಡಿಸಿದರು.
ಪ್ರತಿಭಟನಾ ಮೆರವಣಿಗೆ ತಾಲ್ಲೂಕು ಕಚೇರಿ ಬಳಿ ಬಂದಾಗ ಅಮಿತ್ ಷಾ ಪ್ರತಿಕೃತಿ ದಹನ ಮಾಡಿ ಆಕ್ರೋಶದ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಪಪಂ ಸದಸ್ಯರಾದ ಮಹಮ್ಮದ್ ಸಾದಿಕ್, ಶೋಕತ್ ಆಲಿ, ಮುಖಂಡರಾದ ಗುರುರೇಣುಕಾರಾಧ್ಯ, ಕೊಡಿಯಾಲ ಮಹದೇವ್, ಜಿ.ವಿ.ಮಂಜುನಾಥ್, ತಾಪಂ ಮಾಜಿ ಸದಸ್ಯ ಕರೇತಿಮ್ಮಯ್ಯ, ಕುಂದರನಹಳ್ಳಿ ನಟರಾಜ್, ದಲಿತ್ ಗಂಗಣ್ಣ, ಅದಲಗೆರೆ ಈಶ್ವರಯ್ಯ, ಕೋಟೆ ಕಲ್ಲೇಶ್, ಮಾದಲಪುರ ಲೋಕೇಶ್, ಶಿವ ಸ್ವಾಮಿ, ಆನಂದ್, ರಂಗಸ್ವಾಮಿ, ನರಸಿಯಪ್ಪ , ರವೀಶ್, ಪಣಿಂದ್ರ ಕುಮಾರ್, ನಾಗಭೂಷಣ್, ಗ್ಯಾರಹಳ್ಳಿ ಯೋಗೇಶ್, ಮಧು, ಇಮ್ರಾನ್, ರಿಜ್ವಾನ್, ಮಂಜುಳ, ಶಿವಮ್ಮ, ಇತರರು ಇದ್ದರು.
ಇದನ್ನೂ ಓದಿ: #TumkurBreaking